ಅದು 80ರ ದಶಕದ ಕುಂದಾಪುರ ಕರಾವಳಿ ಭಾಗದ ಚಿತ್ರಣ. ಒಂದೆಡೆ ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳಬೇಕೆಂದು ಕನಸು ಕಾಣುವ ಅಮ್ಮಚ್ಚಿ, ಮತ್ತೂಂದಡೆ ಅಮ್ಮಚ್ಚಿಯ ಆಂತರ್ಯದ ಕೂಗನ್ನು ತನ್ನ ಪ್ರತಿ ನಡೆಯಲ್ಲೂ ಹತ್ತಿಕ್ಕಲು ಹೊರಟ ವೆಂಕಪ್ಪಯ್ಯ ತಲೆಮಾರಿನಿಂದ ಇದೆಲ್ಲವನ್ನು ಹತ್ತಿರದಿಂದಲೇ ನೋಡುತ್ತಾ, ಅನುಭವಿಸುತ್ತ ಬಂದ ಪುಟ್ಟಮ್ಮತ್ತೆ , ತನ್ನ ಮೇಲಿನ ಎಲ್ಲ ಕ್ರೌರ್ಯಗಳನ್ನು ಅಸಹಾಯಕಳಾಗಿ ಪ್ರತಿಭಟಿಸುವ ಹೆಣ್ಣಾಗಿ ಅಕ್ಕು.
ಇವೆಲ್ಲದರ ನಡುವೆ ಸಮಾಜದ ಶೋಷಿಸುವ ಮನಸ್ಥಿತಿಗಳನ್ನು ಪ್ರತಿನಿಧಿಸುವಂತೆ ವಾಸು …. ಇವೆಲ್ಲ ಪಾತ್ರಗಳು ದೃಶ್ಯದ ಮೂಲಕ ತೆರೆಮೇಲೆ ಪ್ರೇಕ್ಷಕರಿಗೆ ಮುಖಾಮುಖೀಯಾಗುವುದು “ಅಮ್ಮಚ್ಚಿಯೆಂಬ ನೆನಪು’ ಚಿತ್ರದಲ್ಲಿ. ಕನ್ನಡದ ಖ್ಯಾತ ಲೇಖಕಿ ವೈದೇಹಿ ಅವರ “ಅಮ್ಮಚ್ಚಿಯೆಂಬ ನೆನಪು’, “ಅಕ್ಕು’ ಹಾಗೂ “ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು’ ಎಂಬ ಮೂರು ಕಥೆಗಳನ್ನು ಆಧರಿಸಿದ ಚಿತ್ರ “ಅಮ್ಮಚ್ಚಿಯೆಂಬ ನೆನಪು’.
ಈಗಾಗಲೇ ರಂಗಭೂಮಿಯಲ್ಲಿ ಒಂದಷ್ಟು ಪ್ರಯೋಗಗಳನ್ನು ಕಂಡು ಜನಪ್ರಿಯವಾಗಿದ್ದ “ಅಮ್ಮಚ್ಚಿಯೆಂಬ ನೆನಪು’ ನಾಟಕವನ್ನು ಅದೇ ಹೆಸರಿನಲ್ಲಿ ನಿರ್ದೇಶಕ ಚಂಪಾ ಪಿ. ಶೆಟ್ಟಿ ಚಿತ್ರರೂಪದಲ್ಲಿ ತೆರೆಗೆ ತಂದಿದ್ದಾರೆ. ಕನ್ನಡದಲ್ಲಿ ಮಹಿಳೆಯ ತುಮುಲ-ತಲ್ಲಣಗಳನ್ನು ತೆರೆದಿಡುವ ಚಿತ್ರಗಳು ಬರುತ್ತಿಲ್ಲ ಎಂಬ ವಾದಗಳ ನಡುವೆಯೇ ತೆರೆಗೆ ಬಂದಿರುವ “ಅಮ್ಮಚ್ಚಿಯೆಂಬ ನೆನಪು’ ನೋಡುಗರ ಮುಂದೆ ತನ್ನ ಮನದಾಳದ ಭಾವನೆಗಳನ್ನು ಬಿಚ್ಚಿಡುತ್ತ, ಅಚ್ಚುಮೆಚ್ಚಾಗುತ್ತಾಳೆ ಅಮ್ಮಚ್ಚಿ.
ಸಾಹಿತ್ಯ ಲೋಕದಲ್ಲಿ ಹೆಣ್ಣಿನ ಆಂತರ್ಯದ ಧ್ವನಿಗೆ ಅಕ್ಷರಗಳು ಜತೆಯಾದಂತೆ, ಚಿತ್ರವೊಂದು ಕೂಡ ಜತೆಯಾಗಬಹುದು ಎಂಬುದನ್ನು “ಅಮ್ಮಚ್ಚಿಯೆಂಬ ನೆನಪು’ ಚಿತ್ರ ನಿರೂಪಿಸುವಂತಿದೆ. ಇನ್ನು ಚಿತ್ರದ ಕಥಾಹಂದರ, ಅದರ ಆಶಯಗ ಬಗ್ಗೆ ಹೇಳುವುದಾದರೆ, ಅಮ್ಮಚ್ಚಿ, ಪುಟ್ಟಮ್ಮತ್ತೆ ಮತ್ತು ಅಕ್ಕು ಎಂಬ ಮೂರು ಮುಖ್ಯಪಾತ್ರಗಳ ಸುತ್ತ ಚಿತ್ರದ ಬಹುತೇಕ ಕಥೆ ನಡೆಯುತ್ತದೆ. ಈ ಮೂರು ಪಾತ್ರಗಳು ಮೂರು ತಲೆಮಾರಿನ, ಮೂರು ಮನಸ್ಥಿತಿಯ ಪ್ರತಿನಿಧಿಯಾದರೂ, ಆ ಪಾತ್ರಗಳ ಅಂತರಾಳದ ಧ್ವನಿ ಮಾತ್ರ ಒಂದೇ ಎಂಬುದನ್ನು ಚಿತ್ರ ಹೇಳುತ್ತದೆ.
ಹೆಣ್ಣಿನ ಬದುಕಿನ ಸಂಘರ್ಷ, ಆಕೆಯ ಭಾವತೀವ್ರತೆಯ ಗಂಭೀರ ವಿಷಯದ ಜತೆಜತೆಗೆ ಒಂದು ತಲೆಮಾರಿನ ಸಂಪ್ರದಾಯ, ಸ್ಥಳೀಯ ಸಂಸ್ಕೃತಿ, ಅಲ್ಲಿಯ ಭಾಷೆ ಎಲ್ಲದರ ಅನಾವರಣವಾಗುತ್ತ ಚಿತ್ರ ನೋಡುಗರಿಗೆ ಆಪ್ತವಾಗುತ್ತ ಹೋಗುತ್ತದೆ. “ಅಮ್ಮಚ್ಚಿ’ಯನ್ನು 80ರ ದಶಕದ ಕಾಲಘಟ್ಟದಲ್ಲಿ ನೈಜವಾಗಿ, ಪರಿಣಾಮಕಾರಿಯಾಗಿ ಮತ್ತು ನಾಜೂಕಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕಿ ಚಂಪಾ ಶೆಟ್ಟಿ ಗೆದ್ದಿದ್ದಾರೆ.
ಇನ್ನು “ಅಮ್ಮಚ್ಚಿಯೆಂಬ ನೆನಪು’ ಚಿತ್ರದಲ್ಲಿ ಗಮನ ಸೆಳೆಯುವುದು ಅದರ ಪಾತ್ರವರ್ಗಗಳು. ಅಮ್ಮಚ್ಚಿ ಆಗಿ ವೈಜಯಂತಿ ಅಡಿಗ, ವೆಂಕಪ್ಪಯ್ಯ ರಾಜ್. ಬಿ ಶೆಟ್ಟಿ, ಪುಟ್ಟಮ್ಮತ್ತೆ ಆಗಿ ರಾಧಾಕೃಷ್ಣ ಉರಾಳ್, ಅಕ್ಕು ಆಗಿ ದೀಪಿಕಾ ಆರಾಧ್ಯ, ವಾಸು ಆಗಿ ವಿಶ್ವನಾಥ್ ಉರಾಳ್ ತಮ್ಮ ಪಾತ್ರಗಳಿಗೆ ಜೀವ-ಭಾವ ಎರಡನ್ನೂ ತುಂಬಿ ಅಭಿನಯಿಸಿದ್ದಾರೆ.
ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಕೂಡ “ಅಮ್ಮಚ್ಚಿ’ಯ ಭಾವಕ್ಕೆ ಹೊಸ ರೂಪ ಕೊಡುತ್ತವೆ. ನವೀನ್ ಕುಮಾರ್. ಐ ಛಾಯಾಗ್ರಹಣ ಚಿತ್ರದ ದೃಶ್ಯಗಳನ್ನು ಸುಂದರವಾಗಿ ಸೆರೆಹಿಡಿದರೆ, ಅಷ್ಟೇ ಮೊನಚಾಗಿ ಹರೀಶ್ ಕೊಮ್ಮೆ ಸಂಕಲನ ಮಾಡಿದ್ದಾರೆ. ಒಟ್ಟಾರೆ ಹೇಳುವುದಾದರೆ, ಮಾಮೂಲಿ ಕಮರ್ಷಿಯಲ್ ಚಿತ್ರಗಳಿಗಿಂತ ಭಿನ್ನ ನಿರೂಪಣೆ ಮತ್ತು ಕಥಾಹಂದರದ ಮೂಲಕ ನಿಧಾನವಾಗಿ ಆವರಿಸಿಕೊಳ್ಳುವ “ಅಮ್ಮಚ್ಚಿ’ಯನ್ನು ಒಮ್ಮೆ ನೋಡಿಬರಲು ಅಡ್ಡಿ ಇಲ್ಲ.
ಚಿತ್ರ: ಅಮ್ಮಚ್ಚಿ ಎಂಬ ನೆನಪು
ನಿರ್ದೇಶನ: ಚಂಪಾ ಪಿ. ಶೆಟ್ಟಿ
ನಿರ್ಮಾಣ: ಪ್ರಕಾಶ್ ಪಿ ಶೆಟ್ಟಿ, ಗೀತಾ ಸುರತ್ಕಲ್, ವಂದನಾ ಇನಾಂದಾರ್, ಗೌರಮ್ಮ, ಕಲಾಕದಂಬ ಆರ್ಟ್ ಸೆಂಟರ್
ತಾರಾಗಣ: ವೈಜಯಂತಿ ಅಡಿಗ, ರಾಜ್.ಬಿ.ಶೆಟ್ಟಿ, ದೀಪಿಕಾ ಆರಾಧ್ಯ, ವಿಶ್ವನಾಥ ಉರಾಳ್, ರಾಧಾಕೃಷ್ಣ ಉರಾಳ್, ದೇವರಾಜ್ ಕರಬ, ದಿಲೀಪ್ ಶೆಟ್ಟಿ, ಸ್ನೇಹಾ ಶರ್ಮಾ, ಅನುಪಮ ವರ್ಣೇಕರ್, ದಿವ್ಯಾ ಪಾಲಕ್ಕಲ್ ಇತರು
* ಜಿ.ಎಸ್ ಕಾರ್ತಿಕ ಸುಧನ್