ಬೆಂಗಳೂರು: ರಾಜ್ಯದ ವಿವಿಧ ಕಾಲೇಜುಗಳಲ್ಲಿನ ಮನೋವಿಜ್ಞಾನ ವಿಭಾಗದ 19 ಸಹಾಯಕ ಪ್ರಾಧ್ಯಾಪಕ ಹುದ್ದೆೆಗಳ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ.
ಆದರೆ, ರಾಜ್ಯದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳಲ್ಲಿ ಖಾಲಿಯಿರುವ ಒಟ್ಟು 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಸಂಬಂಧ ನಿಗದಿಯಂತೆ ಶನಿವಾರ ಮತ್ತು ಭಾನುವಾರ (ಮಾ.12 ಮತ್ತು 13ರಂದು) ನಡೆಯಲಿದೆ.
ಪ್ರಾಣಿಶಾಸ್ತ್ರ ಹಾಗೂ ಸಸ್ಯಶಾಸ್ತ್ರ ವಿಷಯಗಳಿಗೆ ಪರಿವರ್ತಿಸಿರುವ 19 ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರ ಹುದ್ದೆೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳೂ ಪರೀಕ್ಷೆ ಬರೆಯಬಹುದು. ಆದರೆ, ಈ 19 ಹುದ್ದೆಗಳ ತಾತ್ಕಾಲಿಕ ಪಟ್ಟಿ, ಅಂತಿಮ ಪಟ್ಟ ಪ್ರಕಟ ಸೇರಿದಂತೆ ಮುಂದಿನ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಇದನ್ನೂ ಓದಿ:ಬಿಪಿಎಲ್ ಕಾರ್ಡ್ ಹೊಂದಲು ಆದಾಯ ಮಿತಿ 1.20 ಲಕ್ಷಕ್ಕೆ ಹೆಚ್ಚಳ: ಸೋಮಣ್ಣ
ರಾಜ್ಯದ ವಿವಿಧ ಕಾಲೇಜುಗಳಲ್ಲಿನ ಮನೋವಿಜ್ಞಾನ ವಿಭಾಗದ 19 ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳಿಗೆ ಪರಿವರ್ತಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ಕ್ರಮ ಪ್ರಶ್ನಿಸಿ ಬೆಂಗಳೂರಿನ ಡಾ. ಎನ್. ಮೀನಾಕ್ಷಿ ಸೇರಿ 10ಕ್ಕೂ ಅಧಿಕ ಸಹಾಯಕ ಪ್ರಾಧ್ಯಾಪಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಜಿ. ನರೇಂದರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಈ ಆದೇಶ ನೀಡಿದೆ.
ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಮನೋವಿಜ್ಞಾನ ವಿಷಯದಿಂದ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳಿಗೆ ಪರಿವರ್ತನೆಗೊಂಡಿದ್ದ 19 ಹುದ್ದೆಗಳಿಗೆ ಸಂಬಂಧಿಸಿದ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಿ, ವಿಚಾರಣೆಯನ್ನು ಏ.4ಕ್ಕೆ ಮುಂದೂಡಿದೆ.