Advertisement

ಹೀರೋ in ವಿಲನ್ ಔಟ್ ; 6 ಪ್ರಶ್ನೆ ನೀವೇ ಉತ್ತರ

10:21 AM Dec 08, 2019 | mahesh |

ಇಂದು ದೌರ್ಜನ್ಯಗಳಿಗೆ ಮೇರೆಗಳಿಲ್ಲ. ದೆಹಲಿಯಲ್ಲೋ, ಹೈದರಾಬಾದ್‌ನಲ್ಲೋ ಹೆಣ್ಣಿನ ಮೇಲೆ ಹಾಗಾಯ್ತಲ್ಲ ಎನ್ನುತ್ತಾ ಕಳವಳಿಸುತ್ತಿರುವಾಗಲೇ, ಬೆಂಗಳೂರಿನಲ್ಲಿ ಓಡಾಡುವ ಹೆಣ್ಣಿಗೂ ಪುಟ್ಟ ಭಯವೊಂದು ಸಹಜವಾಗಿ ಆವರಿಸುತ್ತದೆ. ಆಪತ್ಕಾಲ ಬಂದಾಗ ತಬ್ಬಿಬ್ಟಾಗುವುದು ಸಹಜ. ಕೆಲವು ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳುತ್ತಾ, ಒಂದಿಷ್ಟು ಸೂತ್ರಗಳನ್ನು ಅನುಸರಿಸಿದರೆ, ಹೆಣ್ಮಕ್ಕಳು ಧೈರ್ಯದಿಂದಲೇ ಓಡಾಡಬಹುದು…

Advertisement

ಕಬ್ಬನ್‌ ಪಾರ್ಕ್‌ನಲ್ಲಿ ಅದೊಂದು ಚೆಂದದ ಭಾನುವಾರ. ಅಲ್ಲಿ ಕೆಲವು ದಿಟ್ಟ ಮಹಿಳೆಯರು, ಒಂದು ಸಾಹಸಕ್ಕೆ ಇಳಿದಿದ್ದರು. ಪಾರ್ಕ್‌ನ ಮರಗಳ ಕೆಳಗೆ, ಹಸಿರು ಹುಲ್ಲಿನ ಮೇಲೆ ಕೆಲಹೊತ್ತು ಸುಮ್ಮನೆ ಮಲಗುವ ಯೋಜನೆ ಅವರದ್ದು. ಒಬ್ಬಳು ಮಹಿಳೆ ಹಾಗೆ ಮಲಗಿದ್ದಾಳೆ ಅಂದಾಗ ಪುರುಷ ಆಕೆಯನ್ನು ಯಾವ ದೃಷ್ಟಿಕೋನದಿಂದ ನೋಡುತ್ತಾನೆ ಎನ್ನುವುದನ್ನು ಪರೀಕ್ಷಿಸಲೆಂದೇ, “ಬ್ಲ್ಯಾಂಕ್‌ ನಾಯ್ಸ ‘ ಎನ್ನುವ ಮಹಿಳಾ ತಂಡ ಈ ಯೋಜನೆಯನ್ನು ರೂಪಿಸಿತ್ತು.

“ಯಾರೋ ಮಲಗಿದ್ದಾರೆ, ನಮಗ್ಯಾಕೆ ಅವರ ಉಸಾಬರಿ?’ ಎಂದುಕೊಂಡು ಹೋದವರು, ಬಹಳ ಕಡಿಮೆ. ಯಾರಾಕೆ? ಇಲ್ಲೇಕೆ ಮಲಗಿದ್ದಾಳೆ? ಎನ್ನುವ ಅನುಮಾನ ಮತ್ತೆ ಕೆಲವರಿಗೆ. ಅನುಕಂಪದ ನೆಪದಲ್ಲಿ, ಟೈಮ್‌ ಪಾಸ್‌ಗೆ ಮಾತಾಡಿಸಲು ಬಂದವರು; ಮಲಗಿದ್ದ ಹುಡುಗಿ, ಎಷ್ಟು ಚೆಂದ ಇದ್ದಾಳೆ ಅಂತ ಆಸೆಗಣ್ಣಿನಿಂದ ನೋಡಿದವರೇ ಅನೇಕರು.

ಈ ಪ್ರಯೋಗ ನಡೆದ ಕೆಲವು ವರ್ಷಗಳೇ ಆದವು. ಬೆಂಗಳೂರಿನಲ್ಲಿ ಅಂದಿನ ದೃಶ್ಯ ಈಗ ಬದಲಾಗಿದೆಯಾ? ಮಹಿಳೆಯೊಬ್ಬಳು ನಿರ್ಜನ ರಸ್ತೆಯಲ್ಲಿ ನಡೆದಾಡುವಾಗ, ಆಫೀಸ್‌ನ ಡ್ನೂಟಿ ಮುಗಿಸಿ ರಾತ್ರಿ ಮರಳುವಾಗ, ಇನ್ನೆಲ್ಲೋ ಚೆಂದದ ಬಳೆ ನೋಡುತ್ತಾ, ಟಿಕ್ಕಿಯನ್ನು ಕೊಳ್ಳಲೆಂದೋ ಬೀದಿಯ ಅಂಗಡಿ ಮುಂದೆ ನಿಂತಾಗ, ಫ‌ುಡ್‌ ಸ್ಟ್ರೀಟ್‌ನಲ್ಲಿ ಪಾನಿಪೂರಿ ತಿನ್ನುವಾಗ, ಯಾರೋ ಕೆಕ್ಕರಿಸಿಕೊಂಡು ನೋಡುವ ಅನುಭವಗಳು ಇಂದಿಗೂ ಕಡಿಮೆಯಾಗಿಲ್ಲ. ಅದರಲ್ಲೂ ಮೆಟ್ರೋದಲ್ಲಿ, ಬಿಎಂಟಿಸಿ ಬಸ್ಸುಗಳಲ್ಲಿ ಮೈ ಉಜ್ಜಿಕೊಂಡು, ಸುಖ ಅನುಭವಿಸುವ ಕಾಮುಕರೂ ಇದ್ದಾರೆ.

ಅನೇಕ ಸಲ ಹೀಗಾದಾಗ, ಹೆಣ್ಣು “ಇದೆಲ್ಲ ಕಾಮನ್‌’ ಅಂತಂದುಕೊಂಡು, ಆ ನೋವನ್ನು ಯಾರಿಗೂ ಹೇಳಲಾಗದೆ, ನುಂಗಿಕೊಳ್ಳುವುದೇ ಹೆಚ್ಚು. ಎಲ್ಲೋ ಬೆರಳೆಣಿಕೆ ಮಂದಿಯಷ್ಟೇ, ಇದನ್ನು ಬಲವಾಗಿ ವಿರೋಧಿಸಿ, ಕಾಮುಕರಿಗೆ ತಕ್ಕ ಶಾಸ್ತಿ ಮಾಡುತ್ತಾರೆ. ಮಹಾನಗರದ ಮಹಿಳೆಯರು ತಮಗೆ ತಾವೇ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ, ಒಂದಿಷ್ಟು ಸೂತ್ರಗಳನ್ನು ಅನುಸರಿಸಿದರೆ, ಧೈರ್ಯದಿಂದಲೇ ಓಡಾಡಬಹುದು.

Advertisement

1. ನೀವು ಓಡಾಡುವ ಪ್ರದೇಶ ಹೇಗಿದೆ?
ನೀವು ಹೋಗಬೇಕಾದ ಅಥವಾ ಓಡಾಡುವ ಪರಿಸರದ ಬಗ್ಗೆ ಮುಂಚಿತವಾಗಿ ನಿಮಗೆ ತಿಳಿದಿರಲಿ. ಅಲ್ಲಿ ಜನಸಂಚಾರ, ಆಟೋಸಂಚಾರ ಎಷ್ಟಿರುತ್ತೆ? ಖಾತ್ರಿಪಡಿಸಿಕೊಳ್ಳಿ. ಜಾಸ್ತಿ ಮಂದಿ ಇರುವ ಪ್ರದೇಶದಲ್ಲಿ, ಏನಾದರೂ ಕಹಿ ಘಟನೆ ಸಂಭವಿಸಿದಾಗ, ಧ್ವನಿಯೆತ್ತಿದರೆ ಯಾರಾದರೂ ನೆರವಿಗೆ ಬಂದೇ ಬರುತ್ತಾರೆ.

2. ನೀವೆಲ್ಲಿ ಇದ್ದೀರಾ?
ಎಲ್ಲಿಗೆ ಹೋಗುತ್ತೀರಿ ಎಂಬ ವಿಚಾರ ಆಪ್ತರಿಗೆ ಗೊತ್ತಿರಲಿ. ನಿಮ್ಮ ಪ್ರಯಾಣವನ್ನು ಸೀಕ್ರೆಟ್‌ ಆಗಿ ಇಡುವ ಪ್ರಯತ್ನ ಬೇಡ. ಹೊರಡುವಾಗ ಕನಿಷ್ಠ ಇಬ್ಬರು ಆಪ್ತರಿಗಾದರೂ, ವಿಷಯ ತಿಳಿಸಿದರೆ, ಇದರಿಂದ ಅನುಕೂಲವೇ ಆಗುತ್ತದೆ.

3. ಬ್ಯಾಟರಿ ಫ‌ುಲ್‌ ಇದೆಯೇ?
ಈಗಂತೂ ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್‌ ಇರುತ್ತೆ. ಆದರೆ, ತುರ್ತು ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಬ್ಯಾಟರಿ ಡೌನ್‌ ಆಗಿದ್ದರೆ, ಸಂಪರ್ಕಕ್ಕೆ ಸಮಸ್ಯೆ ಆಗಬಹುದು. ಮೊಬೈಲ್‌ನ ಬ್ಯಾಟರಿಯನ್ನು ಪೂರ್ಣ ಚಾರ್ಜ್‌ ಮಾಡಿಕೊಂಡೇ ಹೊರಡಿ. ಇಲ್ಲವೇ, ಪವರ್‌ಬ್ಯಾಂಕ್‌ ಜತೆಗಿಟ್ಟುಕೊಳ್ಳಿ.

4. ವ್ಯಾನಿಟಿ ಬ್ಯಾಗ್‌ನಲ್ಲಿ ಇವಿದೆಯೇ?
ಯಾವುದಕ್ಕೂ ಬ್ಯಾಗ್‌ನಲ್ಲಿ ಖಾರದ ಪುಡಿಯನ್ನು ಇಟ್ಟುಕೊಂಡಿರಿ. ಈಗಂತೂ ಪೆಪ್ಪರ್‌ ಸ್ಪ್ರೆ ಎಲ್ಲ ಕಡೆಯೂ ಸಿಗುತ್ತದೆ. ಅದೂ ಜತೆಗಿರಲಿ. ಬಟ್ಟೆ ಪಿನ್ನು, ಪುಟ್ಟ ಸ್ವಿಸ್‌ ಚಾಕು ಇದ್ದರೂ, ಆಪತ್ಕಾಲಕ್ಕೆ ನೆರವಿಗೆ ಬರುತ್ತದೆ.

5. ಒಂಟಿ ಪ್ರಯಾಣ ಬೇಕೆ?
ಪ್ರತಿ ಹೆಣ್ಣಿಗೂ ಆಪ್ತರು, ಗೆಳತಿಯರು ಇದ್ದೇ ಇರುತ್ತಾರೆ. ಶಾಪಿಂಗ್‌ಗೆ, ಹೊರಗೆ ಸುತ್ತಾಡಲು, ಸಿನಿಮಾಕ್ಕೆ… ಹೀಗೆ ಎಲ್ಲಿಗೆ ಹೋಗುವುದಿದ್ದರೂ ಒಬ್ಬರೇ ಹೋಗುವ ಬದಲು, ಗುಂಪಿನಲ್ಲಿ ಹೋದರೆ ಒಂದು ಧೈರ್ಯ ಜತೆಯಾಗುತ್ತದೆ.

6. ಅವರ ನೋಟಗಳು ಹೇಗಿವೆ?
ಎಲ್ಲೋ ಕ್ಯಾಬ್‌ನಲ್ಲೋ, ಆಟೋದಲ್ಲೋ ಕುಳಿತಿರುತ್ತೀರಿ. ಚಾಲಕರಲ್ಲಿ ಅನೇಕರು ಒಳ್ಳೆಯವರೇ. ಆದರೆ, ಕೆಲವರು ನಿಮ್ಮನ್ನು ಬೇರೆ ದೃಷ್ಟಿಯಿಂದ ಗಮನಿಸುತ್ತಿರಬಹುದು. ಪದೇಪದೆ ಮಿರರ್‌ನಲ್ಲಿ ನೋಡುವ ಪ್ರಯತ್ನಗಳನ್ನು ಮಾಡಬಹುದು. ಇಂಥ ವೇಳೆ, ಆಪ್ತರಿಗೆ ಫೋನಾಯಿಸಿ ನಿಮ್ಮ ಇರುವಿಕೆಯ ಬಗ್ಗೆ ಪ್ರಾಥಮಿಕ ಮಾಹಿತಿ ನೀಡಿ. ಇಲ್ಲವೇ, ಆ ಕಾಮದ ಕಣ್ಣಿನವನಿಗೆ ಖಡಕ್ಕಾಗಿ ವಾರ್ನಿಂಗ್‌ ಮಾಡಿಬಿಡಿ.

ಸುರಕ್ಷಾ ಆ್ಯಪ್‌ಬಳಕೆ ಹೇಗೆ?
ಬೆಂಗಳೂರಿನ ಮಹಿಳೆಯರಿಗೆ ಆಪತ್ಕಾಲದಲ್ಲಿ ನೆರವಾಗಲೆಂದೇ, ಪೊಲೀಸರು ಸುರಕ್ಷಾ ಆ್ಯಪ್‌ ಅನ್ನು ಆರಂಭಿಸಿದ್ದಾರೆ. ಪ್ಲೇಸ್ಟೋರ್‌ನಲ್ಲಿ ಈ ಆ್ಯಪ್‌ ಲಭ್ಯವಿದ್ದು, ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಹೆಸರು, ಮೊಬೈಲ್‌ ನಂಬರನ್ನು ರಿಜಿಸ್ಟರ್‌ ಮಾಡಿಕೊಂಡಾಗ, ಒಂದು ಒಟಿಪಿ ಬರುತ್ತದೆ. ನಂತರ, ನಿಮ್ಮನ್ನು ಅತಿ­ ಯಾಗಿ ಇಷ್ಟಪಡುವ ಮತ್ತು ತಕ್ಷಣ ನೆರವಿಗೆ ಧಾವಿಸಬಹುದಾದಂಥ ಇಬ್ಬರು ಆಪ್ತರ ಮೊಬೈಲ್‌ ನಂಬರನ್ನು ಅಲ್ಲಿ ದಾಖಲಿಸಬೇಕು. ಏನಾದರೂ, ಕಹಿಘಟನೆ ಸಂಭವಿಸಿದಾಗ, ಸಮೀಪದ ಪೊಲೀಸ್‌ ಠಾಣೆಗಲ್ಲದೆ, ಆ ಇಬ್ಬರಿಗೂ ಸಂದೇಶ ತಲುಪುತ್ತದೆ. ಆ್ಯಪ್‌ನಲ್ಲಿರುವ ರೆಡ್‌ ಬಟನ್‌ ಒತ್ತಿದರೆ, ಆ ತುರ್ತು ಸಂದೇಶ ಪೊಲೀಸರಿಗೆ ಮುಟ್ಟುತ್ತದೆ.

ಎಂಟೇ 8 ನಿಮಿಷ , ಹೊಯ್ಸಳ ನಿಮ್ಮ ಬಳಿಗೆ…
ಮಹಿಳೆ ಮತ್ತು ಮಕ್ಕಳ ಸುರಕ್ಷೆಗಾಗಿ ಬೆಂಗಳೂರು ಪೊಲೀಸರು ಹೆಚ್ಚಿನ ಆದ್ಯತೆ ಕೊಡುತ್ತಾರೆ. ಅದರ ಮುಂದುವರಿದ ಭಾಗವಾಗಿ ಸುರಕ್ಷಾ ಆ್ಯಪ್‌ ಅನ್ನು ಕೂಡಾ ಬಿಡುಗಡೆ ಮಾಡಿದ್ದೇವೆ. ಈಗಾಗಲೇ ಬಹಳಷ್ಟು ಮಹಿಳೆಯರು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ತುರ್ತು ಸಂದರ್ಭದಲ್ಲಿ ಆ್ಯಪ್‌ನ ಕೆಂಪು ಬಟನ್‌ ಅನ್ನು ಒತ್ತಿದರೆ ತಕ್ಷಣ ಸಹಾಯವಾಣಿ (100)ಗೆ ಕರೆ ಹೋಗುತ್ತದೆ. ತಕ್ಷಣ ನೀವು ಎಲ್ಲಿದ್ದೀರೆಂಬ ಮಾಹಿತಿ ನಮಗೆ ಗೊತ್ತಾಗುತ್ತದೆ. ಹೊಯ್ಸಳ ವಾಹನದಲ್ಲಿರುವ ಲೈವ್‌ ಟ್ರ್ಯಾಕಿಂಗ್‌ ಸಿಸ್ಟಂ ಸಹಾಯದಿಂದ ಏಳೆಂಟು ನಿಮಿಷದೊಳಗೆ ನೀವು ಇರುವ ಜಾಗಕ್ಕೆ ನಮ್ಮ ಸಿಬ್ಬಂದಿ ತಲುಪುತ್ತಾರೆ. ಅಷ್ಟೇ ಅಲ್ಲದೆ, ನಗರದಲ್ಲಿ ಮಹಿಳೆಯರಿಗಾಗಿಯೇ “ಪಿಂಕ್‌ ಹೊಯ್ಸಳ’ ಸಕ್ರಿಯವಾಗಿದೆ. ನನ್ನ ವಿಭಾಗದಲ್ಲಿ, ಮಹಿಳೆಯರು ಹೆಚ್ಚು ಓಡಾಡುವ 400ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿ (ಪಾರ್ಕ್‌, ಕಾಲೇಜು, ಮೆಟ್ರೋ ಸ್ಟೇಷನ್‌) ಅಲ್ಲೆಲ್ಲ ಪಿಂಕ್‌ ಹೊಯ್ಸಳ ಹೆಚ್ಚು ಅಲರ್ಟ್‌ ಆಗಿರುವಂತೆ ನೋಡಿಕೊಳ್ಳಲಾಗಿದೆ. ಇನ್ನು, ಪ್ರತಿಯೊಂದು ಪೊಲೀಸ್‌ ಠಾಣೆಯಲ್ಲೂ ಮಹಿಳೆಯರ ದೂರು ದಾಖಲಿಸಿಕೊಳ್ಳಲು ಪ್ರತ್ಯೇಕ ಸೆಲ್‌ ಇರುತ್ತದೆ. ಹಾಗಾಗಿ, ಆಪತ್ತು ಎದುರಾದಾಗ ನಿಸ್ಸಂಕೋಚವಾಗಿ ಹತ್ತಿರದ ಪೊಲೀಸ್‌ ಠಾಣೆ, ಸುರಕ್ಷಾ ಆ್ಯಪ್‌, ತುರ್ತು ಕರೆಯ ಸೌಲಭ್ಯಗಳನ್ನು ಬಳಸಿ, ಸುರಕ್ಷೆ ಪಡೆದುಕೊಳ್ಳಿ.

– ರೋಹಿಣಿ ಕಟೋಚ್‌ ಸೆಪಟ್‌, ಬೆಂಗಳೂರು ದಕ್ಷಿಣ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next