ಗುಳೇದಗುಡ್ಡ: ಇಲ್ಲಿಯ ಪುರಸಭೆ ಒಂದು ತಿಂಗಳಿನ ವಿದ್ಯುತ್ ಬಿಲ್ ಪಾವತಿಸದ ಕಾರಣ ಹೆಸ್ಕಾಂ ಇಲಾಖೆ ಪುರಸಭೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.
ಗುಳೇದಗುಡ್ಡ ಪುರಸಭೆ ಒಂದು ತಿಂಗಳಿನ ಬಿಲ್ 4 ಲಕ್ಷ 98 ಸಾವಿರ ರೂ. ಪಾವತಿಸದಿರುವುದಕ್ಕೆ ಹೆಸ್ಕಾಂ ಅಧಿಕಾರಿಗಳ ಆದೇಶದ ಮೇರೆಗೆ ಪುರಸಭೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಬೆಳಗ್ಗೆ 11ಗಂಟೆಯಿಂದ ಸಂಜೆ 5ಗಂಟೆವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಪರಿಣಾಮ, ಪುರಸಭೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿ ಪರದಾಡಿದರು.
ಹೆಸ್ಕಾ ಕಂದಾಯ ಸಹಾಯಕ ಲೆಕ್ಕಾಧಿಕಾರಿ ಮಹಾಂತೇಶ ಚಿಮ್ಮನಕಟ್ಟಿ ಅವರು ದೂರವಾಣಿ ಮೂಲಕ ಮಾತನಾಡಿ, ಈಗಾಗಲೇ ಪುರಸಭೆ ಒಂದು ತಿಂಗಳಿನ ವಿದ್ಯುತ್ ಬಿಲ್ ಬಾಕಿ 4 ಲಕ್ಷ 98 ಸಾವಿರ ಇದ್ದು, ಇದಕ್ಕಾಗಿ ನಾವು ವಿದ್ಯುತ್ ಬಿಲ್ ಸಹ ಕೊಟ್ಟಿತ್ತು. ಅದಾದ ನಂತರ ನೋಟಿಸ್ ಸಹ ಪುರಸಭೆಗೆ ನೀಡಿತ್ತಾದರೂ ಪುರಸಭೆಯವರು ಇಲಾಖೆಯ ಬಿಲ್ ಪಾವತಿಸಿಲ್ಲ. ನಾವು ನೀಡಿದ ನೋಟಿಸ್‌ಗೆ ಪುರಸಭೆಯಿಂದ ಸಕಾರಾತ್ಮಕ ಉತ್ತರ ಬರಲಿಲ್ಲ. ನಮ್ಮ ಹಿರಿಯ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದೇನೆ. ಗುಳೇದಗುಡ್ಡ ಪುರಸಭೆಗೆ ಸಾಕಷ್ಟು ಅನುದಾನ ಬಂದಿದೆ. ವಿದುತ್ ಸಂಪರ್ಕ ಕಡಿತ ಮಾಡಿ, ತಾವೇ ಸ್ವತಃ ಬಂದು ಬಿಲ್ ತುಂಬುತ್ತಾರೆ ಎಂದು ನಮ್ಮ ಹಿರಿಯ ಅಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ ಹೆಸ್ಕಾಂ ಮೇಲ್ವಿಚಾರಕರಾದ ಎಂ.ಎಚ್. ಮಡಿವಾಳರ ಹಾಗೂ ಸಿಬ್ಬಂದಿಯನ್ನು ಗುಳೇದಗುಡ್ಡ ಪುರಸಭೆಗೆ ಕಳುಹಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ತಿಳಿಸಿದ್ದಾರೆ ಎಂದರು.
ಬಾಕಿ ಇರುವ ಬಿಲ್ ಪಾವತಿಸುವುದಾಗಿ ಪುರಸಭೆ ಅಧಿಕಾರಿಗಳು ಭರವಸೆ ಕೊಟ್ಟ ನಂತರ ಹೆಸ್ಕಾ ಅಧಿಕಾರಿಗಳು ಸಂಜೆ 5ಗಂಟೆಯ ನಂತರ ಕಟ್ ಮಾಡಿದ ವಿದ್ಯುತ ಲೈನ್‌ನ್ನು ಪುನಃ ಜೋಡಿಸಿ ವಿದ್ಯುತ್ ಸಂಪರ್ಕ ಒದಗಿಸಿಕೊಟ್ಟರು.
ನಾನು ಬೆಂಗಳೂರಿಗೆ ಪುರಸಭೆ ಕೆಲಸದ ನಿಮಿತ್ತ ಹೋಗಿದ್ದು, ಗುಳೇದಗುಡ್ಡ ಪುರಸಭೆಗೆ ಸದ್ಯ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಕೆಲವೇ ದಿನಗಳಾದ ಕಾರಣ, ನನ್ನ ಸಹಿಯ ತಂಬ್ ಇಲ್ಲದ್ದರಿಂದ ಚೆಕ್ ತೆಗೆಯಲು ವಿಳಂಬವಾಗಿದೆ. ಇದನ್ನು ಸರಿಪಡಿಸಲು ಅಧಿಕಾರಿಗಳಿಗೆ ಹೇಳಿದ್ದೇನೆ. –
ಫಕ್ರುದ್ದೀನ್ ಹುಲ್ಲಿಕೇರಿ, ಮುಖ್ಯಾಧಿಕಾರಿ ಪುರಸಭೆ-ಗುಳೇದ ಗುಡ್ಡ
ಹೆಸ್ಕಾಂ ಕಂದಾಯ ಸಹಾಯಕ ಲೆಕ್ಕಾಧಿಕಾರಿಗಳು ಪುರಸಭೆಯ ಬಿಲ್ 5 ಲಕ್ಷ ಬಾಕಿ ಇದ್ದ ಬಗ್ಗೆ ನನಗೆ ತಿಳಿಸಿದರು. ಆದಕಾರಣ ಪುರಸಭೆಯ ವಿದ್ಯುತ್ ಸಂಪರ್ಕಕಡಿತ ಮಾಡಲು ಸೂಚಿಸಿದ್ದೇನೆ. ಸದ್ಯ ಪುರಸಭೆ ಅಧಿಕಾರಿಗಳು ಪಾವತಿಸುತ್ತೇನೆ ಎಂದು ನಮ್ಮ ಎಇಇ ಅಕಾರಿಗಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪುನಃ ವಿದ್ಯುತ್ ಸಂಪರ್ಕ ಒದಗಿಸುವಂತೆ ನಮ್ಮ ಹೆಸ್ಕಾಂ ಸಿಬ್ಬಂದಿಗೆ ತಿಳಿಸಿದ್ದೇನೆ. –
ಬಿ.ಎಚ್.ಬಿದರಿಕರ ಶಾಖಾಧಿಕಾರಿಗಳು ಹೆಸ್ಕಾಂ, ಗುಳೇದಗುಡ್ಡ.