ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಶುಕ್ರವಾರ ಸಂಜೆ ಕೆ.ಜಿ.ನಗರದ ಸನ್ಯಾಸಿ ಪಾಳ್ಯದಲ್ಲಿ ನಡೆದಿದೆ. ಗವಿಪುರಂ ನಿವಾಸಿ ಮಂಜುಳಾ (38) ಆ್ಯಸಿಡ್ ದಾಳಿಗೊಳಗಾದ ಮಹಿಳೆ.
ಪತಿ ಚನ್ನೇಗೌಡ (45) ಕೃತ್ಯ ಎಸಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ. ದಾಳಿಯಿಂದಾಗಿ ಮಹಿಳೆಯ ಮುಖ ಮತ್ತು ದೇಹದ ವಿವಿಧ ಭಾಗದಲ್ಲಿ ಸುಟ್ಟಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ಬಂಧನಕ್ಕೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 17 ವರ್ಷಗಳ ಹಿಂದೆ ಮಂಜುಳಾ ಮತ್ತು ಚನ್ನೇಗೌಡಗೆ ವಿವಾಹವಾಗಿದೆ. 8 ಮತ್ತು 10 ವರ್ಷ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. ಕುಟುಂಬ ಗವಿಪುರಂನಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದೆ. ಚನ್ನೇಗೌಡ ಆಟೋ ಚಾಲಕನಾಗಿದ್ದು, ಮಂಜುಳಾ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ದಂಪತಿ ನಡುವೆ ಆಗ್ಗಾಗ್ಗೆ ಜಗಳ ನಡೆಯುತ್ತಿತ್ತು. ಶುಕ್ರವಾರ ಸಂಜೆ 4 ಗಂಟೆ ಸುಮಾರಿನಲ್ಲಿ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಈ ವೇಳೆ ಚನ್ನೇಗೌಡ ಪತ್ನಿ ಮಂಜುಳಾ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ. ಮುಖ ಮತ್ತು ದೇಹದ ಮೇಲೆ ಆ್ಯಸಿಡ್ ಬಿದಿದ್ದರಿಂದ ಮಂಜುಳಾ ಚೀರಾಡಿದರು. ಆಗ ಪತಿ ಬೆದರಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಮಹಿಳೆಯ ಚೀರಾಟ ಕೇಳಿ ಮನೆಗೆ ಬಂದ ಸ್ಥಳೀಯರು ಕೂಡಲೇ ಮಂಜುಳಾರನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ನಡೆದ ವೇಳೆ ಮಕ್ಕಳು ಶಾಲೆಗೆ ತೆರಳಿದ್ದರು. ಮನೆಯಲ್ಲಿ ಯಾರು ಇರಲಿಲ್ಲ. ದಂಪತಿ ನಡುವೆ ಯಾವ ಉದ್ದೇಶಕ್ಕೆ ಜಗಳ ನಡೆದಿದೆ ಎಂದು ತಿಳಿದಿಲ್ಲ.
ಮಹಿಳೆಯ ಮುಖ ಮತ್ತು ದೇಹ ಶೇ.70 ರಷ್ಟು ಸುಟ್ಟು ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟುಗಾಯಗಳ ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಕೆ.ಜಿ.ನಗರ ಠಾಣೆಯಲ್ಲಿ ದಾಖಲಾಗಿದೆ.