Advertisement

ನಮ್ಮ ಸಂಸ್ಕೃತಿಯಿಂದ ಉನ್ನತ ಸಾಧನೆ

01:04 PM Jan 22, 2022 | Team Udayavani |

ಬೀದರ: ಶ್ರಮ ಸಂಸ್ಕೃತಿ ಮೈಗೂಡಿಸಿಕೊಂಡರೆ ಮಾತ್ರ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಿದೆ ಎಂದು ಹರಿಹರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶಾರದೇಶಾನಂದ ಸ್ವಾಮೀಜಿ ನುಡಿದರು.

Advertisement

ನಗರದ ಜನಸೇವಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೋಮಾರಿತನದಿಂದ ಏನನ್ನೂ ಸಾಧಿಸಲಾಗದು ಎಂದು ಹೇಳಿದರು.

ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಏಕಾಗ್ರತೆ ಹಾಗೂ ಆತ್ಮವಿಶ್ವಾಸದ ಪಾತ್ರ ಬಹುಮುಖ್ಯವಾಗಿದೆ. ನೌಕರಿ ಬದಲು ಶಿಕ್ಷಣದ ಉದ್ದೇಶ ಜ್ಞಾನಾರ್ಜನೆ ಆಗಬೇಕಿದೆ. ಮಾತೃಭಾಷೆ ಶಿಕ್ಷಣ ಅತ್ಯಂತ ಪರಿಣಾಮಕಾರಿ ಆಗಿರುತ್ತದೆ. ಉತ್ತುಂಗದ ಸಾಧನೆಗೈದವರಲ್ಲಿ ಮಾತೃಭಾಷೆಯಲ್ಲಿ ಓದಿದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಮೊಬೈಲ್‌, ಟಿವಿಗಳಿಂದ ದೂರ ಇರಬೇಕು. ಓದಿನತ್ತ ಗಮನ ಕೇಂದ್ರೀಕರಿಸಬೇಕು. ಸ್ವಾಮಿ ವಿವೇಕಾನಂದರಂಥ ಮಹಾ ಪುರುಷರ ಜೀವನ ಅರಿಯಬೇಕು. ಉತ್ತಮ ಪ್ರಜೆಗಳಾಗಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದ ಅವರು, ಈವರೆಗೆ ರಾಜ್ಯದ ಸುಮಾರು 700ಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ಕೊಟ್ಟಿದ್ದೇನೆ. ಅವುಗಳಲ್ಲಿನ ಅತ್ಯುತ್ತಮ 10 ಶಾಲೆಗಳಲ್ಲಿ ಜನಸೇವಾ ಶಾಲೆ ಕೂಡ ಒಂದಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಆಧಾರಿತ ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿದರು. ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ, ಶಿಕ್ಷಕರಾದ ರಾಹುಲ್‌, ಲಕ್ಷ್ಮಣ, ಶಿವಲೀಲಾ, ವನಜಾಕ್ಷಿ, ಮೀರಾಬಾಯಿ, ರೇಣುಕಾ, ಸುಲೋಚನಾ, ಮಹೇಶ್ವರಿ ಇದ್ದರು. ಶಿವಾನಂದ ಮಲ್ಲ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next