ಕುಂದಾಪುರ: ಹೆಮ್ಮಾಡಿ ಸಮೀಪದ ಕಟ್‌ಬೈಲೂರು ಗ್ರಾಮದ ಹರೇಗೋಡಿನ ಮನೆಯೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಮಹಿಳೆ ಜೀವಕ್ಕೆ ಬಡ್ಡಿ ವ್ಯವಹಾರವೇ ಕುತ್ತು ತಂದಿತೇ ಎನ್ನುವ ಶಂಕೆ ವ್ಯಕ್ತವಾಗಿದೆ.
ಸುಳೆ ನಾವುಡರ ಅಂಗಡಿಯ ಹತ್ತಿರದ ಕ್ರಾಸ್ ಬಳಿಯ ಮನೆಯೊಂದರಲ್ಲಿ ಒಂಟಿಯಾಗಿದ್ದ ಗುಲಾಬಿ ಮೊಗವೀರ (55) ಅವರು ಮಾ. 1ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.
ಮಹಿಳೆ ಮೃತಪಟ್ಟ ಹೆಮ್ಮಾಡಿಯ ಮನೆಗೆ ರವಿವಾರ ಸಂಜೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ವೃತ್ತ ನಿರೀಕ್ಷಕ ಮಂಜಪ್ಪ, ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗ ಜತೆಗಿದ್ದರು. ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕುಂದಾಪುರ ಭಾಗಕ್ಕೆ ಮೊದಲ ಬಾರಿಗೆ ಆಗಮಿಸಿದ ನಿಶಾ ಜೇಮ್ಸ್ ಅವರು ಕೊಲ್ಲೂರು, ಬೈಂದೂರು, ಗಂಗೊಳ್ಳಿ, ಕುಂದಾಪುರ ಠಾಣೆಗಳಿಗೆ ಭೇಟಿ ನೀಡಿದ್ದಾರೆ.
ಮಹಿಳೆ ಧರಿಸುತ್ತಿದ್ದ ಚಿನ್ನಾಭರಣ ನಾಪತ್ತೆಯಾಗಿರುವ ಕಾರಣ ಸ್ಥಳೀಯರು ಸಾವಿನಲ್ಲಿ ಅನುಮಾನ ವ್ಯಕ್ತ ಪಡಿಸಿದ್ದರಿಂದ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯೊಳಗೆ ಸಿಗರೇಟಿನ ಬೂದಿ ಬಿದ್ದಿರುವುದನ್ನು ಕೂಡ ಸ್ಥಳೀಯರು ಗಮನಿಸಿದ್ದಾರೆ. ಗುಲಾಬಿಯ ಕುತ್ತಿಗೆಯಲ್ಲಿ ಗಾಯಗಳಿದ್ದವು ಎನ್ನಲಾಗಿದೆ. ಇವೆಲ್ಲ ಕೊಲೆ ಸಾಧ್ಯತೆಯನ್ನು ಹೆಚ್ಚಿಸುತ್ತಿದೆ.
ಎಲ್ಲ ಆಯಾಮದಲ್ಲೂ ತನಿಖೆ
ಮಹಿಳೆ ಬಡ್ಡಿ ವ್ಯವಹಾರ ನಡೆಸುತ್ತಿದ್ದುದು ದೃಢಪಟ್ಟಿದೆ. ಅದೇ ವಿಷಯ ಸಾವಿಗೆ ಕಾರಣವಾಯಿತೇ ಎನ್ನುವ ಆಯಾಮದಲ್ಲೂ ತನಿಖೆ ನಡೆಸಿದ್ದೇವೆ. ಸಮೀಪದ ಗೇರು ಬೀಜ ಕಾರ್ಖಾನೆಯಲ್ಲಿದ್ದ ಹುಡುಗರನ್ನು ಹಾಗೂ ಮಹಿಳೆ ಮನೆಗೆ ಬರುತ್ತಿದ್ದ ಪರಿಚಯಸ್ಥರನ್ನು ಕೂಡ ವಿಚಾರಿಸಿದ್ದೇವೆ. ಈವರೆಗೆ ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ. ಮರಣೋತ್ತರ ವರದಿ ಮಾ.5ರಂದು ಕೈ ಸೇರುವ ಸಾಧ್ಯತೆಯಿದ್ದು, ಆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಬಿ.ಪಿ. ದಿನೇಶ್ ಕುಮಾರ್, ಡಿವೈಎಸ್‌ಪಿ ಕುಂದಾಪುರ