ದೇವತೆಯ ದರ್ಶನ ಭಾಗ್ಯ ಸಿಗದ ನತದೃಷ್ಟ ಭಕ್ತನಂತಾಗಿದ್ದೇನೆ ನಾನು. ಪ್ರತಿದಿನವೂ ಆಫೀಸಿಗೆ ಹೋಗುವಾಗ, ಆ ಸಿಗ್ನಲ್ ಹತ್ತಿರ ಹೃದಯ ಹೊಡೆದುಕೊಳ್ಳುತ್ತದೆ, ಕಣ್ಣುಗಳು ಸುತ್ತಮುತ್ತ ಹುಡುಕಾಡುತ್ತವೆ.
ಆವತ್ತು ಮುಸ್ಸಂಜೆಯ ಸೂರ್ಯ ತನ್ನ ದಿನಚರಿ ಮುಗಿಸಿಕೊಂಡು ಹೊರಟಿದ್ದ. ಅದು ನನ್ನ ದಿನಚರಿ ಪ್ರಾರಂಭವಾಗುವ ಸಮಯ. ಅಂದ್ರೆ ನಾನು ಕೆಲಸಕ್ಕೆ ಹೊರಡುವ ಹೊತ್ತು. ಪ್ರತಿದಿನದಂತೆ ಮನೆಯಿಂದ ಆಫೀಸಿಗೆ ಬೈಕ್‌ನಲ್ಲಿ ಹೊರಟಿದ್ದೆ. ಹಾಡಿನ ಪಲ್ಲವಿಯೊಂದನ್ನು ಗುನುಗುತ್ತಾ ಹೋಗುತ್ತಿರುವಾಗ, ಕಣ್ಣಿಗೆ ಒಮ್ಮೆಲೇ ಟ್ರಾಫಿಕ್‌ನ ಕೆಂಪು ದೀಪ ಕುಕ್ಕಿ, ವೇಗಕ್ಕೆ ತಡೆ ಹಾಕಿತು.
ಅದ್ಯಾಕೋ ಗೊತ್ತಿಲ್ಲ, ಹೃದಯ ತನ್ನ ತಾಳ ತಪ್ಪಿ ಜೋರಾಗಿ ಬಡಿದುಕೊಳ್ಳಲಾರಂಭಿಸಿತು. ದೀರ್ಘ ಉಸಿರು ಹೊರ ಹಾಕಿ, ನಿಧಾನವಾಗಿ ಉಸಿರು ಒಳಗೆಳೆದುಕೊಳ್ಳುವಾಗ ಘಮ್ ಎಂಬ ಮಲ್ಲಿಗೆಯ ಗಂಧ ಮೂಗಿಗೆ ತಾಕಿದ್ದೇ ತಡ; ಕಣ್ಣುಗಳು ಅದರ ಮೂಲ ಹುಡುಕಲು ಆರಂಭಿಸಿದವು.
ನನ್ನ ದೃಷ್ಟಿ ತಾಕ್ಕಿದ್ದೇ ಆ ಚೆಲುವೆಯ ಮೇಲೆ. ದುಂಡು ಮಲ್ಲಿಗೆಯ ಮೊಗದ, ನೀಲಿ ಕಣ್ಣುಗಳ, ಹೊಂಗೆ ಹೂವಿನ ಕಾಂತಿಯ, ಹಂಸದ ನಡಿಗೆಯಲ್ಲಿ ಬರುತ್ತಿದ್ದ ಆ ಚೆಲುವೆ ಪದೇ ಪದೆ ಮುಂಗುರುಳು ಸರಿ ಮಾಡುತ್ತಾ, ಸಾಕ್ಷಾತ್ ದೇವತೆಯ ಹಾಗೆ ಕಾಣುತ್ತಿದ್ದಳು. ಆಗ ತಾನೇ ಉದುರಿ ಬಿದ್ದ ಗುಲ್‌ಮೊರ್‌ನ ಹೂವುಗಳು ಆಕೆಯ ಕಾಲುಗಳನ್ನು ಸ್ಪರ್ಶಿಸುತ್ತಾ ಆನಂದ ಪಡೆಯುತ್ತಿದ್ದವು. ಅವಳ ರೇಷ್ಮೆಯಂಥ ಕೂದಲಿಗೆ ತಂಗಾಳಿ ಸೋಕಿ, ಅದರ ಜೊತೆಯಲ್ಲಿ ಚೆಲ್ಲಾಟ ಆಡುತ್ತಾ ಅವಳ ಕೆಂಗುಲಾಬಿ ತುಟಿಗೆ ಪದೇ ಪದೆ ಮುಟ್ಟಿ ಪುಳಕಗೊಳ್ಳುತ್ತಿದ್ದವು. ಇನ್ನೇನು ಅವಳು ನನ್ನ ಸಮೀಪ ಬಂದೇ ಬಿಟ್ಟಳು ಅನ್ನುವಷ್ಟರಲ್ಲಿ, ಸಿಗ್ನಲ್ ಬಿಟ್ಟಿತ್ತು. ಹಿಂದೆ ನಿಂತಿದ್ದ ವಾಹನ ಸವಾರರು ಒಂದೇ ಸಮನೆ ಹಾರ್ನ್ ಮಾಡತೊಡಗಿದರು. ವಿಧಿಯಿಲ್ಲದೆ ಬೈಕ್‌ಅನ್ನು ಮುಂದಕ್ಕೋಡಿಸಿದೆ. ಸ್ವಲ್ಪ ದೂರ ಬಂದು ಹಿಂತಿರುಗಿ ನೋಡುವಷ್ಟರಲ್ಲಿ ಅವಳು ಯಾವುದೋ ಬಸ್ ಹತ್ತಿ ಹೊರಟು ಹೋಗಿದ್ದಳು…
ಸಮೀಪದಿಂದ ದೇವತೆಯ ದರ್ಶನ ಭಾಗ್ಯ ಸಿಗದ ನತದೃಷ್ಟ ಭಕ್ತನಂತಾಗಿದ್ದೇನೆ ನಾನು. ಪ್ರತಿದಿನವೂ ಆಫೀಸಿಗೆ ಹೋಗುವಾಗ, ಆ ಸಿಗ್ನಲ್ ಹತ್ತಿರ ಹೃದಯ ಹೊಡೆದುಕೊಳ್ಳುತ್ತದೆ, ಕಣ್ಣುಗಳು ಸುತ್ತಮುತ್ತ ಹುಡುಕಾಡುತ್ತವೆ. ಯಾವತ್ತಾದರೂ ಒಂದು ದಿನ ಅವಳು ಮತ್ತೆ ಕಾಣಬಹುದೇನೋ, ಮಲ್ಲಿಗೆಯ ಘಮ ಮೂಗಿಗೆ ತಾಕಬಹುದೇನೋ ಎಂದು ಮನಸ್ಸು ಕನಸು ಕಾಣುತ್ತದೆ. ಹೇ ಸಿಗ್ನಲ್ ಹುಡುಗಿ ನೀನೇ ಹೇಳು, ಮತ್ತೆ ಸಿಗ್ತಿಯಾ?
ಇಂತಿ ನಿನ್ನ ಸಿಗ್ನಲ್ ಹುಡುಗ
ಆರೀಫ್ ವಾಲೀಕಾರ, ಬೆಳಗಾವಿ