Advertisement

ಹೆಮ್ಮಾಡಿಯಲ್ಲಿ ನೆಲಮಂಗಲ ಸೇವಂತಿಗೆ ಬೆಳೆ

05:12 PM Jan 25, 2022 | Team Udayavani |

ಹೆಮ್ಮಾಡಿ: ಕುಂದಾಪುರ ಭಾಗದಲ್ಲಿ ಹೆಮ್ಮಾಡಿಯಲ್ಲಿ ಮಾತ್ರ ಬೆಳೆಯುವ ಸೇವಂತಿಗೆ ಹೂವು ವಿಶಿಷ್ಟವಾದ ತಳಿ. ಈ ತಳಿಯ ಸೇವಂತಿಗೆ ಹೂವನ್ನು ಬೇರೆಲ್ಲೂ ಬೆಳೆಯುವುದಿಲ್ಲ. ಆದರೆ ಇಲ್ಲೊಬ್ಬರು ಬೆಳೆಗಾರರು ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಹೆಮ್ಮಾಡಿ ಸೇವಂತಿಗೆ ಜತೆಗೆ ನೆಲಮಂಗಲ ಸೇವಂತಿಗೆ (ಟೆಂಟ್‌ ಯೆಲ್ಲೊ) ಯನ್ನು ಬೆಳೆಯುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

Advertisement

ಹೆಮ್ಮಾಡಿಯ ಪ್ರಶಾಂತ್‌ ಭಂಡಾರಿ ಅವರು ಹೆಮ್ಮಾಡಿ ಸೇವಂತಿಗೆ ಹೂವಿನ ಬೆಳೆಯೊಂದಿಗೆ ಈ ಬಾರಿ ನೆಲಮಂಗಲ ಸೇವಂತಿಗೆಯನ್ನು ಬೆಳೆಯುವ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಹೆಮ್ಮಾಡಿ ಸೇವಂತಿಗೆ ವಿಶಿಷ್ಟ ತಳಿ
ಹೆಮ್ಮಾಡಿ ಸೇವಂತಿಗೆ ಹೂವು ಸೇವಂತಿಗೆ ತಳಿಗಳ ಲ್ಲಿಯೇ ವಿಶಿಷ್ಟವಾದುದಾ ಗಿದೆ. ಆಕರ್ಷಕವಾದ, ಕಣ್ಮನ ಸೆಳೆಯುವ ಬಣ್ಣ, ಚಿಕ್ಕ ಗಾತ್ರ, ಘಮ-ಘಮ ಸುವಾಸನೆ, ಮೋಹಕ ಚೆಲುವು, ಹೆಚ್ಚು ಬಾಳಿಕೆಯ ಗುಣ ಈ ರೀತಿಯ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ ಹೆಮ್ಮಾಡಿ ಸೇವಂತಿ ಹೂವು.

ಸಾಧಾರಣ ಬೆಲೆ
ಈಗ ಸರಕಾರ ವಾರಾಂತ್ಯ ಕರ್ಫ್ಯೂ ಸಹ ತೆರವು ಮಾಡಿರುವುದರಿಂದ ಜಾತ್ರೆ, ಕೆಂಡ ಸೇವೆಗಳಿಗೆ ಅನುಕೂಲ ವಾಗಿದ್ದು, ಇದು ಹೆಮ್ಮಾಡಿ ಸೇವಂತಿಗೆ ಬೆಳೆಗಾರರಿಗೆ ವರದಾನವಾಗಿದೆ. ವ್ಯಾಪಾರ ತಕ್ಕಮಟ್ಟಿಗೆ ಪರವಾಗಿಲ್ಲ. ಆದರೆ ಬೆಲೆ ಕಳೆದ ವರ್ಷ 1 ಸಾವಿರ ಹೂವಿಗೆ 400 ರೂ. ಇದ್ದರೆ, ಈ ಸಲ 300 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದೆ.

10 ಸೆಂಟ್ಸ್‌ ಜಾಗದಲ್ಲಿ ಬೆಳೆ
ಹಲವಾರು ವರ್ಷಗಳಿಂದ ಹೆಮ್ಮಾಡಿ ಸೇವಂತಿಗೆ ಕೃಷಿಯನ್ನು ಮಾಡುತ್ತಿರುವ ಇವರು ಒಟ್ಟಾರೆ 1 ಎಕರೆ ಜಾಗದಲ್ಲಿ ಸೇವಂತಿಗೆ ಬೆಳೆದಿದ್ದಾರೆ. ಆ ಪೈಕಿ 10 ಸೆಂಟ್ಸ್‌ ಜಾಗದಲ್ಲಿ ನೆಲಮಂಗಲ ಸೇವಂತಿಗೆ ಬೆಳೆದಿದ್ದರೆ, ಬಾಕಿ ಜಾಗದಲ್ಲಿ ಹೆಮ್ಮಾಡಿ ಸೇವಂತಿಗೆ ಕೃಷಿ ಮಾಡಿದ್ದಾರೆ.

Advertisement

ನೆಲಮಂಗಲ ಸೇವಂತಿಗೆ: ಇಳುವರಿ ಕಡಿಮೆ
ಪ್ರಶಾಂತ್‌ ಭಂಡಾರಿ ಅವರು ಹೇಳುವ ಪ್ರಕಾರ ಹೆಮ್ಮಾಡಿ ಸೇವಂತಿಗೆಗೆ ಹೋಲಿಸಿದರೆ ನೆಲಮಂಗಲ ಹೂವಿನ ಇಳುವರಿ ಕಡಿಮೆ. ಹೆಮ್ಮಾಡಿ ಸೇವಂತಿಗೆ 1 ಗಿಡದಲ್ಲಿ ಕನಿಷ್ಠ 100 ಹೂವು ಆದರೆ, ನೆಲಮಂಗಲ ಸೇವಂತಿಗೆ 1 ಗಿಡದಲ್ಲಿ ಕೇವಲ 20 ಹೂವಷ್ಟೇ ಆಗುತ್ತದೆ. ಇನ್ನು ಇಲ್ಲಿನ ಹವಾಗುಣಕ್ಕೆ ತಕ್ಕುದಾದ ಹೂವಲ್ಲ. ಹೆಚ್ಚು ಮಳೆ, ಹೆಚ್ಚು ಬಿಸಿಲಿರುವುದರಿಂದ ಅದಕ್ಕೆ ಹೊಂದಿಕೆಯಾಗುವುದು ಕಷ್ಟ ಎನ್ನುತ್ತಾರವರು.

ಇಳುವರಿ ಅಷ್ಟಿಲ್ಲ
ಈ ಬಾರಿ ಹೆಮ್ಮಾಡಿ ಸೇವಂತಿಗೆ ಹೂವಿನ ಜತೆಗೆ ಮೊದಲ ಬಾರಿಗೆ ನೆಲಮಂಗಲ ಹೂವನ್ನು ಸಹ ಬೆಳೆದಿದ್ದೇನೆ. ಇದೊಂದು ಹೊಸ ಪ್ರಯತ್ನ. ಆದರೆ ಇಲ್ಲಿನ ಹವಾಗುಣಕ್ಕೆ ಇದು ಸರಿ ಹೊಂದುವಂತೆ ಕಾಣುತ್ತಿಲ್ಲ. ಮಳೆ ಜಾಸ್ತಿ, ಬಿಸಿಲಿನಿಂದಾಗಿ ಇಳುವರಿ ಅಷ್ಟೇನು ಬಂದಿಲ್ಲ. ಒಂದು ಗಿಡದಲ್ಲಿ 20 ಹೂವಷ್ಟೇ ಆಗಿದೆ. ಮುಂದಿನ ಬಾರಿ ಇನ್ನಷ್ಟು ಸಮರ್ಪಕವಾಗಿ ಬೆಳೆಯಲು ಪ್ರಯತ್ನಿಸಲಾಗುವುದು.
– ಪ್ರಶಾಂತ್‌ ಭಂಡಾರಿ,
ಸೇವಂತಿಗೆ ಬೆಳೆಗಾರರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next