Advertisement

ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ

03:27 PM Sep 05, 2018 | |

ಬೀಳಗಿ: ಸ್ಥಳೀಯ ಪಪಂ 18 ಸ್ಥಾನಗಳ ಪೈಕಿ 12ರಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದು, ಆಡಳಿತ ಚುಕ್ಕಾಣಿ ಹಿಡಿಯಲಿದೆ.ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಸಹಜವಾಗಿಯೇ ಪೈಪೋಟಿ ಹೆಚ್ಚಿದೆ. ಅದೃಷ್ಟ ಯಾರಿಗೆ ಒಲಿಯಲಿದೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ. ಪಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಸ್ಥಳೀಯವಾಗಿ ಬಿಜೆಪಿ ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಿರುವ ಶಾಸಕ ಮುರುಗೇಶ ನಿರಾಣಿ, ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ವಿಚಾರದಲ್ಲಿಯೂ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಲಕ್ಷಣಗಳಿವೆ. ಶಾಸಕ ಮುರುಗೇಶ ನಿರಾಣಿ ತೆಗೆದುಕೊಳ್ಳುವ ನಿರ್ಧಾರವೇ ಇಲ್ಲಿ ಅಂತಿಮವಾದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಷ್ಟೇ ಪ್ರಮುಖವಾಗಿದೆ.

Advertisement

ವಿಠ್ಠಲಗೆ ಒಲಿಯುವುದೇ ಪಟ್ಟ: ನಗರದ 3ನೇ ವಾರ್ಡ್ನಿಂದ ಗಾಣಿಗ ಸಮುದಾಯದಿಂದ ಆಯ್ಕೆಯಾಗಿರುವ ಏಕೈಕ (ಸಾಮಾನ್ಯ ಪುರುಷ) ಬಿಜೆಪಿ ಸದಸ್ಯ ವಿಠ್ಠಲ ಬಾಗೇವಾಡಿ ಅವರಿಗೆ ಅಧ್ಯಕ್ಷ ಸ್ಥಾನದ ಅದೃಷ್ಟ ಒಲಿಯಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಗಾಣಿಗ ಸಮಾಜ ಸದಾ ಬಿಜೆಪಿಯೊಂದಿಗೆ ಗುರುತಿಸಿಕೊಂಡು ಬಂದಿರುವುದೇ ಕಾರಣ. ಕಳೆದ ವಿಧಾನಸಭೆಯಲ್ಲಿ ಬಿಜೆಪಿಯಿಂದ ಮುರುಗೇಶ ನಿರಾಣಿ ಶಾಸಕರಾಗಿ ಆಯ್ಕೆಯಾಗುವಲ್ಲಿ ಗಾಣಿಗ ಸಮಾಜದ ಪಾತ್ರ
ಪ್ರಮುಖ ಎನ್ನುವುದು ಅಲ್ಲಗಳೆಯುವಂತಿಲ್ಲ. ಗಾಣಿಗ ಸಮಾಜಕ್ಕೆ ಮೊದಲ ಆದ್ಯತೆ ದೊರೆತಿದ್ದೇ ಆದರೆ ವಿಠ್ಠಲ ಬಾಗೇವಾಡಿ ಅಧ್ಯಕ್ಷ ಸ್ಥಾನಕ್ಕೇರುವುದು ನಿಶ್ಚಿತ ಎಂದು ವಿಶ್ಲೇಷಿಸಲಾಗುತ್ತಿದೆ.

ಆಕಾಂಕ್ಷಿಗಳೇ ಹೆಚ್ಚು: ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕಾರಣ, ಸಹಜವಾಗಿಯೇ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದೆ. ಶಾಸಕ ಮುರುಗೇಶ ನಿರಾಣಿ ಸೇರಿದಂತೆ ಪಕ್ಷದ ಮುಖಂಡರಿಗೂ ಇದು ತಲೆನೋವಿನ ವಿಚಾರ. ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿಯೊಡ್ಡುವ ಹಲವರಿಗೆ ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಸ್ಥಾನದ ಅಧಿಕಾರ ಹಂಚಿಕೆ ಮಾಡುವ ವಿಚಾರ ಮುಂದಿಟ್ಟು ಸಮಾಧಾನಪಡಿಸಬಹುದು ಎನ್ನಲಾಗುತ್ತಿದೆ.

ಉಪಾಧ್ಯಕ್ಷ ಸ್ಥಾನ ಯಾರಿಗೆ?: ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನ ಪ್ರಬಲ ಕುರುಬ ಸಮುದಾಯದ ಬಿಜೆಪಿ ಸದಸ್ಯೆ ಕಲಾವತಿ ಗಡ್ಡದವರ ಅಥವಾ ಅಲ್ಪಸಂಖ್ಯಾತ ಸಮುದಾಯದ ಯಾಸ್ಮಿನ್‌ ಬಾಗವಾನ್‌ ಅವರಿಗೆ ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಗುಳೇದಗುಡ್ಡ: ಪಟ್ಟಣದ ಪುರಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದೆ. ಪುರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ನಲ್ಲಿ ಪೈಪೋಟಿ ಹೆಚ್ಚಿದೆ. ಚುನಾವಣೆ ಆಯೋಗ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಅ ಮೀಸಲಾತಿ ಪ್ರಕಟಿಸಿದ್ದು, ಅಧ್ಯಕ್ಷ ಸ್ಥಾನಕ್ಕಿಂತ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚು ಆಕಾಂಕ್ಷಿಗಳಿದ್ದಾರೆ.

Advertisement

ಸದ್ಯ 11ನೇ ಡಿವಿಜನ್‌ನ ಕಾಂಗ್ರೆಸ್‌ ಸದಸ್ಯೆ ವಿದ್ಯಾ ಮುರಗೋಡ ಹಿಂದುಳಿದ ವರ್ಗ ಬ ಮೀಸಲಾತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಮೀಸಲಾತಿ ಪ್ರಕಾರ ಅವರೇ ಅಧ್ಯಕ್ಷರಾಗುವ ಸಾಧ್ಯತೆಗಳಿವೆ. ಆದರೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿಯೂ ಈ ವರ್ಗಕ್ಕೆ ಸೇರಿದವರಿದ್ದರೆ ಅವರು ಕೂಡ ಆಕಾಂಕ್ಷಿಗಳ ಪಟ್ಟಿಗೆ ಸೇರುತ್ತಾರೆ. ಪಕ್ಷದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದ್ದರೂ ಕಾಂಗ್ರೆಸ್‌ ಮುಖಂಡರು ಇದುವರೆಗೂ ತಲೆಕೆಡಿಸಿಕೊಂಡಿಲ್ಲ.

ಪ್ರಸ್ತುತ ಅಧ್ಯಕ್ಷ ಸ್ಥಾನಕ್ಕೆ ವಿದ್ಯಾ ಮುರಗೋಡ, ವಂದನಾ ಭಟ್ಟಡ, ವಿಠ್ಠಲ ಸಾ ಕಾವಡೆ ಹೆಸರು ಕೇಳಿ ಬರುತ್ತಿವೆ. ಆದರೆ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ಬದ್ಧ ಎಂಬ ಮಾತುಗಳು ಆಕಾಂಕ್ಷಿಗಳಿಂದ ಬರುತ್ತಿವೆ. ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಅ ಮೀಸಲಾತಿ ಇರುವುದರಿಂದ ಅನೇಕರು ಆಕಾಂಕ್ಷಿಯಾಗುವ ಬಗ್ಗೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಶರೀಫಾ ಮಂಗಳೂರು, ರಫೀಕ್‌ ಕಲಬುರ್ಗಿ, ಯಲ್ಲವ್ವ ಗೌಡ್ರ, ಶ್ಯಾಮ ಮೇಡಿ ಹೆಸರು ಉಪಾಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ.

ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ. ಪಕ್ಷದ ಮುಖಂಡರು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧ. ಪಕ್ಷ ಅವಕಾಶ ಕೊಟ್ಟರೆ ಅಧ್ಯಕ್ಷೆಯಾಗಿ ಜನರ ಸೇವೆ ಮಾಡುತ್ತೇನೆ.
ವಿದ್ಯಾ ಮುರಗೋಡ,
ಪುರಸಭೆ ಸದಸ್ಯೆ.

Advertisement

Udayavani is now on Telegram. Click here to join our channel and stay updated with the latest news.

Next