Advertisement

ಎಪಿಪಿ ನೇಮಕ ಪರೀಕ್ಷೆಯ ಉತ್ತರ ಪತ್ರಿಕೆ:ಸರ್ಕಾರದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

08:29 PM Apr 26, 2022 | Team Udayavani |

ಬೆಂಗಳೂರು: ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಎಪಿಪಿ) ಹುದ್ದೆಗಳ ನೇಮಕಾತಿಗೆ 2013ರಲ್ಲಿ ನಡೆದ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರಮಾಣಿಕೃತ ಪ್ರತಿ ಒದಗಿಸಲು ರಾಜ್ಯ ಮಾಹಿತಿ ಆಯೋಗ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

Advertisement

ಈ ಕುರಿತು ರಾಜ್ಯ ಸಹಾಯಕ ಸರ್ಕಾರಿ ಪ್ಲೀಡರ್‌ ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕಾತಿ ಸಮಿತಿಯ ಸದಸ್ಯ ಕಾರ್ಯದರ್ಶಿ ಮತ್ತು ರಾಜ್ಯ ಅಭಿಯೋಜನಾ ಇಲಾಖೆ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಕೃಷ್ಣ ಭಟ್‌ ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

2013ರ ಆ.31 ಮತ್ತು ಸೆ.1ರಂದು ನಡೆದ ಎಪಿಪಿ ಮತ್ತು ಎಜಿಪಿ ನೇಮಕಾತಿಯ ಮುಖ್ಯ ಪರೀಕ್ಷೆಯನ್ನು ಜಿ. ವಿಜಯ್‌ ಕುಮಾರ್‌ ಎಂಬುವರು ಬರೆದಿದ್ದರು. ಈ ಉತ್ತರ ಪತ್ರಿಕೆಯ ನಕಲು ಪ್ರಮಾಣಿಕೃತ ಪ್ರತಿ ಒದಗಿಸುವಂತೆ ಕೋರಿ ಎಪಿಪಿ ಮತ್ತು ಎಜಿಪಿ ನೇಮಕಾತಿ ಸಮಿತಿ ಸದಸ್ಯ ಕಾರ್ಯದರ್ಶಿಗೆ ಮಾಹಿತಿ ಹಕ್ಕು ಆಯೋಗದಡಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಕಾರ್ಯದರ್ಶಿಯ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿರಸ್ಕರಿಸಿದ್ದರು.

ಇದರಿಂದ ಅರ್ಜಿದಾರರು ಮಾಹಿತಿ ಹಕ್ಕು ಆಯೋಗದ ಮುಂದೆ ಮೊದಲನೇ ಮೇಲ್ಮನವಿ ಸಲ್ಲಿಸಿದ್ದರು. ಅದೂ ಸಹ ತಿರಸ್ಕಾರಗೊಂಡ ಕಾರಣ ಆಯೋಗದ ಮುಂದೆ ಎರಡನೇ ಮೇಲ್ಮನವಿ ಸಲ್ಲಿಸಿದ್ದರು.

ಆ ಅರ್ಜಿ ಪುರಸ್ಕರಿಸಿದ್ದ ಆಯೋಗ, ವಿಜಯ್‌ ಕುಮಾರ್‌ಗೆ ಅವರ ಉತ್ತರ ಪತ್ರಿಕೆಯನ್ನು ಒಂದು ಗಂಟೆಕಾಲ ಪರಿವೀಕ್ಷಿಸಲು ಉಚಿತವಾಗಿ ಅವಕಾಶ ಮಾಡಿಕೊಡಬೇಕು ಎಂದು ಎಪಿಪಿ ಮತ್ತು ಎಜಿಪಿ ನೇಮಕಾತಿ ಸಮಿತಿಗೆ 2016ರ ಜೂ.31ರಂದು ಆದೇಶಿಸಿತ್ತು.

Advertisement

ಈ ಆದೇಶ ಪ್ರಶ್ನಿಸಿ ಸಮಿತಿ ಮತ್ತು ಅಭಿಯೋಜನಾ ಇಲಾಖೆ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದವು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಆರ್‌ಟಿಐ ಕಾಯ್ದೆಯ ಸೆಕ್ಷನ್‌ 8(1)(ಎಚ್‌) ಪ್ರಕಾರ, ಮಾಹಿತಿ ಹಕ್ಕು ಕಾಯ್ದೆಯಡಿ ಕೋರುವ ಮಾಹಿತಿಗಳು ತನಿಖೆಗೆ ಅಡ್ಡಿ ಉಂಟಾಗುತ್ತದೆ ಎಂಬ ಆತಂಕ ಮೂಡಿಸಿದಾಗ ಮಾತ್ರ ಮಾಹಿತಿ ಒದಗಿಸದೇ ಇರಬಹುದು.

ಆದರೆ, ಈ ಪ್ರಕರಣದಲ್ಲಿ ವಿಜಯ್‌ ಕುಮಾರ್‌ ಸೇರಿದಂತೆ ಎಲ್ಲಾ ಅಭ್ಯರ್ಥಿಗಳ ಮೂಲ ಉತ್ತರ ಪತ್ರಿಕೆಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಿರುವಾಗ ಉತ್ತರ ಪತ್ರಿಕೆಗಳ ನಕಲು ಪ್ರತಿಯನ್ನು ಪ್ರಮಾಣೀಕರಿಸಿ ನೀಡಿದರೆ ತನಿಖೆಯಲ್ಲಿ ಮಧ್ಯಪ್ರವೇಶ ಮಾಡಿದಂತಾಗುವುದಿಲ್ಲ. ಮೇಲಾಗಿ, ವಿಜಯ್‌ ಕುಮಾರ್‌ ತಮ್ಮ ಉತ್ತರ ಪತ್ರಿಕೆಯನ್ನು ಮಾತ್ರ ಕೇಳಿದ್ದಾರೆ. ಇತರೆ ಯಾವುದೇ ಅಭ್ಯರ್ಥಿಯ ಉತ್ತರ ಪತ್ರಿಕೆಯನ್ನು ಕೇಳಿಲ್ಲ. ಹಾಗಾಗಿ ಮಾಹಿತಿ ಹಕ್ಕು ಆಯೋಗದ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next