Advertisement

ಕೈ ನಾಯಕರ ವಿರುದ್ಧ ಹೈಕಮಾಂಡ್‌ ಗರಂ

06:50 AM Dec 03, 2018 | Team Udayavani |

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ರಾಜ್ಯದಲ್ಲಿ ನಿರೀಕ್ಷಿತ ಗುರಿ ಮುಟ್ಟದೇ ವಿಫ‌ಲವಾಗಿರುವ ಬಗ್ಗೆ ಹೈಕಮಾಂಡ್‌ ನಾಯಕರು ರಾಜ್ಯ ನಾಯಕರ ವಿರುದ್ಧ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

ರಾಹುಲ್‌ ಗಾಂಧಿ ಅವರೊಂದಿಗೆ ಪಕ್ಷದ ತಳ ಮಟ್ಟದ ಕಾರ್ಯಕರ್ತರು ನೇರ ಸಂಪರ್ಕ ಹೊಂದುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿರುವುದರಿಂದ ಈ ಯೋಜನೆ ಅನುಷ್ಠಾನಗೊಳಿಸಲು ನಿರ್ಲಕ್ಷ್ಯ ತೋರುವ ಮುಖಂಡರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಲ್ಲದೇ ಸಚಿವ ಸ್ಥಾನದ ಆಕಾಂಕ್ಷಿಗಳು ತಮ್ಮ ಕ್ಷೇತ್ರಗಳಲ್ಲಿ ಯೋಜನೆ ಯಶಸ್ವಿಗೊಳಿಸಿರುವ ಬಗ್ಗೆ ದಾಖಲೆ ತೋರಿಸಬೇಕು ಎಂಬುದಾಗಿ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ರಾಜ್ಯಗಳಲ್ಲಿ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ, ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಮಧ್ಯಪ್ರದೇಶದಲ್ಲಿ 6 ಲಕ್ಷ, ರಾಜಸ್ಥಾನದಲ್ಲಿ 7 ಲಕ್ಷ, ಚಿಕ್ಕ ರಾಜ್ಯವಾಗಿರುವ ಛತ್ತೀಸ್‌ಗಢ 4.5 ಲಕ್ಷ ಸದಸ್ಯತ್ವ ನೋಂದಣಿಯಾಗಿದೆ. ಆದರೆ, ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದರೂ ಪಕ್ಷದ ಯೋಜನೆಯನ್ನು ಗಂಭೀರವಾಗಿ ಪರಿಗಣಿಸದೇ ಕೇವಲ ಅಧಿಕಾರ ಅನುಭವಿಸುವ ನಾಯಕರ ಬಗ್ಗೆ ಶಿಸ್ತು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ಹೈ ಕಮಾಂಡ್‌ ನೀಡಿದೆ ಎಂದು ತಿಳಿದು ಬಂದಿದೆ.

ಜುಲೈ 29ರಂದು ಆರಂಭವಾಗಿರುವ ಶಕ್ತಿ ಯೋಜನೆಗೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರು ರಾಜ್ಯದಲ್ಲಿ ಚಾಲನೆ ನೀಡಿದ್ದರು. ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಮೂರು ತಿಂಗಳಲ್ಲಿ ರಾಜ್ಯದಲ್ಲಿ 50 ಲಕ್ಷ ಸದಸ್ಯರನ್ನು ನೋಂದಣಿ ಮಾಡುವುದಾಗಿ ಹೇಳಿದ್ದರು. ಆದರೆ, ಕಳೆದ ನಾಲ್ಕು ತಿಂಗಳಲ್ಲಿ ಕೇವಲ 3 ಲಕ್ಷ ಸದಸ್ಯತ್ವ ನೋಂದಣಿ ಮಾಡಿಸಲಾಗಿದೆ. ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮತ್ತೆ ಹದಿನೈದು ದಿನ ಅವಧಿ ವಿಸ್ತರಣೆ ಮಾಡಲಾಗಿದೆ.

Advertisement

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಆರ್‌.ವಿ. ದೇಶಪಾಂಡೆ, ಶಿವಾನಂದ ಪಾಟೀಲ್‌, ಶಿವಶಂಕರ ರೆಡ್ಡಿ, ವೆಂಕಟರಮಣಪ್ಪ, ಪ್ರಿಯಾಂಕ್‌ ಖರ್ಗೆ, ಪುಟ್ಟರಂಗಶೆಟ್ಟಿ ಅವರ ಕ್ಷೇತ್ರಗಳಲ್ಲಿಯೂ ನಿರೀಕ್ಷಿತ ಗುರಿ ಮುಟ್ಟಿಲ್ಲ ಎಂಬುದನ್ನು ಪಟ್ಟಿ ಮಾಡಿ ಹೈ ಕಮಾಂಡ್‌, ರಾಜ್ಯ ನಾಯಕರಿಗೆ ಕಳುಹಿಸಿ ಕೊಟ್ಟಿದೆ ಎನ್ನಲಾಗಿದೆ. ಅಧಿಕಾರ ದೊರೆತಿದ್ದರೂ ಕೆಲವು ಸಚಿವರು ಯೋಜನೆ ಅನುಷ್ಠಾನಕ್ಕೆ ನಿರುತ್ಸಾಹ ತೋರಿರುವ ಬಗ್ಗೆ ರಾಹುಲ್‌ ಗಾಂಧಿ ಕಿಡಿ ಕಾರಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೇ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ, ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್‌ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವುದನ್ನೂ ಹೈ ಕಮಾಂಡ್‌ ನಾಯಕರು ಗಮನಿಸಿದ್ದಾರೆ.
ಹಾಸನ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಸಾಧನೆ ಮಟ್ಟ ಅತ್ಯಂತ ಕಳಪೆಯಾಗಿದ್ದು, ಅರಸೀಕೆರೆ, ಬೇಲೂರು, ಹೊಳೆ ನರಸೀಪುರ, ಅರಕಲಗೂಡು ತಾಲೂಕುಗಳಲ್ಲಿ ಶೇ. 15ರಷ್ಟೂ ಸದಸ್ಯತ್ವ ನೋಂದಣಿಯಾಗಿಲ್ಲ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಶೇ. 20ರಷ್ಟು ಪ್ರಗತಿ ಸಾಧಿಸಿದ್ದು, ಉಳಿದ ಕ್ಷೇತ್ರಗಳಲ್ಲಿ ಶೇ. 50ರಷ್ಟೂ ಶಕ್ತಿ ಯೋಜನೆಯ ಸದಸ್ಯತ್ವ ನೋಂದಣಿಯಾಗದಿರುವುದು ಹೈಕಮಾಂಡ್‌ ಗಮನಕ್ಕೆ ಬಂದಿದೆ. ಆ ಜಿಲ್ಲೆಗಳಲ್ಲಿಯೂ ಹೆಚ್ಚಿನ ಸದಸ್ಯರ ನೋಂದಣಿಗೆ ಒತ್ತು ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ರಾಹುಲ್‌ ಗಾಂಧಿ ಅವರ ಶಕ್ತಿ ಯೋಜನೆ ರಾಜ್ಯ ನಾಯಕರ ನಿದ್ದೆಗೆಡಿಸಿದ್ದು, ಯೋಜನೆ ಯಶಸ್ವಿಗೊಳಿಸಲು ಉಸ್ತುವಾರಿ ಕಾರ್ಯದರ್ಶಿಗಳಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದ್ದಾರೆ ಎಂದು  ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next