Advertisement
ಐಆರ್‌ಬಿ ಸಂಸ್ಥೆ ಗುತ್ತಿಗೆ ವಹಿಸಿಕೊಂಡಿರುವ ಕಾರವಾರ-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯಿಂದಾಗಿ ಬೈಂದೂರು, ಕುಂದಾಪುರ, ವಂಡ್ಸೆ, ಕೊಲ್ಲೂರು, ನೇರಳಕಟ್ಟೆ, ಆಜ್ರಿ, ಸಿದ್ದಾಪುರ ಮತ್ತಿತರ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಎರಡು ಪ್ರಮುಖ ಜಂಕ್ಷನ್‌ಗಳಾದ ಹೆಮ್ಮಾಡಿ ಹಾಗೂ ತಲ್ಲೂರಲ್ಲಿ ಇದ್ದ ಬಸ್ ನಿಲ್ದಾಣ ತೆರವಾಗಿತ್ತು. ಈಗ ಹೆದ್ದಾರಿ ಕಾಮಗಾರಿ ಮುಗಿದಿದೆ. ತಲ್ಲೂರಲ್ಲಿ ಜಂಕ್ಷನ್ ಆಗಿದ್ದರೆ, ಹೆಮ್ಮಾಡಿಯಲ್ಲಿ ಜಂಕ್ಷನ್ ನಿರ್ಮಾಣವಾಗಿಲ್ಲ. ಆದರೆ ಇಲ್ಲಿ ಬಸ್ ನಿಲ್ದಾಣ ವಿಲ್ಲದೆ ಜನ ಸಂಕಷ್ಟಪಡುವಂತಾಗಿದೆ.
ಹೆಮ್ಮಾಡಿ ಹಾಗೂ ತಲ್ಲೂರು ಎರಡು ಕಡೆಗಳಲ್ಲೂ ಕುಂದಾಪುರ, ಬೈಂದೂರು, ಕೊಲ್ಲೂರು ಕಡೆಗೆ ಹೋಗುವ ಜನ ಬಸ್ ನಿಲ್ದಾಣವಿಲ್ಲದೆ ರಸ್ತೆ ಬದಿಯೇ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದರೂ ಹೊರಗೆಯೇ ಕಾಯಬೇಕಾಗಿದೆ. ಬಿಸಿಲಿದ್ದರೂ ಪರ್ಯಾಯ ವ್ಯವಸ್ಥೆಯಿಲ್ಲ. ಕೆಲವರು ಅಲ್ಲಿಯೇ ಪಕ್ಕದಲ್ಲಿರುವ ಅಂಗಡಿಗಳ ಆಶ್ರಯ ಪಡೆಯುತ್ತಾರೆ. ಬಾಕಿ ಉಳಿದವರು ಬಿಸಿಲಲ್ಲಿಯೇ ನಿಂತು ಪ್ರಯಾಸ ಪಡುವಂತಾಗಿದೆ. ಅಪಾಯಕಾರಿ ಜಂಕ್ಷನ್
ಅರಾಟೆಯಲ್ಲಿ ಸೇತುವೆ ಬಿರುಕು ಬಿಟ್ಟ ಪರಿ ಣಾಮ ಮುಳ್ಳಿಕಟ್ಟೆಯಿಂದ ಹೆಮ್ಮಾಡಿಯವರೆಗೆ ಒಂದೇ ರಸ್ತೆಯಿಂದ ಎರಡೂ ಕಡೆಗಳ ವಾಹನಗಳನ್ನು ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಅದೀಗ ಹೆಮ್ಮಾಡಿಯಲ್ಲಿ ಗೊಂದಲಮಯ ಹಾಗೂ ಅಪಾಯಕಾರಿಯಾಗಿ ಪರಿಣಮಿಸಿದೆ. ಅದರಲ್ಲೂ ರಸ್ತೆ ದಾಟುವ ಜನರಿಗಂತೂ ವಾಹನಗಳು ಯಾವ ಕಡೆಯಿಂದ ಬರುತ್ತವೋ ಎಂದು ಗೊತ್ತೇ ಆಗದ ಸ್ಥಿತಿಯಿದೆ. ಇಲ್ಲಿ ವಾಹನ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ವಾಹನ ಸವಾರರು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.
Related Articles
ಕುಂದಾಪುರದಿಂದ ಶಿರೂರುವರೆಗಿನ ಹೆದ್ದಾರಿಯ ತಲ್ಲೂರು, ಹೆಮ್ಮಾಡಿಯಲ್ಲಿ ಇನ್ನೂ ಕೂಡ ಸರ್ವೀಸ್ ರಸ್ತೆ ನಿರ್ಮಾಣ, ಅದಕ್ಕೆ ಬೇಕಾದ ಭೂಸ್ವಾಧೀನ ಪ್ರಕ್ರಿಯೆಯೇ ಇನ್ನೂ ಆರಂಭಗೊಂಡಿಲ್ಲ. ತಲ್ಲೂರು ಜಂಕ್ಷನ್‌ನಲ್ಲಿ ಬೀದಿದೀಪಗಳೇ ಇಲ್ಲ. ಇದರಿಂದ ರಾತ್ರಿ ವೇಳೆ ತುಂಬಾ ಸಮಸ್ಯೆಗಳಾಗುತ್ತಿವೆ. ಹೆಮ್ಮಾಡಿ, ತಲ್ಲೂರು, ತ್ರಾಸಿ, ಸೇರಿದಂತೆ ಹಲವೆಡೆ ಬಸ್ ಬೇಗಳನ್ನೇ ನಿರ್ಮಿಸಿಲ್ಲ. ಇದರಿಂದ ಬಸ್‌ಗಳು ಹೆದ್ದಾರಿಯಲ್ಲಿಯೇ ನಿಂತು ಪ್ರಯಾಣಿಕ ರನ್ನು ಹತ್ತಿಸಿ, ಇಳಿಸಬೇಕಾಗಿದೆ. ಜಾಲಾಡಿ- ಸಂತೋಷನಗರ ಮಧ್ಯೆ ಕ್ರಾಸಿಂಗ್ ಅಗತ್ಯ ವಿದ್ದು, ಆ ಕಾರ್ಯವೂ ಆಗಿಲ್ಲ. ಕೆಲವೆಡೆ ಅನಧಿಕೃತ ಕ್ರಾಸಿಂಗ್‌ಗಳಿವೆ.
Advertisement
ಬಸ್ ನಿಲ್ದಾಣ ಅಗತ್ಯ ಬೇಕುಹಿಂದೆ ಹೆಮ್ಮಾಡಿಯಲ್ಲಿ ಬಸ್ ನಿಲ್ದಾಣವಿತ್ತು. ಹೆದ್ದಾರಿ ಕಾಮಗಾರಿ ಆದ ಬಳಿಕ ಅದನ್ನು ತೆಗೆದು ಹಾಕಿದ್ದಾರೆ. ಆದರೆ ಈಗ ಕಾಮಗಾರಿ ಮುಗಿದಿದೆ. ಆದರೆ ಬಸ್ ನಿಲ್ದಾಣ ಮಾತ್ರ ಇನ್ನೂ ಮಾಡಿಕೊಟ್ಟಿಲ್ಲ. ಕಾಮಗಾರಿಯಿಂದಾಗಿ ತೆಗೆಸಿದ್ದರಿಂದ ಐಆರ್‌ಬಿ ಸಂಸ್ಥೆಯವರೇ ಮಾಡಿಕೊಡಬೇಕು. ಅರಾಟೆ ಸೇತುವೆ ದುರಸ್ತಿ ಮಾಡುತ್ತಿರುವುದರಿಂದ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದ್ದು, ಇದರಿಂದ ಹೆಮ್ಮಾಡಿ ಜಂಕ್ಷನ್ ಈಗ ಅಪಾಯಕಾರಿಯಾಗಿದೆ. ಯಾವ ಕಡೆಯಿಂದ ವಾಹನಗಳು ಬಂದು, ಕ್ರಾಸ್ ಮಾಡುತ್ತವೋ ಅನ್ನುವುದೇ ಗೊತ್ತಾಗುತ್ತಿಲ್ಲ. ಈ ಬಗ್ಗೆಯೂ ಸಂಬಂಧಪಟ್ಟವರು ಶೀಘ್ರ ಗಮನಹರಿಸಬೇಕಾಗಿದೆ.
– ದಿನೇಶ್ ಹೆಮ್ಮಾಡಿ, ಸ್ಥಳೀಯರು ಪರಿಶೀಲಿಸುತ್ತೇನೆ
ಕುಂದಾಪುರ – ಕಾರವಾರ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ತೆಗೆದ ಬಸ್ ನಿಲ್ದಾಣಗಳನ್ನು ಮರು ನಿರ್ಮಿಸುವ ಕುರಿತಂತೆ ಪರಿಶೀಲಿಸುತ್ತೇನೆ. ಜನರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗುವುದು.
– ಕೆ. ರಾಜು, ಸಹಾಯಕ ಆಯುಕ್ತರು, ಕುಂದಾಪುರ