ಬೆಂಗಳೂರು: ನೆಲಮಂಗಲದ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ ಬಿದ್ದ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಮೂಲಕ ಘಟನೆಗೆ ಇಬ್ಬರು ಬಲಿಯಾದಂತಾಗಿದೆ.
ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಹಾಸನ ಮೂಲದ ಮಮತಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ 5.30ರ ಸುಮಾರಿಗೆ ಪತಿ ಸುರೇಶ್ ಅವರ ಮಡಿಲಲ್ಲಿ ಕೊನೆಯುಸಿರುಳೆದಿದ್ದಾರೆ. ದಂಪತಿ ಕಳೆದ ಆರು ತಿಂಗಳ ಹಿಂದೆ ಕಾರಣಾಂತರಗಳಿಂದ ದೂರವಾಗಿದ್ದರು. ಆದರೆ, ಘಟನೆಯ ಬಗ್ಗೆ ಮಾಹತಿ ಪಡೆದ ಸುರೇಶ್ ಮದ್ಯ ಸೇವಿಸಿ ಆಸ್ಪತ್ರೆಗೆ ಆಗಮಿಸಿದ್ದ.
ಈ ವೇಳೆ ವೈದ್ಯರ ಜತೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ತಗಾದೆ ತೆಗೆದು ಗಲಾಟೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ಈ ನಡುವೆ, ಸಾಯುವ ಮುನ್ನ ಪತಿಯನ್ನೊಮ್ಮೆ ನೋಡಬೇಕು ಎಂಬ ಮಮತಾ ಅವರ ಆಸೆಯಂತೆ ವೈದ್ಯರು ಆಕೆ ದಾಖಲಾದ ಕೊಠಡಿಗೆ ಪತಿಯನ್ನು ಕರೆದೊಯ್ದುರು. ಈ ವೇಳೆ ಆತನ ತೊಡೆಯ ಮೇಲೆಯೇ ಮಮತಾ ಪ್ರಾಣ ಬಿಟ್ಟರು.
ಫೆ.21ರಂದು ಶೃಂಗೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನೆಲಮಂಗಲದ ಅರಿಶಿನ ಕುಂಟೆ ಬಳಿ ಅಗ್ನಿ ಅವಘಡಕ್ಕೀಡಾಯಿತು. ಬಸ್‌ನಲ್ಲಿದ್ದ ಭಾಗ್ಯಮ್ಮ(55) ಎಂಬಾಕೆ ಸಜೀವ ದಹನವಾಗಿದ್ದು, ಮಮತಾ ಮತ್ತು ಆಕೆಯ ಮಗ ಯಶಸ್ ತೀವ್ರವಾಗಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಪ್ರಾಣಪಾಯದಿಂದ ಪಾರಾಗಿದ್ದರು.
ಶೇ.75ರಷ್ಟು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ್ದ ಮಮತಾ ಅವರನ್ನು ಉಳಿಸಲು ವೈದ್ಯರು ಪ್ರಯತ್ನಿಸಿದರು. ಚಿಕಿತ್ಸೆ ವೇಳೆ ಮಮತಾ ನಿದ್ದೆಯಲ್ಲೂ ಪತಿಯನ್ನು ಕನವರಿಸುತ್ತಿದ್ದಳು. ದಂಪತಿ ಕಳೆದ ಆರು ತಿಂಗಳ ಹಿಂದೆ ಬೇರೆಯಾಗಿದ್ದರಿಂದ ಪತಿಯನ್ನು ಹುಡುಕುವುದು ಕಷ್ಟವಾಗಿತ್ತು. ಆದರೂ, ವಿಷಯ ತಿಳಿದ ಪತಿ ಸುರೇಶ್ ಆಸ್ಪತ್ರೆಗೆ ಆಗಮಿಸಿದ್ದರು. ಅಂದುಕೊಂಡಂತೆ ಸುರೇಶ್ ಆಸ್ಪತ್ರೆಗೆ ಬಂದಿದ್ದರಿಂದ ಆತನನ್ನು ಮಮತಾಳ ಬಳಿ ಕರೆದೊಯ್ಯಲಾಗಿತು.
5 ಲಕ್ಷ ರೂ. ಪರಿಹಾರ: ಮೃತ ಮಮತಾ ಅವರಿಗೆ ಕೆಎಸ್‌ಆರ್‌ಟಿಸಿ ವತಿಯಿಂದ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಅಂತ್ಯಕ್ರಿಯೆ 15,000 ರೂ ಸಂಸ್ಥೆ ನೀಡಿದ್ದು, ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿದೆ.