ಬೆಂಗಳೂರು: ರಾಜ್ಯದ ಖಾಸಗಿ ಫಾರ್ಮಸಿ ಕಾಲೇಜುಗಳಲ್ಲಿ ಸ್ನಾತಕೋತ್ತರ ಮತ್ತು ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಸರ್ಕಾರಿ ಮತ್ತು ಆಡಳಿತ ಮಂಡಳಿ ಸೀಟುಗಳ ಅನುಪಾತವನ್ನು ಶೇ.50:50 ರಂತೆ ನಿಗದಿಪಡಿಸಿರುವುದನ್ನು ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿದೆ.
ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 2017-18ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಾಜ್ಯದ ಖಾಸಗಿ ಫಾರ್ಮಸಿ ಕಾಲೇಜುಗಳಲ್ಲಿ ಸ್ನಾತಕೋತ್ತರ ಮತ್ತು ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಸರ್ಕಾರಿ ಮತ್ತು ಆಡಳಿತ ಮಂಡಳಿಯ ಸೀಟುಗಳ ಅನುಪಾತವನ್ನು ಶೇ.50:50 ರಂತೆ ನಿಗದಿಪಡಿಸಿತ್ತು. ಆದರೆ, ಆದೇಶ ಪ್ರಶ್ನಿಸಿ ಖಾಸಗಿ ಫಾರ್ಮಸಿ ಶೈಕ್ಷಣಿಕ ಸಂಸ್ಥೆಯವರು
ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ದೂರುದಾರರ ಎಲ್ಲ ಅರ್ಜಿಗಳನ್ನು ವಜಾಗೊಳಿಸಿ, ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ 2017-18ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ ರಾಜ್ಯದ ಖಾಸಗಿ ಫಾರ್ಮಸಿ ಕಾಲೇಜುಗಳಲ್ಲಿನ ಸ್ನಾತಕೋತ್ತರ ಮತ್ತು ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಸರ್ಕಾರಿ ಮತ್ತು ಆಡಳಿತ ಮಂಡಳಿಯ ಸೀಟುಗಳ ಅನುಪಾತವನ್ನು ಶೇ.50:50 ರಂತೆ ನಿರ್ಧರಿಸಿ ಸೀಟು ಹಂಚಿಕೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕ್ರಮ ವಹಿಸುತ್ತದೆ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.