Advertisement

ಹೆಸರಘಟ್ಟ ಹುಲ್ಲುಗಾವಲು`ಸಂರಕ್ಷಿತ ಪ್ರದೇಶ’: ಬಿಡಿಎ ಅಧ್ಯಕ್ಷ ವಿಶ್ವನಾಥ್ ಅಸಮಾಧಾನ

07:36 PM Sep 04, 2022 | Team Udayavani |

ಬೆಂಗಳೂರು: ನಗರದ ಹೊರವಲಯದಲ್ಲಿರುವ ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು `ಸಂರಕ್ಷಿತ ಪ್ರದೇಶ’ವನ್ನಾಗಿ ಘೋಷಣೆ ಮಾಡಲು ಹೊರಟಿರುವ ರಾಜ್ಯ ವನ್ಯಜೀವಿ ಮಂಡಳಿಯ ಪ್ರಯತ್ನಕ್ಕೆ ಯಲಹಂಕ ಶಾಸಕರೂ ಆಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ರಾಜ್ಯ ವನ್ಯಜೀವಿ ಮಂಡಳಿಯು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಈ ಹಿಂದೆ ತೆಗೆದುಕೊಂಡಿದ್ದ ತನ್ನ ತೀರ್ಮಾನವನ್ನೇ ರದ್ದು ಮಾಡಿ ಹುಲ್ಲುಗಾವಲಿಗೆ ಹೊಂದಿಕೊಂಡಂತಿರುವ ಜಾಗವನ್ನು ಸಂರಕ್ಷಿತ ಪ್ರದೇಶವನ್ನಾಗಿ ಘೋಷಣೆ ಮಾಡುವ ತರಾತುರಿಯನ್ನು ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಸರಘಟ್ಟ, ಶಿವಕೋಟೆ, ಹುರಳಿಚಿಕ್ಕನಹಳ್ಳಿ, ಅರಕೆರೆ ಮತ್ತು ಸೊಣ್ಣೇನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ 45 ಕ್ಕೂ ಹೆಚ್ಚು ಗ್ರಾಮಗಳ ಜನತೆ ತಲೆತಲಾಂತರದಿಂದಲೂ ಈ ಪ್ರದೇಶದೊಂದಿಗೆ ಒಡನಾಟ ಇಟ್ಟುಕೊಂಡಿದ್ದಾರೆ. ಈ ಪ್ರದೇಶವನ್ನು ಒತ್ತುವರಿದಾರರ ಕೈಗೆ ಸಿಗದಂತೆ ಜತನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಆದರೆ, ಇದೀಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಈ ಪ್ರದೇಶವನ್ನು ಸಂರಕ್ಷಿತ ಪ್ರದೇಶವನ್ನಾಗಿ ಮಾಡಲು ಮುಂದಾಗಿರುವ ಪ್ರಯತ್ನದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ವಿಶ್ವನಾಥ್ ದೂರಿದ್ದಾರೆ.
ಈ ಎಲ್ಲಾ ಗ್ರಾಮಪಂಚಾಯ್ತಿಗಳ ಜನಪ್ರತಿನಿಧಿಗಳು, ಸಾರ್ವಜನಿಕರು, ಸಂಘಸಂಸ್ಥೆಗಳ ಪ್ರತಿನಿಧಿಗಳು ನನ್ನನ್ನು ಭೇಟಿ ಮಾಡಿ ವನ್ಯಜೀವಿ ಮಂಡಳಿ ಹುನ್ನಾರದ ಬಗ್ಗೆ ದೂರನ್ನು ನೀಡಿದ್ದಾರೆ. ಹೆಸರಘಟ್ಟದಲ್ಲಿರುವ 350 ಎಕರೆ ಹುಲ್ಲುಗಾವಲನ್ನು ಸಂರಕ್ಷಿಸಿಕೊಳ್ಳಲು ನಮ್ಮದೇನೂ ಅಭ್ಯಂತರವಿಲ್ಲ. ಅರ್ಕಾವತಿ ಉಳಿಸುವುದು ಸೇರಿದಂತೆ ನಮ್ಮ ಕ್ಷೇತ್ರದ ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸುವಲ್ಲಿ ಜನತೆ ಹಲವಾರು ಹೋರಾಟ ಮಾಡಿದ್ದಾರೆ. ಕ್ಷೇತ್ರದಾದ್ಯಂತ ಸಾವಿರಾರು ಮರಗಳನ್ನು ಬೆಳೆಸುವ ಮೂಲಕ ಪರಿಸರ ಕಾಳಜಿಯನ್ನು ತೋರಲಾಗುತ್ತಿದೆ. ನಮ್ಮ ಕ್ಷೇತ್ರದಲ್ಲಿ ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಲಾಗಿದೆ. ಈ ವಿಚಾರದಲ್ಲಿ ನಾವು ಯಾರಿಂದಲೂ ಪಾಠ ಕಲಿಯಬೇಕಿಲ್ಲ ಎಂದು ಹೇಳಿದ್ದಾರೆ.

ಸ್ಥಳೀಯ ಯುವ ಸಮುದಾಯಕ್ಕೆ ನಿರುದ್ಯೋಗ ಸೃಷ್ಟಿ
ಹೆಸರಘಟ್ಟ ಹೋಬಳಿ ಕೇಂದ್ರವಾಗಿದ್ದು, ಇಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನೇಕ ಇಲಾಖೆಗಳ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಪ್ರತಿದಿನ ಸಾವಿರಾರು ಜನರು, ರೈತರು ಹಾಗೂ ಸಾರ್ವಜನಿಕರು ಬಂದು ಹೋಗುತ್ತಾರೆ. ಅಲ್ಲದೇ, ಇಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ, ಆದರ್ಶ ಫಿಲಂ ಇನ್ ಸ್ಟಿಟ್ಯೂಟ್, ನೃತ್ಯಗ್ರಾಮ, ರಾಜ್ಯ ಮತ್ತು ಕೇಂದ್ರ ಕುಕ್ಕುಟ ಪಾಲನೆ ತರಬೇತಿ ಕೇಂದ್ರ, ಮೀನುಮರಿ ಸಂಶೋಧನಾ ಉತ್ಪಾದನಾ ಘಟಕ ಮತ್ತು ರಾಜ್ಯ ಹಾಗೂ ಕೇಂದ್ರ ವೀರ್ಯ ಸಂವರ್ಧನ ಕೇಂದ್ರವಿರುತ್ತದೆ.
ಒಂದು ವೇಳೆ, ರಾಜ್ಯ ವನ್ಯಜೀವಿ ಮಂಡಳಿ ಸಂರಕ್ಷಣಾ ಪ್ರದೇಶವೆಂದು ಘೋಷಣೆ ಮಾಡಿದಲ್ಲಿ ಈ ಭಾಗದ ಅಭಿವೃದ್ಧಿ ಕುಂಠಿತವಾಗುತ್ತದೆ. ಇದರಿಂದ ಸ್ಥಳೀಯ ಯುವ ಸಮುದಾಯಕ್ಕೆ ನಿರುದ್ಯೋಗದ ಭೀತಿ ಎದುರಾಗುತ್ತದೆ. ಅದೇ ರೀತಿ ಮೀನು ಕೃಷಿ ಸೇರಿದಂತೆ ಇನ್ನಿತರೆ ಕಸುಬುಗಳನ್ನು ಮಾಡುತ್ತಿರುವ ಸಾವಿರಾರು ಬಡ ಕುಟುಂಬಗಳು ಬೀದಿಪಾಲಾಗಬೇಕಾಗುತ್ತದೆ ಮತ್ತು ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ ಎಂದು ವಿಶ್ವನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.

ಹಿಂದಿನ ನಿರ್ಧಾರವನ್ನು ರದ್ದು ಮಾಡುವ ಹುನ್ನಾರ
19-01-2021 ರಂದು ನಡೆದ 15 ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ಪ್ರದೇಶವನ್ನು `ಸಂರಕ್ಷಿತ ಪ್ರದೇಶ’ವೆಂದು ಘೋಷಣೆ ಮಾಡುವ ನಿರ್ಧಾರವನ್ನು ಕೈಬಿಡಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲವು ಪರಿಸರವಾದಿಗಳು ರಾಜ್ಯ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಈ ವಿಚಾರವನ್ನು ಮರುಪರಿಶೀಲನೆ ಮಾಡುವಂತೆ ಸೂಚನೆ ನೀಡಿತ್ತು. ಈ ಸೂಚನೆ ಮೇರೆಗೆ ವನ್ಯಜೀವಿ ಮಂಡಳಿ ವನ್ಯಜೀವಿ (ರಕ್ಷಣೆ) ಕಾಯಿದೆ 1972 ರಲ್ಲಿ ಸೆಕ್ಷನ್ 36ಎ ಪ್ರಕಾರ ಸ್ಥಳೀಯ ಸಮುದಾಯಗಳೊಂದಿಗೆ ಸಮಾಲೋಚನೆ ನಡೆಸಿ ಜನಾಭಿಪ್ರಾಯ ಸಂಗ್ರಹಿಸಬೇಕಿತ್ತು. ಆದರೆ, ಮಂಡಳಿಯು ಯಾವುದೇ ಜನಾಭಿಪ್ರಾಯ ಸಂಗ್ರಹಿಸದೇ ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳಲು ಪ್ರಯತ್ನ ನಡೆಸುತ್ತಿರುವುದಕ್ಕೆ ತೀವ್ರ ವಿರೋಧವಿದೆ ಎಂದು ತಿಳಿಸಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ ಹೆಸರಘಟ್ಟ, ಶಿವಕೋಟೆ, ಹುರಳಿಚಿಕ್ಕನಹಳ್ಳಿ, ಅರಕೆರೆ ಮತ್ತು ಸೊಣ್ಣೇನಹಳ್ಳಿ ಗ್ರಾಮಪಂಚಾಯ್ತಿಗಳು ಗ್ರಾಮಸಭೆ ನಡೆಸಿ ರಾಜ್ಯ ವನ್ಯಜೀವಿ ಮಂಡಳಿಯು ಪ್ರಸ್ತಾವನೆಯನ್ನು ಮಂಡಿಸುತ್ತಿರುವುದರ ವಿರುದ್ಧ ನಿರ್ಣಯ ಕೈಗೊಂಡು ಕೂಡಲೇ ಪ್ರಸ್ತಾವನೆಯನ್ನು ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿವೆ ಎಂದು ಅವರು ಹೇಳಿದ್ದಾರೆ.

ಸಂಸದರು ವಾಸ್ತವ ಅರಿಯಲಿ
ಹೋರಾಟದ ಹೆಸರಿನಲ್ಲಿ ಈ ಕಾನೂನು ಬಾಹಿರ ನಿರ್ಣಯ ತೆಗೆದುಕೊಳ್ಳುವಂತೆ ಮಾಡಲು ಪ್ರಯತ್ನ ಮಾಡುತ್ತಿರುವವರಿಗೆ ಬೆಂಬಲ ವ್ಯಕ್ತಪಡಿಸಿರುವ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರ ಬಗ್ಗೆ ಎಸ್.ಆರ್.ವಿಶ್ವನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತೇಜಸ್ವಿ ಸೂರ್ಯ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪ್ರತಿನಿಧಿ. ಅವರಿಗೆ ಹೆಸರಘಟ್ಟ ಹುಲ್ಲುಗಾವಲು ಮತ್ತು ಅದಕ್ಕೆ ಹೊಂದಿಕೊಂಡಿರುವ 45 ಕ್ಕೂ ಹೆಚ್ಚು ಗ್ರಾಮಗಳ ಲಕ್ಷಾಂತರ ಕುಟುಂಬಗಳ ನಾಡಿಮಿಡಿತದ ಬಗ್ಗೆ ಅರಿವಿಲ್ಲದಂತೆ ಕಾಣುತ್ತದೆ. ಮೊದಲು ಅವರು ಸ್ಥಳೀಯ ವಾಸ್ತವಾಂಶ ಅರಿತು ತಮ್ಮ ನಿರ್ಧಾರ ಪ್ರಕಟಿಸಬೇಕು. ಅದನ್ನು ಬಿಟ್ಟು ಯಾರೋ ಕೆಲವರು ಟ್ವೀಟ್ ಮಾಡಿದಾ ತಕ್ಷಣ ಅದಕ್ಕೆ ಬೆಂಬಲ ವ್ಯಕ್ತಪಡಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

ಅವೈಜ್ಞಾನಿಕ ವರದಿಗೆ ಮನ್ನಣೆ
ಹೆಸರಘಟ್ಟ ಸೇರಿದಂತೆ ಯಲಹಂಕ ಕ್ಷೇತ್ರದೆಲ್ಲೆಡೆ ಪರಿಸರ ಕಾಳಜಿಗೆ ಆದ್ಯತೆ ನೀಡಲಾಗುತ್ತಿದೆ. ಆದರೆ, ಕೆಲವರು ನೀಡಿದ ಅವೈಜ್ಞಾನಿಕ ವರದಿಯನ್ನು ಮುಂದಿಟ್ಟುಕೊಂಡು ವನ್ಯಜೀವಿ ಮಂಡಳಿ 16 ನೇ ಸಭೆಯಲ್ಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡುವ ಕುರಿತಾದ ಪ್ರಸ್ತಾವನೆಯನ್ನು ತರುತ್ತಿರುವುದು ಖಂಡನೀಯ ಎಂದು ಕಿಡಿ ಕಾರಿದ್ದಾರೆ.

ನಿರ್ಧಾರದ ವಿರುದ್ಧ ಹೋರಾಟ
ಒಂದು ವೇಳೆ, ಸಾರ್ವಜನಿಕರ ಹಿತದೃಷ್ಟಿಯನ್ನು ಗಾಳಿಗೆ ತೂರಿ ನಿರ್ಧಾರ ಕೈಗೊಂಡಲ್ಲಿ ಕ್ಷೇತ್ರದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಮತ್ತು ವನ್ಯಜೀವಿ ಮಂಡಳಿ ಜನಾಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ ಎಂದು ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next