ಹೆಮ್ಮಾಡಿ: ನಾಡಿನ ಅನೇಕ ಮಂದಿ ಲೇಖಕರು ಬರೆದ 5 ಸಾವಿರಕ್ಕೂ ಮಿಕ್ಕಿ ವಿವಿಧ ಬಗೆಯ ಪುಸ್ತಕಗಳು, ಮಕ್ಕಳನ್ನು ಓದಿನತ್ತ ಸೆಳೆಯುವ ನಿಟ್ಟಿನಲ್ಲಿ ಆಕರ್ಷಕ ಕಲಾಕೃತಿಗಳು, ಸಾಹಿತಿ- ಸಾಧಕರ ಭಾವಚಿತ್ರಗಳು, ಸಂದೇಶ ಸಾರುವ ನುಡಿ ಬರಹಗಳು, ಕಂಪ್ಯೂಟರ್ ಸೌಲಭ್ಯದೊಂದಿಗೆ ಡಿಜಿಟಲ್ ಸ್ಪರ್ಶ, ನವೀನ ರೂಪದಿಂದ ಕಂಗೊಳಿಸುವ ಕೋಣೆ…
ಇದು ಹೆಮ್ಮಾಡಿ ಭಾಗದ ಗ್ರಾಮಸ್ಥರ ಓದುವ ಹವ್ಯಾಸಕ್ಕೆ ಹೊಸ “ಹುರುಪು’ ನೀಡುವ ನಿಟ್ಟಿನಲ್ಲಿ ಹೆಮ್ಮಾಡಿ ಗ್ರಾ.ಪಂ. ತನ್ನ ಅಧೀನದ ಗ್ರಾಮೀಣ ಗ್ರಂಥಾಲಯವನ್ನು ಆಧುನಿಕ ಸ್ಪರ್ಶದೊಂದಿಗೆ ಅಭಿವೃದ್ಧಿಪಡಿಸಿದ ರೀತಿ.
ಗ್ರಾಮೀಣ ಭಾಗದ ಗ್ರಂಥಾಲಯಗಳನ್ನು ಓದುಗ ಸ್ನೇಹಿ ಹಾಗೂ ಜನಸ್ನೇಹಿ ಜ್ಞಾನ ಕೇಂದ್ರಗಳನ್ನಾಗಿ ರೂಪಿಸಬೇಕು ಎನ್ನುವ ಯೋಜನೆಯನ್ನು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯು ಹಾಕಿಕೊಂಡಿದ್ದು, ಅದರ ಭಾಗವಾಗಿ ಕೆಲವು ಪಂಚಾಯತ್‌ಗಳು ತನ್ನ ಅಧೀನದ ಗ್ರಂಥಾಲಯ ಅಭಿವೃದ್ಧಿಪಡಿಸುತ್ತಿದೆ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ನವೀನ್ ಭಟ್ ಅವರು “ಓದುವ ಬೆಳಕು’ ಕಾರ್ಯಕ್ರಮದಡಿ ಮಕ್ಕಳಿಗೆ ಪೂರಕವಾಗಿರುವಂತೆ ಗ್ರಾಮೀಣ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲು ಸೂಚಿಸಿದ್ದು, ಅದರಂತೆ ಕೆಲವು ತಿಂಗಳ ಹಿಂದೆಯೇ ತ್ರಾಸಿ ಗ್ರಾ.ಪಂ. ಗ್ರಂಥಾಲಯ ಹಾಗೂ ಈಗ ಹೆಮ್ಮಾಡಿಯ ಗ್ರಂಥಾಲಯಕ್ಕೆ ಹೊಸ ರೂಪ ನೀಡಲಾಗಿದೆ.
5 ಸಹಸ್ರ ಪುಸ್ತಕ:
ಹೆಮ್ಮಾಡಿಯ ಈ ಗ್ರಂಥಾಲಯದಲ್ಲಿ ಪ್ರಸ್ತುತ ಒಟ್ಟು 5,600 ಪುಸ್ತಕಗಳ ಸಂಗ್ರಹವಿದೆ. ಈಗ ಹೊಸದಾಗಿ ಕುಂದಾಪುರ ತಾ.ಪಂ.ನಿಂದ 40 ಪುಸ್ತಕ, ಜಿ.ಪಂ.ನಿಂದ 10, ಕೆಲವು ಹೊಸ ಖರೀದಿ ಒಟ್ಟಾರೆ ಗ್ರಂಥ, ಕಥೆ, ಕಾದಂಬರಿ, ವ್ಯಕ್ತಿತ್ವ ವಿಕಸನ, ಸಾಧಕರ ಪರಿಚಯ, ಕವನ ಸಂಕಲನದಂತಹ 100 ಹೊಸ ಪುಸ್ತಕಗಳನ್ನು ಸಹ ಸಂಗ್ರಹಿಸಿಡಲಾಗಿದೆ.
ಏನೆಲ್ಲ ಅಭಿವೃದ್ಧಿ:
ಗ್ರಂಥಾಲಯದ ಕೋಣೆಯ ಗೋಡೆಗಳಿಗೆ ಬಣ್ಣ ಬಳಿದು ಆಕರ್ಷಕ, ಮಾಹಿತಿ ಪೂರ್ಣ ಕಲಾಕೃತಿಗಳನ್ನು ಬಿಡಿಸಲಾಗಿದೆ. ಓದಿನ ಬಗ್ಗೆ ಗಣ್ಯ ವ್ಯಕ್ತಿಗಳ ಮಾತುಗಳನ್ನು ಗೋಡೆಯಲ್ಲಿ ಬರೆಯಲಾಗಿದೆ. ನೆಲಕ್ಕೆ ಟೈಲ್ಸ್ ಹಾಕಲಾಗಿದೆ. ಹೊಸದಾಗಿ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಲು ಸುಂದರವಾದ ಕಪಾಟುಗಳನ್ನು ತರಿಸಲಾಗಿದೆ. ಕುರ್ಚಿ, ಟೇಬಲ್ ಇನ್ನಿತರ ಪೀಠೊಪಕರಣಗಳನ್ನು ತರಿಸಲಾಗಿದೆ. ಗ್ರಂಥಾಲಯದಲ್ಲಿ ಕಂಪ್ಯೂಟರ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಅದರಲ್ಲಿ ಇ-ಲ್ಯಾಬ್ ತಂತ್ರಾಂಶದ ಮೂಲಕ ಇಲ್ಲಿ ಲಭ್ಯವಿರುವ ಪುಸ್ತಕಗಳು ಮಾತ್ರವಲ್ಲದೆ ದೇಶ, ವಿದೇಶಗಳ ಸಾವಿರಾರು ಪುಸ್ತಕಗಳು ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಇಲ್ಲಿಗೆ ಬಂದು ಡಿಜಿಟಲ್ ಗ್ರಂಥಾಲಯದ ಮೂಲಕ ಯಾವುದೇ ಪುಸ್ತಕಗಳನ್ನು ಓದಬಹುದಾಗಿದೆ. ಇದಲ್ಲದೆ ಗ್ರಂಥಾಲಯದ ಹೊರಗೆ ಎದುರಿನಲ್ಲಿ ಬೇರೆ ಹೂವಿನ ಗಿಡಗಳನ್ನು ನೆಡಲಾಗಿದೆ.
ಲಭ್ಯವಿರುವ ಸೌಲಭ್ಯಗಳು :
- 5,600 ಪುಸ್ತಕಗಳ ಬೃಹತ್ ಸಂಗ್ರಹ
- ಡಿಜಿಟಲೀಕರಣ ವ್ಯವಸ್ಥೆ, ದೇಶ, ವಿದೇಶಗಳ ಸಾವಿರಾರು ಪುಸ್ತಕಗಳನ್ನು ಓದಬಹುದು
- ಪ್ರತಿ ನಿತ್ಯ ದಿನ ಪತ್ರಿಕೆಗಳು, ವಾರ ಪತ್ರಿಕೆ, ಮಾಸಿಕ ಪತ್ರಿಕೆ ಗಳನ್ನು ಓದಬಹುದು.
15 ನೇ ಹಣಕಾಸು ಹಾಗೂ ಪಂಚಾಯತ್ ಸ್ವಂತ ಅನುದಾನವನ್ನು ಬಳಸಿಕೊಂಡು ಅಂದಾಜು 1.25 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಗ್ರಾಮಸ್ಥರು, ಮುಖ್ಯವಾಗಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.
– ಸತ್ಯನಾರಾಯಣ ರಾವ್, ಅಧ್ಯಕ್ಷರು, ಹೆಮ್ಮಾಡಿ ಗ್ರಾ.ಪಂ.
ನಾನು ಕಳೆದ ಅನೇಕ ವರ್ಷಗಳಿಂದ ಈ ಗ್ರಂಥಾಲಯಕ್ಕೆ ನಿತ್ಯ ಬರುತ್ತಿದ್ದೇನೆ. ಕೆಲವು ದಿನಪತ್ರಿಕೆ ಮಾತ್ರ ಸಿಗುತ್ತಿದ್ದು, ಎಲ್ಲ ಕನ್ನಡ ಪತ್ರಿಕೆಗಳು ಸಿಗುವಂತಾಗಬೇಕು. ಇನ್ನು ಈಗಿರುವ ಪುಸ್ತಕಗಳ ಜತೆಗೆ ಇನ್ನಷ್ಟು ಮೌಲ್ಯಯುತ ಪುಸ್ತಕಗಳ ಅಗತ್ಯವಿದೆ. ಜನರ ಈಗಿನ ಅಭಿರುಚಿಗೆ ತಕ್ಕದಾದ ಪುಸ್ತಕ ಬೇಕು. ಸರಕಾರ, ಪಂಚಾಯತ್, ಸ್ಥಳೀಯಾಡಳಿತಗಳ ಬಗ್ಗೆ ಮಾಹಿತಿ ಇರುವಂತಹ ಪುಸ್ತಕಗಳನ್ನು ತರಿಸಲಿ.
– ಸೀತಾರಾಮ ಆಚಾರ್ಯ, ಸಂತೋಷನಗರ, ಓದುಗರು
-ವಿಶೇಷ ವರದಿ