ಹುಮನಾಬಾದ: ಆರ್.ಜಿ. ಹಿಬಾರೆ ಶಿಕ್ಷಣ ಸಂಸ್ಥೆಯ ಬಹುಮುಖ ಕಾರ್ಯಚಟುವಟಿಕೆ ಇತರೆ ಶಿಕ್ಷಣ ಸಂಸ್ಥೆಗಳಿಗೆ ಮಾದರಿ ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ ಪಾಟೀಲ ಹೇಳಿದರು.
ಹಳ್ಳಿಖೇಡ(ಬಿ)ದ ಆರ್.ಜಿ. ಹಿಬಾರೆ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿಜ್ಞಾನ ಕಲಾ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳನ್ನು ಕೇವಲ ಪಠ್ಯ ಶಿಕ್ಷಣಕ್ಕೆ ಮಾತ್ರ ಸೀಮಿತಗೊಳಿಸದೇ ಅವರಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಸಾಹಿತ್ಯ ಸೃಷ್ಟಿ ಜೊತೆಗೆ ಸಂಶೋಧನಾ ಪ್ರವೃತ್ತಿ ಬೆಳೆಸಿದಲ್ಲಿ ಮಾತ್ರ ಸರ್ವಾಂಗೀಣ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳಿಗೆ ಜ್ಞಾನದ ಜೊತೆಗೆ ಭವಿಷ್ಯ ರೂಪಿಸಿಕೊಳ್ಳುವ ಬಹುಮುಖ ಶಿಕ್ಷಣ ನೀಡುತ್ತಿರುವುದು ಪ್ರಶಂಸನೀಯ. ಮಕ್ಕಳಿಗೆ ಈ ಶಿಕ್ಷಣ ಏನನ್ನು ಕಲಿಸಿದೆ ಎಂಬುದಕ್ಕೆ ಇಂದಿನ ವಿಜ್ಞಾನ ಮೇಳವೇ ಸಾಕ್ಷಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಮಾತನಾಡಿ, ಗ್ರಾಮೀಣ ಭಾಗವೊಂದರಲ್ಲಿ ಇಷ್ಟೊಂದು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಸಂತಸ ತಂದಿದೆ. ವಿಜ್ಞಾನ ಮೇಳ ಮಕ್ಕಳ ಕ್ರಿಯಾಶೀಲತೆಗೆ ಹಿಡಿದ ಕನ್ನಡಿಯಂತಿದೆ. ಸಂಸ್ಥೆ ಅಧ್ಯಕ್ಷ ನಾಗರಾಜ ಹಿಬಾರೆ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಯ ಶ್ರಮ ಪ್ರಶಂಸನೀಯ ಎಂದರು. ಜಿಪಂ ಮಾಜಿ ಸದಸ್ಯರೂ ಆಗಿರುವ ಪುರಸಭೆ ಸದಸ್ಯ ಮಹಾಂತಯ್ಯ ಎಸ್.ತೀರ್ಥ ಮಾತನಾಡಿ, ಈ ಸಂಸ್ಥೆ ಅಧ್ಯಕ್ಷ ನಾಗರಾಜ ಹಿಬಾರೆ ಅವರು ಸಿಬ್ಬಂದಿಯನ್ನು ನೌಕರರಂತೆ ಕಾಣದೇ ಪರಿವಾರದ ಸದಸ್ಯರಂತೆ ನೋಡಿಕೊಳ್ಳುತ್ತಿರುವುದೇ ಗುಣಮಟ್ಟದ ಶಿಕ್ಷಣ ಸಿಗುವುದಕ್ಕೆ ಕಾರಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ನಾಗರಾಜ ಹಿಬಾರೆ ಮಾತನಾಡಿ, ಇಂದಿನ ಬಹುತೇಕ ಶಿಕ್ಷಣ ಸಂಸ್ಥೆಗಳು ಹಣ ಗಳಿಕೆ ಉದ್ದೇಶದಿಂದ ಹುಟ್ಟಿಕೊಳ್ಳುತ್ತಿವೆ. ದೇವರು ನಮ್ಮ ಪರಿವಾರಕ್ಕೆ ಹಣ, ಮಾನಸಿಕ ನೆಮ್ಮದಿ ನೀಡಿದ್ದಾನೆ. ಹಿಂದುಳಿದ ಈ ಭಾಗದ ಮಕ್ಕಳಿಗೆ ಅತ್ಯಲ್ಪ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭಿಸಲಾಗಿದೆ. ಇದರಿಂದ ಮನಸ್ಸಿಗೆ ಸಂತೃಪ್ತಿ ಸಿಗುತ್ತಿದೆ ಎಂದರು.
ಡಾ| ಅಶೋಕ ಬಿ.ಹಾಲಾ, ವಿಷ್ಣುಕಾಂತ ಢವಳೆಗಾರ್, ಪ್ರಾಚಾರ್ಯ ಸಂತೋಷದಾಸ ವೇದಿಕೆಯಲ್ಲಿದ್ದರು. ರಾಜಶೇಖರ ಶೇರಿಕಾರ ಸ್ವಾಗತಿಸಿದರು. ನೀಲಿಮಾ ವಿ.ಜೋಷಿ ನಿರೂಪಿಸಿದರು. ರಾಜಕುಮಾರ ಸ್ವಾಮಿ ವಂದಿಸಿದರು.