ಟೀ ಕುಡಿಯಲು ಹೊರಟವನು, ಬಸ್ಸಿಂದ ಇಳಿಯುವ ಮೊದಲು ಕಣ್ಣುಜ್ಜಿಕೊಂಡು ಸುತ್ತಲೂ ನೋಡಿದೆ. ಮುಂದಿನ ಸೀಟಿನಲ್ಲಿ ಗೆಳತಿಯೊಬ್ಬಳು ಕೂತಿದ್ದುದು ನೆನಪಾಯಿತು. ಅವಳ ಸೀಟಿನ ಬಳಿ ಹೋಗಿ, ನಿದ್ರಿಸುತ್ತಿದ್ದವಳ ತಲೆಗೆ ಸ್ವಲ್ಪ ಜೋರಾಗಿಯೇ ಮೊಟಕಿ, ಹೇ ಹುಡುಗಿ, ಟೀ ಕುಡಿಯೋಕೆ ಬಾ ಎಂದೆ…
ನಾನು ಡಿ.ಇಡಿ ಶಿಕ್ಷಣ ಪಡೆಯುತ್ತಿದ್ದ ದಿನಗಳು. ಅದು ಆಟ, ಚೆಲ್ಲಾಟವಾಡುತ್ತಾ ಕಾಲ ಕಳೆಯುವ ವಯಸ್ಸು. ಅಲ್ಲದೇ ಕಡ್ಡಾಯವಾಗಿ ಹಾಡು, ಡ್ಯಾನ್ಸ್, ಆಟ ಹಾಗೂ ಇತರೆ ಚಟುವಟಿಕೆಗಳಲ್ಲಿ ನಾವು ಭಾಗವಹಿಸಲೇಬೇಕಿತ್ತು. ಶಿಕ್ಷಕರು ಕೂಡ, ಈ ಎಲ್ಲ ಚಟುವಟಿಕೆಯಲ್ಲಿ ನಮ್ಮೊಂದಿಗೆ ಗೆಳೆಯರಂತೆ ಭಾಗವಹಿಸುತ್ತಿದ್ದರು. ಅವರು ಹೇಳಿದ ಚಟುವಟಿಕೆ, ಕೆಲಸವನ್ನು ಸರಿಯಾಗಿ ಮಾಡದಿದ್ದರೆ ನಮ್ಮ ಇಂಟರ್ನಲ್ ಮಾರ್ಕ್ಸ್ನಲ್ಲಿ ಕಡಿತವಾಗುತ್ತಿತ್ತು. ಆ ಭಯದಲ್ಲಿ ಎಲ್ಲರೂ ಕೊಟ್ಟ ಕೆಲಸವನ್ನು ಚಾಚೂ ತಪ್ಪದೆ ಮಾಡುತ್ತಿದ್ದರು.
ಮೊದಲನೇ ವರ್ಷದ ಡಿ.ಇಡಿ ಮುಗಿಸಿ, ಎರಡನೇ ವರ್ಷದ ಡಿ.ಇಡಿಗೆ ಬಂದಾಗ ಪ್ರವಾಸ ಏರ್ಪಡಿಸಿದ್ದರು. ಎಲ್ಲರೂ ಕಡ್ಡಾಯವಾಗಿ ಪ್ರವಾಸಕ್ಕೆ ಬರಲೇಬೇಕು ಎಂಬ ಷರತ್ತು ವಿಧಿಸಿದ್ದರು. ಇದಕ್ಕೆ ಪ್ರತಿಯಾಗಿ, ಶಿಕ್ಷಕರೆಲ್ಲರೂ ಸಹ ಜೊತೆಗೆ ಬರಬೇಕೆಂದು ವಿದ್ಯಾರ್ಥಿಗಳೂ ಪಟ್ಟು ಹಿಡಿದರು. ಅದಕ್ಕೆ ಶಿಕ್ಷಕರೂ ಸಮ್ಮತಿಸಿದರು.
ಪ್ರವಾಸದ ದಿನ ಬಂದೇ ಬಿಟ್ಟಿತು. ಎಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಮ್ಮ ತಮ್ಮ ಬ್ಯಾಗ್‌ಗಳಲ್ಲಿ ಬಟ್ಟೆ, ತಿಂಡಿ ಪದಾರ್ಥಗಳನ್ನು ತುಂಬಿಕೊಂಡು ಬಸ್ ಹತ್ತಿದರು. ಅರ್ಧ ಗಂಟೆ ಕಳೆಯುತ್ತಿದ್ದಂತೆಯೇ ಬಸ್ಸಿನಲ್ಲಿ ಕುಣಿತ, ಹಾಸ್ಯದ ಮಾತುಗಳು ಜೋರಾದವು. ಕನ್ನಡದ ಹಾಡುಗಳಿಗೆ ಮೂವರು ಶಿಕ್ಷಕರು ಮತ್ತು ಇಬ್ಬರು ಶಿಕ್ಷಕಿಯರು ನಮ್ಮೆಲ್ಲರ ಜೊತೆ ಕುಣಿಯಲು ಪ್ರಾರಂಭಿಸಿದರು. ಬಸ್ಸು ಅತ್ತಿಂದಿತ್ತ ವಾಲಾಡುತ್ತಿದ್ದರೆ ನಮ್ಮ ಕುಣಿತದ ಶೈಲಿಯೂ ಬದಲಾಗುತ್ತಿತ್ತು. ನಮ್ಮ ಖುಷಿಗೆ ಕೊನೆಯೇ ಇರಲಿಲ್ಲ. ಸುಮಾರು 2-3 ಗಂಟೆಗಳ ಕಾಲ ದಣಿವರಿಯದೆ ಹಾಡಿ, ಕುಣಿದು, ಕಿರುಚಿ ಕೊನೆಗೂ ಸುಸ್ತಾಗಿ ನಿದ್ರೆಗೆ ಜಾರಿದೆವು. ಇನ್ನೂ ಕೆಲವರು ಮಾತಿನಲ್ಲಿ ಮಗ್ನರಾಗಿದ್ದರು. ಅವರ ಪಿಸುಮಾತಿನ ಮಧ್ಯೆ ನಾನೂ ನಿಧಾನಕ್ಕೆ ನಿದ್ರೆಗೆ ಜಾರಿದೆ.
ಸುಮಾರು ಬೆಳಗಿನ ಜಾವ ನಾಲ್ಕು ಗಂಟೆಗೆ, ನಿದ್ದೆ ಮಾಡುತ್ತಿದ್ದ ನನ್ನನ್ನು ಸ್ನೇಹಿತ ಎಬ್ಬಿಸಿದ. ಕಣಿºಟ್ಟು ನೋಡಿದರೆ ಬಸ್ಸು ನಿಂತಿತ್ತು. “ಟೀ ಕುಡಿಯೋಣ ಬಾರೋ’ ಎಂದು ಗೆಳೆಯ ಬಸ್ಸಿನಿಂದ ಕೆಳಗಿಳಿದ. ನನಗೆ ಅರೆಬರೆ ನಿದ್ರೆಯಾಗಿದ್ದರಿಂದ ಕಣ್ಣುಜ್ಜುತ್ತ ಸುತ್ತಲೂ ನೋಡಿದೆ. ಮುಂದಿನ ಸೀಟಿನಲ್ಲಿ ಗೆಳತಿಯೊಬ್ಬಳು ಕುಳಿತಿದ್ದನ್ನು ನೆನಪಿಸಿಕೊಂಡೆ. ಅವಳನ್ನೂ ಟೀ ಕುಡಿಯಲು ಕರೆಯೋಣ ಎಂದು, ಸೀಟಿನಿಂದ ಮೇಲೆದ್ದವನೆ “ಹೇ! ಹುಡುಗಿ, ಟೀ ಕುಡಿಯುವಂತೆ ಎದ್ದು ಬಾ’ ಎಂದು ನಿದ್ದೆ ಮಾಡುತ್ತಿದ್ದವಳ ತಲೆಗೆ ಸ್ವಲ್ಪ ಜೋರಾಗಿ ಮೊಟಕಿದೆ. ಆಕೆ ನಿದ್ದೆಯಿಂದ ಎಚ್ಚರಗೊಂಡು ಹಿಂದೆ ತಿರುಗಿದಳು. ಆಕೆಯ ಮುಖ ನೋಡುತ್ತಲೇ ನನ್ನ ನಿದ್ದೆ ಹಾರಿಹೋಯಿತು. ಯಾಕೆಂದರೆ, ಅಲ್ಲಿ ಕುಳಿತಿದ್ದವಳು ನನ್ನ ಗೆಳತಿಯಾಗಿರಲಿಲ್ಲ. ಬದಲಿಗೆ ನಮಗೆ ಪಾಠ ಮಾಡುವ ಶಿಕ್ಷಕಿಯಾಗಿದ್ದರು. ನನಗೆ ಅವರನ್ನು ನೋಡಿ, ಹೆದರಿಕೆಯ ಜೊತೆಗೆ ಇಂಟರ್ನಲ್ ಮಾರ್ಕ್ಸ್ ಕೂಡ ನೆನಪಾಯಿತು. “ಮೇಡಂ ಅದೂ…’ ಎಂದು ತೊದಲಿದೆ. ನನ್ನ ಗಾಬರಿಯನ್ನು ಅರ್ಥ ಮಾಡಿಕೊಂಡ ಅವರು, “ಗೊತ್ತಾಗದೆ ಹೊಡೆದದ್ದಲ್ಲವೆ? ಪರವಾಗಿಲ್ಲ ಹೆದರಬೇಡ’ ಎಂದು ಸಮಾಧಾನ ಮಾಡಿದರು. ನಾನು ನಿಟ್ಟುಸಿರು ಬಿಟ್ಟು ಬಸ್ಸಿನಿಂದ ಕೆಳಗಿಳಿದೆ.
ನಮ್ಮ ಬಸ್ಸು ಜೋಗ್‌ಫಾಲ್ಸ್ ತಲುಪಿದಾಗ ಬೆಳಗ್ಗೆ ಸಮಯ ಎಂಟಾಗಿತ್ತು. ರಸ್ತೆಯ ಪಕ್ಕದಲ್ಲಿ ಬಸ್ಸು ನಿಲ್ಲಿಸಿ ತಿಂಡಿ ತಯಾರಿಸುತ್ತಿದ್ದೆವು . ಆಗ, ರಾತ್ರಿ ಬಸ್ಸಿನಲ್ಲಿ ನನ್ನ ಮುಂದೆ ಕುಳಿತಿದ್ದ ಗೆಳತಿಯನ್ನು ಕರೆದು, ” ಏಯ್, ನಿನ್ನೆ ರಾತ್ರಿ ನನ್ನ ಮುಂದಿನ ಸೀಟಿನಲ್ಲಿ ನೀನು ಕುಳಿತಿದ್ದೆ ಅಲ್ವಾ? ಮತ್ಯಾವಾಗ ಜಾಗ ಬದಲಿಸಿದೆ?’ ಎಂದು ಕೇಳಿದೆ. ಅದಕ್ಕವಳು-” ಗೆಳತಿಯ ಪಕ್ಕದ ಸೀಟ್ ಖಾಲಿ ಇತ್ತು. ನೀನು ನಿದ್ದೆ ಮಾಡುತ್ತಿದ್ದಾಗ ಎದ್ದು ಹೋಗಿ ಅಲ್ಲಿ ಕುಳಿತೆ. ನಿನ್ನ ಮುಂದೆ ಖಾಲಿ ಇದ್ದ ಸೀಟಿನಲ್ಲಿ ಮೇಡಂ ಬಂದು ಕುಳಿತರು. ಯಾಕೆ? ಏನಾಯ್ತು?’ ಎಂದು ಕೇಳಿದಳು. ನಾನು ಏನೂ ಹೇಳದೆ ಸುಮ್ಮನಾದೆ.
ಸಣ್ಣಮಾರಪ್ಪ, ದೇವರಹಟ್ಟಿ (ಚಂಗಾವರ)