Advertisement

ಮೆಟ್ರೋ ನಿಲ್ದಾಣದಲ್ಲಿ ಹೈ ಅಲರ್ಟ್‌

12:52 AM May 08, 2019 | Lakshmi GovindaRaj |

ಬೆಂಗಳೂರು: ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದ ಭದ್ರತಾ ತಪಾಸಣೆ ವೇಳೆ ವ್ಯಕ್ತಿಯೊಬ್ಬ ಅನುಮಾನಾಸ್ಪದ ವರ್ತನೆ ತೋರಿ ಲೋಹಪರಿಶೋಧಕ ಸಾಧನದಲ್ಲಿ ಎಚ್ಚರಿಕೆ ಸಂದೇಶ (ಬೀಪ್‌ ಶಬ್ಧ )ಮೊಳಗಿದ ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ನಿರ್ಗಮಿಸಿದ ಆತಂಕಕಾರಿ ಘಟನೆ ಸೋಮವಾರ ರಾತ್ರಿ ನಡೆದಿದೆ.

Advertisement

ತಕ್ಷಣ ಮೆಟ್ರೋ ನಿಲ್ದಾಣ, ಬಿಎಂಟಿಸಿ,ಕೆಎಸ್‌ಆರ್‌ಟಿಸಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರ ರಾತ್ರಿ ಶ್ವಾನ ದಳ, ಬಾಂಬ್‌ ನಿಷ್ಕ್ರಿಯದಳ ಹಾಗೂ ಪೊಲೀಸರು ಹಲವು ಗಂಟೆಗಳ ಕಾಲ ತಪಾಸಣೆ ನಡೆಸಿದ್ದಾರೆ.

ಜತೆಗೆ ಮೆಟ್ರೋನಿಲ್ದಾಣ ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಪ್ರಯಾಣಿಕರ ಬ್ಯಾಗೇಜ್‌ಗಳನ್ನು ಪರಿಶೀಲನೆ ಹಾಗೂ ಪ್ರಯಾಣಿಕರ ತಪಾಸಣೆ ಕಟ್ಟುನಿಟ್ಟಾಗಿ ನಡೆಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅನುಮಾನಸ್ಪದ ವ್ಯಕ್ತಿಗಳ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ.

ಮತ್ತೂಂದೆಡೆ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವರ್ತನೆ ತೋರಿ ನಿರ್ಗಮಿಸಿರುವ ವ್ಯಕ್ತಿಯ ಪತ್ತೆಗೆ ನೇತೃತ್ವದ ಎಸಿಪಿ ನೇತೃತ್ವದ ತಂಡ, ಸಿಸಿಟಿವಿ ಪೂಟೇಜ್‌ ಆಧರಿಸಿ ಕಾರ್ಯಾಚರಣೆ ನಡೆಸುತ್ತಿದೆ. ಆತ ಯಾರು, ಯಾವ ಉದ್ದೇಶಕ್ಕೆ ಬಂದಿದ್ದ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸೋಮವಾರ ರಾತ್ರಿ 7.30ರ ಸುಮಾರಿಗೆ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದ ಪೂರ್ವಗೇಟ್‌ನಲ್ಲಿ ಬಿಳಿಬಣ್ಣದ ಲುಂಗಿ ಶೆರ್ವಾನಿ ತೊಟ್ಟು ಮುಖಕ್ಕೆ ಬಟ್ಟೆ ಸುತ್ತಿದ್ದ ವ್ಯಕ್ತಿಯೊಬ್ಬರು ನಿಲ್ದಾಣದ ಒಳಪ್ರವೇಶಿಸಲು ಆಗಮಿಸಿದ್ದಾರೆ.

Advertisement

ಈ ವೇಳೆ ಭದ್ರತಾ ತಪಾಸಣೆ ವೇಳೆ ಲೋಹ ಪರಿಶೋಧಕ ಸಾಧನದಲ್ಲಿ ಜೋರಾದ ಬೀಪ್‌ ಸದ್ದಾಗಿದೆ. ಭದ್ರತಾ ತಪಾಸಣೆ ಮಾಡುತ್ತಿದ್ದ ಪವನ್‌, ಆತನನ್ನು ಒಳಗೆ ಬಿಟ್ಟಿಲ್ಲ. ಕೂಡಲೇ ಆ ವ್ಯಕ್ತಿ ನಿರ್ಗಮಿಸಿ ಬೇಗ ಬೇಗನೆ ನಡೆದುಕೊಂಡು ವಾಪಾಸ್‌ ಹೋಗಿದ್ದಾರೆ.

ಇದಾದ ಕೆಲಸಮಯದ ಬಳಿಕ ಅನುಮಾಸ್ಪದ ವ್ಯಕ್ತಿಯ ಬಗ್ಗೆ ಪೊಲೀಸರಿಗೆ ಮೆಟ್ರೊ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಸ್ಥಳೀಯ ಪೊಲೀಸರು, ಶ್ವಾನದಳ, ಬಾಂಬ್‌ ನಿಷ್ಕ್ರಿಯದಳ ಸ್ಥಳಕ್ಕೆ ತೆರಳಿ ಸುತ್ತಮುತ್ತಲ ಪ್ರದೇಶಗಳಲಿ ಪರಿಶೀಲನೆ ನಡೆಸಿದೆ. ಮತ್ತೂಂದು ತಂಡ ಆ ವ್ಯಕ್ತಿಯ ಪತ್ತೆಗೆ ಕಾರ್ಯನಿರ್ವಹಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಶಂಕಾಸ್ಪದ ವರ್ತನೆ ತೋರಿ ತೆರಳಿದ ವ್ಯಕ್ತಿಯ ಪತ್ತೆಗೆ ಕ್ರಮವಹಿಸಲಾಗಿದೆ. ಮೆಜೆಸ್ಟಿಕ್‌ ಸೇರಿದಂತೆ ಸುತ್ತಮುತ್ತಲ ವಸತಿಗೃಹಗಳು ಸೇರಿದಂತೆ ಹಲವು ಕಡೆ ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ. ಬಿಎಂಟಿಸಿ,ಕೆಎಸ್‌ಆರ್‌ಟಿಸಿ ,ರೈಲ್ವೇ ನಿಲ್ದಾಣಗಳಲ್ಲಿ ಹೆಚ್ಚಿನ ಪರಿಶೀಲನೆಗೆ ನಿರ್ದೇಶನ ನೀಡಿದ್ದು, ಅನುಮಾನಸ್ಪದ ವ್ಯಕ್ತಿ, ವಸ್ತುಗಳ ಬಗ್ಗೆ ಮುಂಜಾಗ್ರತಾ ಕ್ರಮವಹಿಸುವಂತೆ ಸೂಚಿಸಲಾಗಿದೆ. ಜತೆಗೆ, ಅನುಮಾನಾಸ್ಪದ ವ್ಯಕ್ತಿಯ ಬಳಿ ಶಸ್ತ್ರಾಸ್ತ್ರ ಇತ್ತು ಎಂಬ ಸುಳ್ಳುಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಯಾವುದೇ ಸಂಶಯಾಸ್ಪದ ವ್ಯಕ್ತಿ, ವಸ್ತು ಕಂಡು ಬಂದರೆ ಸಾರ್ವಜನಿಕರು ಕಂಟ್ರೋಲ್‌ ರೂಂಗೆ ಮಾಹಿತಿ ನೀಡಬಹುದು
-ರವಿ ಡಿ ಚೆನ್ನಣ್ಣವರ್‌, ಡಿಸಿಪಿ, ಪಶ್ಚಿಮ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next