Advertisement

High Court: ನಿಯಮ ಉಲ್ಲಂಘನೆ: ದಂಡ ಪ್ರಮಾಣ ಹೆಚ್ಚಿಸಿ

10:14 AM Sep 12, 2023 | Team Udayavani |

ಬೆಂಗಳೂರು: ಘನ ತ್ಯಾಜ್ಯ ವಿಲೇವಾರಿ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಈಗ ವಿಧಿಸುತ್ತಿರುವ ದಂಡದ ಪ್ರಮಾಣವನ್ನು ಹೆಚ್ಚಿಸಬೇಕು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಿಮಿನಲ್‌ ಕ್ರಮ ಕೈಗೊಳ್ಳವಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಬೆಂಗಳೂರು ನಗರದಲ್ಲಿನ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 2012ರಲ್ಲಿ ಸಲ್ಲಿಕೆ ಆಗಿರುವ ವಿವಿಧ 10ಕ್ಕೂ ಅಧಿಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಹಾಗೂ ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

11ಕ್ಕೆ ವಿಚಾರಣೆ ಮುಂದೂಡಿಕೆ: ಸುದೀರ್ಘ‌ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ರಾಜ ಧಾನಿಯಲ್ಲಿ ಘನತ್ಯಾಜ್ಯ ವಿಲೇವಾರಿ ನಿಯಮ ಗಳು-2016 ಇವುಗಳನ್ನು ಉಲ್ಲಂಘಿಸಿದವರಿಗೆ ವಿಧಿಸಲಾಗುತ್ತಿರುವ ದಂಡದ ಪ್ರಮಾಣ ತೀರಾ ಕಡಿಮೆ ಇದೆ. ಕೇವಲ ದಂಡ ವಿಧಿಸಿದರಷ್ಟೇ ಸಾಲದು, ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಶಿಕ್ಷೆಗೊಳಪಡಿಸುವಂತಹ ಕಠಿಣ ಕ್ರಿಮಿನಲ್‌ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಅಕ್ಟೋಬರ್‌ 11ಕ್ಕೆ ಮುಂದೂಡಿತು.

ಕೇವಲ 11.66 ಕೋಟಿ ರೂ. ದಂಡ: ದಂಡದ ಪ್ರಮಾಣ ತೀರಾ ಕಡಿಮೆ ಇದೆ. ಅದೂ ಸರಿಯಾಗಿ ವಿಧಿಸಲಾಗುತ್ತಿಲ್ಲ. 2019ರಿಂದ 2023ರ ಈತನಕ ಘನತ್ಯಾಜ್ಯ ನಿಯಮಗಳನ್ನು ಉಲ್ಲಂಘನೆ ಮಾಡಿದ 3.84 ಲಕ್ಷ ಮಂದಿಗೆ ಕೇವಲ 11.66 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ನ್ಯಾಯಪೀಠ ಬೇಸರ ಹೊರಹಾಕಿತು.

ದಂಡದ ನಡುವೆಯೂ ಉಲ್ಲಂಘನೆ ಪ್ರಕರಣಗಳನ್ನು ಹೆಚ್ಚುತ್ತಿರುವುದು ದಂಡ ಲೆಕ್ಕಕ್ಕಿಲ್ಲ ಎಂದು ತಪ್ಪಿತಸ್ಥರು ಭಾವಿಸಿದಂತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ನ್ಯಾಯಪೀಠ ತಾಕೀತು ಮಾಡಿತು.

Advertisement

ಅಗತ್ಯ ಕ್ರಮಕೈಗೊಳ್ಳಿ: ಅಲ್ಲದೆ, ನಗರದಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿದ್ದು, ಅದರಿಂದ ಉತ್ಪಾ ದನೆ ಆಗುತ್ತಿರುವ ವೈದ್ಯಕೀಯ ತ್ಯಾಜ್ಯ ಆತಂಕವ ನ್ನುಂಟು ಮಾಡುತ್ತಿದೆ. ಹೀಗಾಗಿ ಈ ಸಂಬಂಧ ಮೆಡಿ ಕಲ್‌ ತ್ಯಾಜ್ಯ ನಿರ್ವಹಣೆ ಮಾಡುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಪೀಠ ಬಿಬಿಎಂಪಿಗೆ ಸೂಚನೆ ನೀಡಿದೆ.

ಪ್ರಕರಣದಲ್ಲಿ ಬಿಬಿಎಂಪಿ ಹಾಗೂ ಸರ್ಕಾರದೊಂದಿಗೆ ನಗರದ ವಿವಿಧ ಭಾಗಗಳ ನಿವಾಸಿಗಳ ಸಂಘಗಳು ಪ್ರತಿವಾದಿಯಾಗಿವೆ. ಅಪಾರ್ಟ್‌ಮೆಂಟ್‌ಗಳ ಮಾಲೀಕರು, ಸಹಕಾರಿ ಸಂಘಗಳ ಸದಸ್ಯರು ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕ್ರಮಕ್ಕೆ ಮುಂದಾಗಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮಾತ್ರವಲ್ಲದೇ, ಸಾರ್ವಜನಿಕರು ಭಾಗಿಯಾಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ಇದೇ ವೇಳೆ ಅಭಿಪ್ರಾಯಪಟ್ಟಿತು.

ಜತೆಗೆ, ಪ್ರಕರಣ ಸಂಬಂಧ ಈವರೆಗೂ ನೀಡಿರುವ ನಿರ್ದೇಶನಗಳನ್ನು ಪಾಲಿಸಲು ಈವರೆಗೆ ಕೈಗೊಂಡ ಕ್ರಮಗಳು ಮತ್ತು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ಪ್ರಮಾಣಪತ್ರ ಸಲ್ಲಿಸಲು ಬಿಬಿಎಂಪಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನ್ಯಾಯಪೀಠ ನಿರ್ದೇಶನ ನೀಡಿತು.

ಖಾಸಗಿ ಸಂಸ್ಥೆ ಫ್ಲೆಕ್ಸ್‌ ತೆರವು, 50 ಸಾವಿರ ದಂಡ:

ಬೆಂಗಳೂರು: ರಸ್ತೆಯ ಬದಿಯಲ್ಲಿ ಪ್ಲೆಕ್ಸ್‌ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಪಾಲಿಕೆ ಅಧಿಕಾರಿಗಳು ಇದೀಗ ದಂಡ ಪ್ರಯೋಗಕ್ಕೆ ಇಳಿದಿದ್ದಾರೆ. ರಾಜರಾಜೇಶ್ವರಿನಗರ ವಲಯದ ಹೆಮ್ಮಿಗೆ ಪುರ ವ್ಯಾಪ್ತಿಯ ತಲಘಟ್ಟಪುರ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಅಳವಡಿಕೆ ಮಾಡಲಾಗಿದ್ದ ಖಾಸಗಿ ವಸತಿ ಸಂಸ್ಥೆಯ ಫ್ಲೆಕ್ಸ್‌ಗಳನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪೂರ್ಣಿಮಾ, ಮೋತಿಲಾಲ್‌ ಚೌಹಾಣ್‌ ನೇತೃತ್ವದ ತಂಡ ತೆರವುಗೊಳಿಸಿ, 50 ಸಾವಿರ ರೂ. ದಂಡ ವಸೂಲಿ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next