Advertisement

ಅಧಿಕಾರಿಗಳ ಅಮಾನತು ಆದೇಶಕ್ಕೆ ಹೈ ಕೋರ್ಟ್‌ ತಡೆ

11:51 AM Jul 04, 2017 | Team Udayavani |

ಬೆಂಗಳೂರು: ನೋಟಿಸ್‌ ನೀಡದೆ ಕಾಂಪೌಂಡ್‌ ಕೆಡವಿದ ಪ್ರಕರಣದಲ್ಲಿ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಡಿ.ಬಿ. ನಟೇಶ್‌ ಹಾಗೂ ಬೆಂಗಳೂರು ದಕ್ಷಿಣ ತಾಲೂಕ ತಹಶೀಲ್ದಾರ್‌ ಎಸ್‌.ಎ ಶಿವಕುಮಾರ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್‌ ಏಕಸದಸ್ಯಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯಪೀಠ ಸೋಮವಾರ ತಡೆಯಾಜ್ಞೆ ನೀಡಿದೆ. 

Advertisement

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ರವಿ ಅವರಿದ್ದ ಏಕಸದಸ್ಯಪೀಠ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಜೂ.14ಕ್ಕೆ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.

ಸೋಮವಾರ (ಜು.3) ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ಹಾಗೂ ನ್ಯಾ. ಪಿ.ಎಸ್‌. ದಿನೇಶ್‌ ಅವರಿದ್ದ ವಿಭಾಗೀಯಪೀಠ, ಅಧಿಕಾರಿಗಳ ಅಮಾನತು ಆದೇಶ ಕಾನೂನುಬಾಹಿರವಾಗಿದ್ದು, ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂಬ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಮನವಿಯನ್ನು ಪುರಸ್ಕರಿಸಿ ವಿಭಾಗೀಯ ಪೀಠ ಈ ಆದೇಶ ನೀಡಿತು. 

ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕಂದಾಯ ಇಲಾಖೆ ಕಾರ್ಯದರ್ಶಿ, ಬೆಂಗಳೂರು ಜಿಲ್ಲಾಧಿಕಾರಿ, ದಕ್ಷಿಣ ಉಪವಿಭಾಗಾಧಿಕಾರಿ ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್‌ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯಪೀಠ, ಪ್ರಕರಣದ ವಿಚಾರಣೆ ಮುಂದುವರಿಸದಂತೆ ಏಕಸದಸ್ಯಪೀಠವನ್ನು ಕೋರಿದೆ.

ಅಲ್ಲದೇ ಏಕಸದಸ್ಯಪೀಠದ ಮುಂದೆ ತಕರಾರು ಅರ್ಜಿ ಸಲ್ಲಿಸಿರುವ ಎಸ್‌.ಸಿ. ಗೋಕರ್ಣ ಮತ್ತು ಇತರೆ ಪ್ರತಿವಾದಿಗಳಾದ ಬೆಂಗಳೂರು ಮೆಟ್ರೋ ರೈಲು ನಿಗಮ ಹಾಗೂ ಕೆಎಐಡಿಬಿ ಭೂಸ್ವಾಧೀನ ಅಧಿಕಾರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಜು.10ಕ್ಕೆ ಮುಂದೂಡಿತು.

Advertisement

ಅಷ್ಟಕ್ಕೂ ಏನು ಈ ಘಟನೆ? 
ಜೆ.ಪಿ. ನಗರದ 9ನೇ ಹಂತದ ಕೊತ್ತನೂರಿನಲ್ಲಿ ಸುಮಾರು 57 ಎಕರೆ ವ್ಯಾಜ್ಯದ ಜಮೀನಿನಲ್ಲಿ, ಎಸ್‌.ಸಿ.ಗೋಕರ್ಣ ಎಂಬುವರಿಗೆ ಸೇರಿದೆ ಎನ್ನಲಾದ ಜಮೀನಿನ ಸುತ್ತ ಕಾಂಪೌಂಡ್‌ ನಿರ್ಮಿಸಲಾಗಿದೆ. ಆದರೆ, ಒತ್ತುವರಿ ಆರೋಪದ ಮೇಲೆ ಕಾಂಪೌಂಡ್‌ ತೆರವುಗೊಳಿಸಲು ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ಮೇ 26ರಂದು ಆದೇಶಿಸಿ, ಮೇ 27ರಂದೇ ಈ ಕಾಂಪೌಂಡ್‌ ಕೆಡವಿದ್ದರು.

ಇದನ್ನು ಪ್ರಶ್ನಿಸಿ ತಕರಾರು ಅರ್ಜಿ ಸಲ್ಲಿಸಿದ್ದ ಗೋಕರ್ಣ, ಯಾವುದೇ ನೋಟಿಸ್‌ ಕೊಡದೆ ಕಾಂಪೌಂಡ್‌ ತೆರವುಗೊಳಿಸಲಾಗಿದೆ ಎಂದು ದೂರಿದ್ದರು. ವಿಚಾರಣೆ ನಡೆಸಿದ್ದ ನ್ಯಾ. ರವಿ ಮಳೀಮಠ ಅವರಿದ್ದ ಏಕಸದಸ್ಯ ಪೀಠ, ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್‌ ಎಸ್‌.ಎ. ಶಿವಕುಮಾರ್‌ ಮತ್ತು ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಡಿ.ಬಿ.ನಟೇಶ್‌  ಅವರನ್ನು ಸೇವೆಯಿಂದ ಅಮಾನುಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿ ಜೂ.14ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅಧಿಕಾರಿಗಳು ವಿಭಾಗೀಯಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next