Advertisement
ಒಂದು ಕಡೆ ಹೊಸಬರ ಸಿನಿಮಾ, ಇನ್ನೊಂದು ಕಡೆ ಸ್ಟಾರ್‌ಗಳ ಸಿನಿಮಾ, ಮತ್ತೂಂದು ಕಡೆ ಹಾಫ್ಬೀಟ್ ಎನ್ನುವ ಹೊಸ ಪ್ರಯೋಗ, ಹಾರರ್, ಥ್ರಿಲ್ಲರ್, ಕಾಮಿಡಿ … ಹೀಗೆ ಬೇರೆ ಬೇರೆ ಜಾನರ್‌ಗಳ ಮಧ್ಯೆ ಈ ವರ್ಷ ಗಮನ ಸೆಳೆಯುತ್ತಿರುವ ಸಿನಿಮಾ ಕೆಟಗರಿಯಲ್ಲಿ ನಾಯಕಿ ಪ್ರಧಾನ ಚಿತ್ರಗಳು ಕೂಡಾ ಇವೆ. ಕನ್ನಡ ಚಿತ್ರರಂಗದಲ್ಲಿ ಅವತ್ತಿನಿಂದ ಇವತ್ತಿನವರೆಗೂ ಸಾಕಷ್ಟು ನಾಯಕಿ ಪ್ರಧಾನ ಚಿತ್ರಗಳು ಬಂದಿವೆ.
ಇದರಲ್ಲಿ ಬಹುತೇಕ ಚಿತ್ರಗಳು ತಮ್ಮ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಾದಿಯಲ್ಲಿವೆ. ಇನ್ನೊಂದಿಷ್ಟು ಚಿತ್ರಗಳು ಚಿತ್ರೀಕರಣದಲ್ಲಿದ್ದು, ಈ ವರ್ಷವೇ ಚಿತ್ರಮಂದಿರದ ಬಾಗಿಲು ಬಡಿಯಲಿವೆ. ಇಲ್ಲಿ ಗಮನಿಸಬೇಕಾದ ಮತ್ತೂಂದು ಅಂಶವೆಂದರೆ ಈ ವರ್ಷ ಬರಲಿರುವ ನಾಯಕಿ ಪ್ರಧಾನ ಚಿತ್ರಗಳು ಬೇರೆ ಬೇರೆ ಜಾನರ್‌ಗೆ ಸೇರಿವೆ. ಹಾರರ್, ಥ್ರಿಲ್ಲರ್, ಫ್ಯಾಮಿಲಿ ಡ್ರಾಮಾ … ಹೀಗೆ ವಿಭಿನ್ನ ಅಂಶಗಳನ್ನು ಸ್ಪರ್ಶಿಸಿವೆ.
Related Articles
Advertisement
ನಾಯಕಿ ಪ್ರಧಾನ ಸಿನಿಮಾಗಳು ಚಿತ್ರಮಂದಿರದಲ್ಲಿ ಗಟ್ಟಿನೆಲೆಯೂರಿ, ನಿರ್ಮಾಪಕರ ಜೇಬು ತುಂಬಬೇಕಾದರೆ ಅಲ್ಲೊಂದು ಗಟ್ಟಿಕಥಾಹಂದರವಿರಬೇಕು. ಆ ಅಂಶವೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಬೇಕೇ ಹೊರತು, ಅದರಾಚೆಗಿನ ಅನಾವಶ್ಯಕ ಕಮರ್ಷಿಯಲ್ ಅಂಶಗಳಿಂದಲ್ಲ. ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳನ್ನು ಗಮನಿಸಿದರೆ “ಸೂಜಿದಾರ’ ಒಂದು ಸೂಕ್ಷ್ಮ ಕಥಾಹಂದರವಿರುವ ಚಿತ್ರವಾಗಿ ಗಮನಸೆಳೆದರೆ, “ಡಾಟರ್ ಆಫ್ ಪಾರ್ವತಮ್ಮ’ ಒಂದು ಖಡಕ್ ಹುಡುಗಿಯ ಪಾತ್ರದ ಮೂಲಕ ಮೋಡಿ ಮಾಡುವ ಸಾಧ್ಯತೆ ಇದೆ.ಉಳಿದಂತೆ “ಭೈರಾದೇವಿ’, “ದಮಯಂತಿ’, “ವಜ್ರಮುಖೀ’ ಚಿತ್ರಗಳು ಹಾರರ್-ಥ್ರಿಲ್ಲರ್ ಜಾನರ್‌ಗೆ ಸೇರಿವೆ. ಕಳೆದ ವರ್ಷ “ಸೆಕೆಂಡ್ ಹಾಫ್’ ಎಂಬ ನಾಯಕಿ ಪ್ರಧಾನ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಪ್ರಿಯಾಂಕಾ ಉಪೇಂದ್ರ ಈ ವರ್ಷ “ದೇವಕಿ’ಯಾಗಿ ತೆರೆಮೇಲೆ ಬರಲು ಅಣಿಯಾಗಿದ್ದಾರೆ. ಇತ್ತ ಕಡೆ ನಟಿ ಹರಿಪ್ರಿಯಾ ಅವರ “ಸೂಜಿದಾರ’ ಹಾಗೂ “ಡಾಟರ್ ಆಫ್ ಪಾರ್ವತಮ್ಮ’ ಚಿತ್ರಗಳು ಒಂದರ ಹಿಂದೊಂದರಂತೆ ತೆರೆಕಾಣಲು ಅಣಿಯಾಗಿವೆ. ಚಿತ್ರರಂಗಕ್ಕೆ ಬರುತ್ತಿರುವ ಹೊಸ ನಿರ್ದೇಶಕರು ನಾಯಕಿ ಪ್ರಧಾನ ಚಿತ್ರಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅದಕ್ಕೆ ಕಾರಣ ಕಂಟೆಂಟ್ ಸಿನಿಮಾ. ಇವತ್ತು ಕಮರ್ಷಿಯಲ್ ಸಿನಿಮಾಗಳಿಗೆ ಪರ್ಯಾಯವಾಗಿ ಕಂಟೆಂಟ್ ಸಿನಿಮಾಗಳು ಬೆಳೆಯುತ್ತಿವೆ. ಆ ತರಹದ ಕಂಟೆಂಟ್ ಸಿನಿಮಾಗಳನ್ನು ಮಾಡುವ ಹೊಸಬರಿಗೆ ನಾಯಕಿ ಪ್ರಧಾನ ಚಿತ್ರಗಳು ಸೂಕ್ತ ವೇದಿಕೆಯಾಗುತ್ತಿರುವುದು ಸುಳ್ಳಲ್ಲ. ಒಂದು ನಾಯಕಿ ಪ್ರಧಾನ ಚಿತ್ರ ಗೆದ್ದರೆ, ಅದು ಮತ್ತೂಂದಿಷ್ಟು ಮಂದಿಗೆ ದಾರಿ ಮಾಡಿಕೊಡುತ್ತದೆ, ಇನ್ನೊಂದಿಷ್ಟು ಹೊಸ ಸಿನಿಮಾಗಳ ಹುಟ್ಟಿಗೆ ಕಾರಣವಾಗುತ್ತವೆ. ಈ ವರ್ಷ ಬಿಡುಗಡೆಯ ಸಾಲಿನಲ್ಲಿರುವ ಸಿನಿಮಾಗಳಲ್ಲಿ ಯಾವ ಸಿನಿಮಾವನ್ನು ಪ್ರೇಕ್ಷಕ ಕೈ ಹಿಡಿಯುತ್ತಾನೆ, ಯಾವ ಸಿನಿಮಾ ಯಾರಿಗೆ ಸ್ಫೂರ್ತಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕು. ನಿಮ್ಮ ಹೆಸರಿನಲ್ಲೇ ಸಿನಿಮಾ ಗುರುತಿಸಿಕೊಳ್ಳುತ್ತದೆ ಎಂಬುದು ನಾಯಕಿ ಪ್ರಧಾನ ಚಿತ್ರದ ಒಂದು ಪ್ಲಸ್ ಆದರೆ, ನಾಯಕಿಗೆ ಅಷ್ಟೇ ಜವಾಬ್ದಾರಿ ಕೂಡಾ ಇರುತ್ತದೆ. ಹೀರೋಗಳ ಸಿನಿಮಾವಾದರೆ ಎಲ್ಲಾ ಜವಾಬ್ದಾರಿ ಅವರ ಮೇಲೆ ಇರುತ್ತದೆ. ಆದರೆ, ಇಲ್ಲಿ ನಾಯಕಿ ಎಲ್ಲಾ ವಿಷಯದಲ್ಲೂ ಗಮನಹರಿಸಬೇಕು. ಅದು ತಾರಾಬಳಗದ ಆಯ್ಕೆಯಿಂದ ಹಿಡಿದು ಸಿನಿಮಾದ ಪ್ರಮೋಶನ್‌ವರೆಗೂ. ನಾನಂತೂ ನಾಯಕಿ ಪ್ರಧಾನ ಚಿತ್ರಗಳನ್ನು ಖುಷಿಯಿಂದ ಮಾಡುತ್ತಿದ್ದೇನೆ…
— ಹರಿಪ್ರಿಯಾ, ನಟಿ — ರವಿಪ್ರಕಾಶ್ ರೈ