ಕಲಬುರಗಿ: ಬಿಸಿಲು ನಾಡು ಎಂದೇ ಖ್ಯಾತಿ ಪಡೆದಿರುವ ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ದಿನೇ-ದಿನೇ ಬಿಸಿಲಿನ ತಾಪ ಹೆಚ್ಚಳವಾಗುತ್ತಿದ್ದು, ಕಳೆದ ವರ್ಷಕ್ಕಿಂತ ಕನಿಷ್ಠ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲು ಹೆಚ್ಚಳವಾಗಿದ್ದರಿಂದ ಜನ ಕಂಗಾಲಾಗಿದ್ದು, ಮಧ್ಯಾಹ್ನ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.
ಶನಿವಾರ ಕಲಬುರಗಿಯಲ್ಲಿ 42.7 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದೆ. ಇದು ರಾಜ್ಯದಲ್ಲಿಯೇ ಅತ್ಯಧಿಕ ತಾಪಮಾನ. ಅಲ್ಲದೇ ಇದು ಕಳೆದ ವರ್ಷಕ್ಕಿಂತ 2. 7 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದೆ.
ಅದೇ ರೀತಿ ಬಳ್ಳಾರಿಯಲ್ಲಿ 42 ಡಿಗ್ರಿ ಸೆಲ್ಸಿಯಸ್, ರಾಯಚೂರಿನಲ್ಲಿ 40.5 ಡಿಗ್ರಿ ಸೆಲ್ಸಿಯಸ್, ಕೊಪ್ಪಳದಲ್ಲಿ 39.9 ಡಿಗ್ರಿ ಸೆಲ್ಸಿಯಸ್, ವಿಜಯಪುರದಲ್ಲಿ 41 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದೆ.ಮುಂಜಾನೆ 8 ಗಂಟೆ ಆಗುತ್ತಿದ್ದಂತೆ ತಾಪಮಾನ ಹೆಚ್ಚಳವಾಗುತ್ತಾ ಮಧ್ಯಾಹ್ನದ ಹೊತ್ತಿಗೆ ಹೊರಗೆಬಾರದಿರುವ ಮಟ್ಟಿಗೆ ಝಳ ವಿಪರೀತಗೊಳ್ಳುತ್ತದೆ.
ಕೆಂಡದಂತಹ ಬಿಸಿಲಿಗೆ ಜನ ಮಧ್ಯಾಹ್ನ 12ರ ನಂತರ ಹೊರಗೆ ಬಾರದೇ ಇರುವ ಹಿನ್ನೆಲೆಯಲ್ಲಿ ರಸ್ತೆಗಳೆಲ್ಲ ಬಿಕೋ ಎನ್ನುತ್ತಿರುತ್ತವೆ. ಗಾಡಿ ಮೇಲೆ ತಿರುಗಾಡಿದರೂ ಕಣ್ಣುಗಳು ಕುಕ್ಕುತ್ತಿರುತ್ತವೆ. ಬಿಸಿಲು ಒಂದೆಡೆ ಉಗ್ರ ಪ್ರತಾಪ ತೋರುತ್ತಿದ್ದರೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಮುಂಗಾರು ಹಂಗಾಮು ಬಿತ್ತನೆ ಹೊತ್ತಿಗೆ ಹೊಲ ರಂಟೆ ಹೊಡೆದು ಬಿತ್ತನೆಗೆ ಭೂಮಿ ಯೋಗ್ಯ ಮಾಡಲು ರೈತ ಎತ್ತುಗಳೊಂದಿಗೆ ಹೊಲಕ್ಕೆ ಹೋದರೆ ಬೆಳಗ್ಗೆ 10:00 ಗಂಟೆ ನಂತರ ರಂಟೆ ಹೊಡೆಯಲು ಬಾರದಿರುವ ಮಟ್ಟಿಗೆ ಭೂಮಿ ಬಿಸಿಗೊಳ್ಳುತ್ತಿದೆ.
ಎಳ ನೀರಿನ ದರ ಏರಿಕೆ: ಬಿರು ಬೇಸಿಗೆ ಹಿನ್ನೆಲೆಯಲ್ಲಿ ಎಳ ನೀರು ದರ ಒಮ್ಮೆಲೆ 10 ರೂ.ಹೆಚ್ಚಳವಾಗಿದೆ. ಇಷ್ಟು ದಿನ 30 ರೂ.ಗೆ ಇದ್ದ ಎಳೆ ನೀರು 40 ರೂ. ಗೆ ಮಾರಾಟವಾಗುತ್ತಿದೆ. ಮಣ್ಣಿನ ಗಡಿಗೆಗಳಿಗೂ ಬೇಡಿಕೆ ಬಂದಿದೆ. ಬಿಸಿಲಿನ ಜಳಕ್ಕೆ ಈಗಾಗಲೇ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ.
ಕಲಬುರಗಿಯಲ್ಲಿ 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ ಮಹಾನಗರದ ರಸ್ತೆಗಳಿಗೆ ನೀರು ಚಿಮ್ಮಿಸಲು ಉದ್ದೇಶಿಸಲಾಗಿದೆ. ದಿನಾಲು ಬಿಸಿಲನ್ನು ಅವಲೋಕಿಸಲಾಗುತ್ತಿದೆ. ಹೊಸದಾಗಿ ಮಾಡಲಾದ ರಸ್ತೆಗಳಿಗೆ ನೀರು ಚಿಮ್ಮಿಸಲಾಗುತ್ತಿದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸಬೇಕು.
– ಪಿ. ಸುನೀಲಕುಮಾರ, ಆಯುಕ್ತರು,
ಮಹಾನಗರ ಪಾಲಿಕೆ, ಕಲಬುರಗಿ
– ಹಣಮಂತರಾವ ಭೈರಾಮಡಗಿ