ಬೆಂಗಳೂರು: ಪಟ್ಟಂದೂರು ಅಗ್ರಹಾರದಲ್ಲಿ ಪ್ರೇಸ್ಟೀಜ್ ಕಂಪೆನಿ ಖರೀದಿಸಿದ್ದ 3.23 ಎಕರೆ ಜಮೀನು ಸ್ವಾಧೀನ ಪಡೆಸಿಕೊಳ್ಳುವ ಸಂಬಂಧ ರಾಜ್ಯಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಜಾಯ್ ಐಸ್‌ಕ್ರೀಂ ಕಂಪೆನಿಯಿಂದ ಖರೀದಿಸಿದ್ದ ಜಮೀನು ವಾಪಸ್ ಪಡೆದುಕೊಳ್ಳಲು ರಾಜ್ಯಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಪ್ರಸ್ಟೀಜ್ ಎಸ್ಟೇಟ್ ಲಿಮಿಟೆಡ್ ಕಂಪೆನಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಅವರಿದ್ದ ಏಕಸದಸ್ಯ ಪೀಠ ಶುಕ್ರವಾರ ಈ ತೀರ್ಪು ನೀಡಿದೆ.
ಜಿಲ್ಲಾಧಿಕಾರಿ ಮೂಲಕ ಖರೀದಿದಾರರಿಗೆ ಭೂಮಿ ನೀಡುವಾಗ ನಿಬಂಧನೆಗಳನ್ನು ವಿಧಿಸಿದ್ದನ್ನು ಅನೂರ್ಜಿತಗೊಳಿಸುವ ಅಧಿಕಾರ ರಾಜ್ಯಸರ್ಕಾರಕ್ಕಿಲ್ಲ. ಅಲ್ಲದೆ ಸರ್ಕಾರ ಉಲ್ಲೇಖೀಸಿರುವಂತೆ ಜಮೀನಿನ ಮೂಲ ಖರೀದಿದಾರರು ವಂಚನೆ ಎಸಗಿರುವುದು ಕಂಡು ಬಂದಿಲ್ಲ .ಜೊತೆಗೆ ಅರ್ಜಿದಾರರು ಈಗಾಗಲೇ ಅಪಾರ್ಟ್‌ಮೆಂಟ್ ನಿರ್ಮಾಣ ಯೋಜನೆಗೆ ನೂರಾರು ಕೋಟಿ ಈಗಾಗಲೇ ಹೂಡಿಕೆ ಮಾಡಿದೆ. ಸಾಕಷ್ಟು ಮಂದಿ ಫ್ಲ್ಯಾಟ್ ಖರೀದಿದಾರರು ಹಣ ತೊಡಗಿಸಿದ್ದಾರೆ.
ಹೀಗಾಗಿ ಈ ಹಂತದಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳುವ ಕುರಿತು ರಾಜ್ಯಸರ್ಕಾರ ಹೊರಡಿಸಿರುವ ಆದೇಶ ಕಾನೂನು ಬಾಹಿರ ಎಂದು ನ್ಯಾಯಪೀಠ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ ಬಿಡಿಎ, ಕೆಐಎಡಿಬಿ, ಜಿಲ್ಲಾಧಿಕಾರಿ ಹಾಗೂ ರಾಜ್ಯಸರ್ಕಾರ ಕೂಡ ಕೆಲ ತಪ್ಪು ನಿರ್ಧಾರಗಳನ್ನು ಕೈಗೊಂಡಿದೆ ಎಂದು ನ್ಯಾಯಪೀಠ ತಿಳಿಸಿದೆ.
ಏನಿದು ಪ್ರಕರಣ?: ಬೆಂಗಳೂರು ಪೂರ್ವತಾಲೂಕಿನ ಪಟ್ಟಂದೂರು ಬಳಿ ಸಾಫ್ಟ್ವೇರ್ ಪಾರ್ಕ್ ನಿರ್ಮಾಣಕ್ಕೆ ಜಾಯ್ ಐಸ್ ಕ್ರೀಂ ಕಂಪೆನಿಗೆ 3.23 ಎಕರೆ ಜಮೀನನ್ನು ಅಂದಿನ ಮಾರುಕಟ್ಟೆ ಬೆಲೆಗಿಂತ ಅರ್ಧಬೆಲೆಗ ಸರ್ಕಾರ ಮುಂಜೂರು ಮಾಡಿತ್ತು. ಸರ್ಕಾರದಿಂದ ಜಮೀನು ಪಡೆದುಕೊಂಡ 4 ತಿಂಗಳಲ್ಲಿಯೇ ಜಾಯ್ ಐಸ್‌ಕ್ರೀಂ ಕಂಪೆನಿ ಜಮೀನನ್ನು ಪ್ರಸ್ಟೀಜ್ ಕಂಪೆನಿಗೆ ಲಾಭಕ್ಕೆ ಮಾರಾಟ ಮಾಡಿತ್ತು.
ಹೀಗಾಗಿ ಜಾಯ್ ಕಂಪೆನಿಯಿಂದ ಖರೀದಿಸಿದ್ದ ಜಾಗದಲ್ಲಿ ಪ್ರಸ್ಟೀಜ್ ಕಂಪೆನಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡುತ್ತಿತ್ತು. ಈ ಮಧ್ಯೆ ಕಂಪೆನಿ ಸಾಫ್ಟ್ವೇರ್ ಪಾರ್ಕ್ ನಿರ್ಮಾಣಕ್ಕೆ ಕೆಐಡಿಬಿಐಯಿಂದ ಜಮೀನು ಪಡೆದುಕೊಂಡು ಬೇರೊಂದು ಕಂಪೆನಿಗೆ ಲಾಭಕ್ಕೆ ಮಾರಾಟ ಮಾಡಿದೆ. ಸರ್ಕಾರದ ಜೊತೆಗಿನ ಒಪ್ಪಂದದ ನಿಯಮಗಳನ್ನು ಉಲ್ಲಂ ಸಿದೆ.
ಹೀಗಾಗಿ ಜಾಯ್ ಐಸ್‌ಕ್ರೀಂ ಕಂಪೆನಿಗೆ ಜಮೀನು ನೀಡಿದ್ದ ಆದೇಶವನ್ನು ಅನೂರ್ಜಿತಗೊಳಿಸಿದ್ದು, ಪ್ರಸ್ಟೀಜ್ ಕಂಪೆನಿ ಪರಭಾರೆ ಮಾಡಿಕೊಂಡಿರುವ ಜಮೀನು ವಶಕ್ಕೆ ಪಡೆದುಕೊಳ್ಳುವುದಾಗಿ 2015ರ ಆಗಸ್ಟ್ ತಿಂಗಳಲ್ಲಿ ರಾಜ್ಯಸರ್ಕಾರ ಆದೇಶಿಸಿತ್ತು. ರಾಜ್ಯಸರ್ಕಾರದ ಆದೇಶ ಪ್ರಶ್ನಿಸಿ ಪ್ರಸ್ಟೀಜ್ ಕಂಪೆನಿ ಹೈಕೋರ್ಟ್ ಮೆಟ್ಟಿಲೇರಿತ್ತು.