Advertisement
ಬೆಳಗಾವಿ ತಾಲೂಕಿನ ಕೆ. ಕೆ. ಕೊಪ್ಪ ಗ್ರಾಮದ ಗದಿಗೆಯ್ಯ ನಿಂಗಯ್ಯ ಹಿರೇಮಠ ಉಳಿದವರಂತಲ್ಲ. ಈತ ಕೃಷಿಯ ಜೊತೆಗೆ ಹೈನುಗಾರಿಕೆ ಮಾಡುತ್ತಿದ್ದಾರೆ. ಹಾಲಿನ ಮೌಲ್ಯವರ್ಧನೆ ಮಾಡಿ ಲಾಭ ಗಳಿಸುತ್ತಿದ್ದಾರೆ. ಇವರದು ಎಳು ಎಕರೆ ಜಮೀನು. ಪ್ರತಿ ವರ್ಷ ಜೂನ್ ವೇಳೆಗೆ ನಾಲ್ಕು ಎಕರೆಯಷ್ಟು ಸೋಯಾಬಿನ್ ಬಿತ್ತುತ್ತಾರೆ. ಉಳಿದ ಮೂರು ಎಕರೆಯಲ್ಲಿ ತರಕಾರಿ ಬೆಳೆಯುತ್ತಾರೆ. ಸೋಯಾ ಕೊಯ್ಲು ಮುಗಿದ ನಂತರ ಈ ಭೂಮಿಯನ್ನು ತರಕಾರಿ ಬೆಳೆಯಲು ಉಪಯೋಗಿಸಿಕೊಳ್ಳುತ್ತಾರೆ. ಇವರ ಹೊಲದಲ್ಲಿ ವರ್ಷಪೂರ್ತಿ ವೈವಿಧ್ಯಮಯ ತರಕಾರಿ ಬೆಳೆಗಳು ಲಭ್ಯವಿರುತ್ತದೆ.
Related Articles
Advertisement
ಸುರ್ತಿ, ಮುರ್ರಾ ತಳಿಯ ಒಂದೊಂದು ಎಮ್ಮೆಯನ್ನು ಹಾಗೂ ಎಚ್.ಎಫ್ ತಳಿಯ ಒಂದು ಆಕಳನ್ನು ಹೊಂದಿದ್ದಾರೆ. ದಿನಕ್ಕೆ 25-30 ಲೀಟರ್ ಹಾಲು ದೊರೆಯುತ್ತದೆ. ಎಲ್ಲವೂ ಕೋವಾ ತಯಾರಿಕೆಗೆ ಬಳಕೆಯಾಗುತ್ತದೆ. ಬೆಳಗ್ಗೆ 180-200 ಲೀಟರ್, ಸಂಜೆ-180 ಲೀಟರ್ ಹಾಲು ಸಂಗ್ರಹವಾಗುತ್ತದೆ. ಇವರು ಹಾಲು ಪಡೆಯಬೇಕೆಂದರೆ ಕಟ್ಟು ನಿಟ್ಟಿನ ನಿಯಮವೊಂದಿದೆ. ಜಾನುವಾರಿನ ಬಳಿ ಇವರಿದ್ದಾಗ ಮಾತ್ರ ಹಾಲು ಹಿಂಡಬೇಕು.
ಮುಂಚಿತವಾಗಿ ಹಿಂಡಿಟ್ಟರೆ ಖರೀದಿಸುವುದಿಲ್ಲ. ಹತ್ತಿರ ಹತ್ತಿರ ಮನೆಗಳಿರುವುದರಿಂದ ನೂರು ಸಂಖ್ಯೆಯ ರೈತರಿಂದ ಹಾಲು ಸಂಗ್ರಹಣೆ ತೀರಾ ಕಷ್ಟವೇನಲ್ಲ ಎನ್ನುವುದು ಇವರ ಅಭಿಪ್ರಾಯ. ಬೆಳಗ್ಗೆ ಹಾಗೂ ಸಾಯಂಕಾಲ ತಯಾರಾದ ಕೋವಾವನ್ನು ಒಟ್ಟಿಗೆ ಸೇರಿಸಿ, ದಿನಕ್ಕೆ ಒಂದೂ ಕಾಲು ಕ್ವಿಂಟಾಲ್ ಕೋವಾ ತಯಾರಿಸಿ ಮಾರುತ್ತಾರೆ. ವಾರಕ್ಕೊಮ್ಮೆ ಹೈನುಗಾರರಿಗೆ ಹಾಲು ಪಡೆದ ಮೊತ್ತ ಪಾವತಿಸುತ್ತಾರೆ. ಆಕಳ ಹಾಲಿಗೆ 28 ರೂ. ಎಮ್ಮೆಯ ಹಾಲಿಗೆ 40 ರೂ. ದರ ನೀಡುತ್ತಾರೆ.
ಕಿಲೋ ಗ್ರಾಂ ಕೋವಾಕ್ಕೆ 180 ರೂಪಾಯಿ ದರ ಸಿಗುತ್ತದೆ. ಕೋವಾ ತಯಾರಿಯಲ್ಲಿ ಇವರ ತಾಯಿ ರಾಚವ್ವಾ ಹಿರೇಮಠರ(82) ಪಾತ್ರ ಹಿರಿದು. ಐವತ್ತೆರಡು ವರ್ಷಗಳಿಂದ ರಾಚವ್ವಾ ಇದೇ ಕೆಲಸ ಮಾಡುತ್ತಿದ್ದಾರೆ. ಐದು ದಶಕಗಳ ಕಾಲ ಒಲೆಯ ಹೊಗೆಯನ್ನುಂಡರೂ ಗಟ್ಟಿ ಮುಟ್ಟಾಗಿ ಕ್ರಿಯಾಶೀಲರಾಗಿರುವ ಇವರ ಆರೋಗ್ಯದ ಗುಟ್ಟು ಹಾಲಿನಲ್ಲಿ ಅಡಗಿದೆ ಎನ್ನುತ್ತಾರೆ ಮಗ ಗದಿಗೆಯ್ನಾ.
* ಕೋಡಕಣಿ ಜೈವಂತ ಪಟಗಾರ