ಅನೂಪ್ ರೇವಣ್ಣ ನಾಯಕರಾಗಿರುವ “ಹೈಡ್ ಅಂಡ್ ಸೀಕ್’ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಮಾ.15ರಂದು ತೆರೆಕಾಣಲಿದ್ದು, ಮೊದಲ ಹಂತವಾಗಿ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಸಚಿವ ರಾಮಲಿಂಗರೆಡ್ಡಿ ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಶುಭಕೋರಿದರು. ಈ ವೇಳೆ ಅನೇಕ ಗಣ್ಯರು ಸಾಥ್ ನೀಡಿದರು. ಪುನೀತ್ ನಾಗರಾಜು ಈ ಸಿನಿಮಾದ ನಿರ್ದೇಶಕರು. ಜೊತೆಗೆ ನಿರ್ಮಾಣದಲ್ಲೂ ಭಾಗಿಯಾಗಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪುನೀತ್ ನಾಗರಾಜು ಮಾತನಾಡಿ, “ಹೈಡ್ ಆ್ಯಂಡ್ ಸೀಕ್ ಒಂದು ಸಸ್ಪೆನ್ಸ್, ಥ್ರಿಲ್ಲರ್ ಜಾನರ್‌ನ ಚಿತ್ರವಾಗಿದೆ. 25 ದಿನಗಳಲ್ಲಿ ಮಾಗಡಿ, ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತಲೂ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಎರಡು ಹಾಡುಗಳಿವೆ. ಚಿತ್ರದಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಮಾದರಿಯನ್ನು ಪ್ರಯೋಗ ಮಾಡಿದ್ದೇವೆ. ಕನ್ನಡದಲ್ಲಿ ಈ ಮಾದರಿ ಮೊದಲು ಎನ್ನಬಹುದು. ಚಿತ್ರದಲ್ಲಿ ಒಂದು ಕಿಡ್ನಾಪ್ ನಡೆಯುತ್ತದೆ. ಅದು ಯಾಕೆ, ಹೇಗೆ, ಯಾರಿಂದ ಎಂಬುದೇ ಚಿತ್ರದ ಕಥೆಯಾಗಿದೆ’ ಎಂದು ಮಾಹಿತಿ ನೀಡಿದರು.
ಅನೂಪ್ ರೇವಣ್ಣ ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. “ನಾನು ಈ ಮೊದಲು ಮಾಡಿದ ಪಾತ್ರಕ್ಕೂ ಈಗ ಹೈಡ್ ಆ್ಯಂಡ್ ಸೀಕ್‌ನಲ್ಲಿ ಮಾಡಿದ ಪಾತ್ರಕ್ಕೂ ತುಂಬಾ ಭಿನ್ನತೆ ಇದೆ. ಹೊಸತನದ, ಒಂದು ರಾ ಕ್ಯಾರೆಕ್ಟರ್ ಇದು. ಒಂದು ಥರಾ ಹೀರೋ, ವಿಲನ್ ಎರಡೂ ಶೇಡ್ ಬರುತ್ತದೆ. ಎಲ್ಲೂ ಕೂಡಾ ಹೀರೋಯಿಸಂ ತೋರಿಸದೇ, ಫೈಟ್ಸ್ ಇಲ್ಲದೇ ಸೈಲೆಂಟ್ ಆಗಿ ಇರುವ ಪಾತ್ರ. ಕಡಿಮೆ ಮಾತನಾಡಿ ಹೆಚ್ಚು ಕೆಲಸ ಮಾಡುವ ಪಾತ್ರ ನನ್ನದು. ಚಿತ್ರೀಕರಣದ ದಿನಗಳು ಅದ್ಭುತವಾಗಿದ್ದವು’ ಎನ್ನುವುದು ಅನೂಪ್ ಮಾತು.
ಧನ್ಯಾ ರಾಮ್‌ಕುಮಾರ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಥ್ರಿಲ್ಲರ್ ಜಾನರ್‌ನಲ್ಲಿ ಕಾಣಿಸಿಕೊಂಡಿರುವ ಧನ್ಯಾ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಧನ್ಯಾ ರಾಮ್‌ಕುಮಾರ್, “ಸಸ್ಪೆನ್ಸ್ , ಥ್ರಿಲ್ಲರ್ ನನಗೆ ಇಷ್ಟವಾದ ಜಾನರ್. ಮೊದಲು ಕಥೆ ಕೇಳಿದಾಗ ಬಹಳ ಇಷ್ಟವಾಯ್ತು. ನನ್ನ ಎರಡನೇ ಚಿತ್ರ ಈ ಜಾನರ್ ಆಗಿರಬೇಕು ಎಂದು ಆಯ್ಕೆ ಮಾಡಿಕೊಂಡೆ. ಚಿತ್ರೀಕರಣಕ್ಕೂ ಮುಂಚೆ ಚಿತ್ರತಂಡದವರು ವರ್ಕ್ ಶಾಪ್ ಮಾಡುವ ಮೂಲಕ ಒಂದು ಬಾಂಡಿಂಗ್ ಬೆಳೆಸಿಕೊಂಡೆವು. ಚಿತ್ರದಲ್ಲಿ ನನ್ನದು ಅಪ್ಪನ ಮುದ್ದಿನ ಮಗಳ ಪಾತ್ರ. ದೊಡ್ಡ ಉದ್ಯಮಿಯ ಮಗಳಾಗಿ ಕಾಣಿಸಿಕೊಂಡಿದ್ದೇನೆ. ಕೊನೆಯವರೆಗೂ ಕುತೂಹಲ ಮೂಡಿಸುವ ಚಿತ್ರ ಇದಾಗಿದೆ’ ಎಂದರು.
ಚಿತ್ರಕ್ಕೆ ರೆಜೋ ಪಿ ಜಾನ್ ಛಾಯಾಗ್ರಹಣ, ಸ್ಯಾಂಡಿ ಅಡ್ಡಂಕಿ ಸಂಗೀತ, ಮಧು ತುಂಬೇಕೆರೆ ಸಂಕಲನ ಚಿತ್ರಕ್ಕಿದೆ. ಅನೂಪ್ ರೇವಣ್ಣ, ಧನ್ಯಾ ರಾಮ್ ಕುಮಾರ್, ಮೈತ್ರೀ ಜಗ್ಗಿ, ರಕ್ಷಾ ಉಮೇಶ್, ಅರವಿಂದ್, ಸೂರಜ್ ಮುಂತಾದವರು ತಾರಾ ಬಳಗದಲ್ಲಿದ್ದಾರೆ.