Advertisement

ಇಲ್ಲುಂಟು ಸಾರ್‌ ವೆರೈಟಿ ಸಾರೂ…

06:00 AM Jun 27, 2018 | |

ಹಸಿವೆ ಕೆರಳಿಸುವ, ನಾಲಿಗೆಗೆ ರುಚಿಯ ಅನುಭವ ನೀಡಿ ಹೆಚ್ಚು ಆಹಾರ ಸೇವಿಸುವಂತೆ ಮಾಡುವ ಸಾರು ಯಾರಿಗೆ ಇಷ್ಟವಿಲ್ಲ? ಉಪ್ಪು, ಹುಳಿ, ಖಾರವನ್ನು ಸಮಪ್ರಮಾಣದಲ್ಲಿ ಒಳಗೊಂಡ, ಸುಲಭವಾಗಿ ಮಾಡಬಹುದಾದ ಕೆಲವೊಂದು ಸಾರುಗಳ ಪರಿಚಯ ಇಲ್ಲಿದೆ.

Advertisement

1.    ಕರಿಬೇವಿನ ಸಾರು
ಬೇಕಾಗುವ ಸಾಮಗ್ರಿ: ಕರಿಬೇವಿನ ಎಲೆ 10-12, ಟೊಮೇಟೊ-1/2, ಈರುಳ್ಳಿ-1, ತೆಂಗಿನತುರಿ-1/4 ಕಪ್‌, ಅಚ್ಚ ಖಾರದ ಪುಡಿ-2 ಚಮಚ, ಹುಣಸೆ ರಸ-3 ಚಮಚ, ಬೆಲ್ಲದ ತುರಿ-3 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ

ಮಾಡುವ ವಿಧಾನ : ಟೊಮೆಟೊ, ಈರುಳ್ಳಿ, ತೆಂಗಿನ ತುರಿ ಸೇರಿಸಿ ಅರೆದಿರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ ಸಾಸಿವೆ-ಇಂಗು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ, ಕರಿಬೇವಿನ ಸೊಪ್ಪು ಹಾಕಿ ಬಾಡಿಸಿ. ಬಾಡಿಸಿದ ಮಿಶ್ರಣಕ್ಕೆ, ಹುಣಸೆ ರಸ, ಬೆಲ್ಲದ ತುರಿ, ಅಚ್ಚ ಖಾರದ ಪುಡಿ, ಉಪ್ಪು, ಅರೆದ ಮಿಶ್ರಣ ಹಾಕಿ ಕುದಿಸಿದರೆ, ರುಚಿಯಾದ ಕರಿಬೇವಿನ ಸಾರು ರೆಡಿ. 

2.    ಹುರುಳಿ ಸಾರು
ಬೇಕಾಗುವ ಸಾಮಗ್ರಿ : ಹುರುಳಿ ಕಾಳು-1 ಕಪ್‌, ಒಣಮೆಣಸಿನಕಾಯಿ 3-4, ಕೊತ್ತಂಬರಿ ಬೀಜ-2 ಚಮಚ, ಕಾಳುಮೆಣಸು-1/2 ಚಮಚ, ಜೀರಿಗೆ-1 ಚಮಚ, ಮೆಂತ್ಯೆ-1/2 ಚಮಚ, ಹುಣಸೆ ರಸ-3 ಚಮಚ, ಬೆಲ್ಲದ ತುರಿ-2 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು-4 ಚಮಚ, ಉಪ್ಪು-ರುಚಿಗೆ ತಕ್ಕಷ್ಟು ಎಣ್ಣೆ-3 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ.

ಮಾಡುವ ವಿಧಾನ : ಹುರುಳಿ ಕಾಳನ್ನು ಆರು ಗಂಟೆ ನೀರಿನಲ್ಲಿ ನೆನೆಸಿ, ಬೇಯಿಸಿಡಿ. ಕಾಳುಗಳ ಕಟ್ಟು ತೆಗೆದು ಸಾರಿಗೆ ಉಪಯೋಗಿಸಿ. ಬೇಯಿಸಿದ ಕಾಳುಗಳಿಂದ ಪಲ್ಯ, ಕೋಸಂಬರಿ ತಯಾರಿಸಬಹುದು. ಒಣಮೆಣಸಿನಕಾಯಿ, ಕೊತ್ತಂಬರಿ ಬೀಜ, ಕಾಳುಮೆಣಸು, ಜೀರಿಗೆ, ಮೆಂತ್ಯೆಯನ್ನು  ಬೇರೆಬೇರೆಯಾಗಿ ಹುರಿದು, ಪುಡಿ ಮಾಡಿ ಸಾರಿನ ಪುಡಿ ತಯಾರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ-ಇಂಗಿನ ಒಗ್ಗರಣೆ ಮಾಡಿ. ಒಗ್ಗರಣೆಗೆ ಹುಣಸೆ ರಸ, ಬೆಲ್ಲದ ತುರಿ, ಉಪ್ಪು ಹಾಕಿ ಕುದಿಯಲಿರಿಸಿ. ಕುದಿಯುವಾಗ ಹುರಳಿ ಕಾಳುಗಳ ಕಟ್ಟು, ಸಾರಿನ ಪುಡಿ ಹಾಕಿ. ಒಲೆಯಿಂದ ಕೆಳಗಿರಿಸಿ ಕೊತ್ತಂಬರಿ ಸೊಪ್ಪು ಹಾಕಿದರೆ, ಪುಷ್ಟಿದಾಯಕ ಹುರುಳಿ ಸಾರು ರೆಡಿ. 

Advertisement

3.    ಹೆಸರು ಬೇಳೆ ಸಾರು
ಬೇಕಾಗುವ ಸಾಮಗ್ರಿ : ಬೇಯಿಸಿದ ಹೆಸರು ಬೇಳೆ-1 ಕಪ್‌, ಕಾಳುಮೆಣಸು 7-8, ಉದ್ದಿನ ಬೇಳೆ-1 ಚಮಚ, ಮೆಂತ್ಯೆ-1/2 ಚಮಚ, ಒಣಮೆಣಸು 3-4, ತೆಂಗಿನ ತುರಿ-1/4 ಕಪ್‌, ಉಪ್ಪು-ರುಚಿಗೆ ತಕ್ಕಷ್ಟು, ತುಪ್ಪ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಕರಿಬೇವಿನ ಎಲೆ 7-8, ಕತ್ತರಿಸಿದ ಕೊತ್ತಂಬರಿ ಸೊಪ್ಪು-3 ಚಮಚ

ಮಾಡುವ ವಿಧಾನ: ಕಾಳುಮೆಣಸು, ಉದ್ದಿನ ಬೇಳೆ, ಮೆಂತ್ಯೆ, ಒಣಮೆಣಸಿನ ಕಾಯಿಯನ್ನು ಬೇರೆಬೇರೆಯಾಗಿ ಹುರಿದು, ಒಟ್ಟಿಗೆ ಸೇರಿಸಿ, ತೆಂಗಿನತುರಿಯೊಂದಿಗೆ ಅರೆದಿರಿಸಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ, ಸಾಸಿವೆ-ಇಂಗಿನ ಒಗ್ಗರಣೆ ಮಾಡಿ. ಒಗ್ಗರಣೆಗೆ, ಕರಿಬೇವಿನ ಎಲೆಗಳನ್ನು ಹಾಕಿ ಬಾಡಿಸಿ, ಅರೆದ ಮಸಾಲೆ, ಉಪ್ಪು, ಬೇಯಿಸಿದ  ಹೆಸರು ಬೇಳೆಯನ್ನು ಹಾಕಿ ಕುದಿಸಿ. ಒಲೆಯಿಂದ ಕೆಳಗಿರಿಸಿ, ಕೊತ್ತಂಬರಿ ಸೊಪ್ಪು ಸೇರಿಸಿ. 

4.    ಸಬ್ಬಸಿಗೆ ಸೊಪ್ಪಿನ ಸಾರು
ಬೇಕಾಗುವ ಸಾಮಗ್ರಿ : ಕತ್ತರಿಸಿದ ಸಬ್ಬಸಿಗೆ ಸೊಪ್ಪು-2 ಕಪ್‌, ಹಸಿಮೆಣಸಿನಕಾಯಿ 5-6, ಕತ್ತರಿಸಿದ ಈರುಳ್ಳಿ-1/2 ಕಪ್‌, ತೆಂಗಿನ ತುರಿ-1/4 ಕಪ್‌, ಕತ್ತರಿಸಿದ ಕೊತ್ತಂಬರಿ ಸೊಪ್ಪು-4 ಚಮಚ, ಬೇಯಿಸಿದ ತೊಗರಿ ಬೇಳೆ-2 ಕಪ್‌, ಜೀರಿಗೆ ಪುಡಿ-2 ಚಮಚ, ಕಾಳುಮೆಣಸಿನ ಪುಡಿ-1/2 ಚಮಚ, ಹುಣಸೆ ರಸ-3 ಚಮಚ, ಬೆಲ್ಲದ ತುರಿ-3 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ.

ಮಾಡುವ ವಿಧಾನ : ಸಬ್ಬಸಿಗೆ ಸೊಪ್ಪು, ಹಸಿಮೆಣಸಿನಕಾಯಿ, ಈರುಳ್ಳಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಸೇರಿಸಿ, ಅರೆದಿರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ, ಇಂಗಿನ ಒಗ್ಗರಣೆ ಮಾಡಿ. ಅದಟೆR ಹುಣಸೆ ರಸ, ಬೆಲ್ಲ, ಉಪ್ಪು, ಕಾಳುಮೆಣಸಿನ ಪುಡಿ, ಜೀರಿಗೆ ಹಾಕಿ ಕುದಿಯಲಿರಿಸಿ. ಈ ಮಿಶ್ರಣಕ್ಕೆ, ಅರೆದ ತರಕಾರಿ ಮಿಶ್ರಣ, ಬೇಯಿಸಿದ ತೊಗರಿ ಬೇಳೆ ಹಾಕಿ ಕುದಿಸಿದರೆ ರುಚಿಯಾದ ಸಬ್ಬಸಿಗೆ ಸೊಪ್ಪಿನ ಸಾರು ರೆಡಿ. 

ಜಯಶ್ರೀ ಕಾಲ್ಕುಂದ್ರಿ , ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next