Advertisement
ಮಕ್ಕಳ ಸಂಖ್ಯೆ ಹೆಚ್ಚಿರುವ ಕಾರಣ ಒಂದನೇ ತರಗತಿಯನ್ನು 2 ವಿಭಾಗ ಮಾಡಲಾಗಿದೆ. ಎಲ್ಕೆಜಿ, ಯುಕೆಜಿಯಲ್ಲಿ 40ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ಆದರೆ ಕೊಠಡಿ ಸಮಸ್ಯೆಯಿದ್ದು, ಈಗಿರುವ ಎರಡು ಕೊಠಡಿ ಶಿಥಿಲಾವಸ್ಥೆಯಲ್ಲಿದ್ದು ಅದರ ದುರಸ್ತಿಗೆ ಬೇಡಿಕೆ ಕೇಳಿ ಬಂದಿದೆ.
2019 ರಲ್ಲಿ ಈ ಶಾಲೆಯಲ್ಲಿ 70ಕ್ಕಿಂತಲೂ ಕಡಿಮೆ ಮಕ್ಕಳಿದ್ದರು. ಕಳೆದ ಸಾಲಿನಲ್ಲಿ 96 ಮಂದಿ ಮಕ್ಕಳಿದ್ದರೆ, ಈ ಬಾರಿ ಒಟ್ಟು 110 ಮಂದಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲೂ ಒಂದನೇ ತರಗತಿಗೆ 25 ಮಂದಿ ಮಕ್ಕಳ ದಾಖಲಾತಿಯಾಗಿದೆ. ಒಂದನೇ ತರಗತಿಯಲ್ಲದೆ ಇತರ ತರಗತಿಗಳಿಗೂ ಬೇರೆ ಬೇರೆ ಖಾಸಗಿ ಶಾಲೆಗಳಿಂದ ಇಲ್ಲಿಗೆ ಮಕ್ಕಳು ಬಂದಿದ್ದಾರೆ. ಇನ್ನು ಎಲ್ಕೆಜಿ- ಯುಕೆಜಿ ವಿಭಾಗದಲ್ಲಿ 42 ಮಂದಿ ಸೇರಿದಂತೆ ಒಟ್ಟಾರೆ ಈ ಶಾಲೆಯಲ್ಲಿ 152 ಮಂದಿ ವಿದ್ಯಾರ್ಥಿಗಳಿದ್ದಾರೆ.
Related Articles
ಶಾಲೆಯ ಒಂದು ಕೊಠಡಿ ಹಾಗೂ ಗ್ರಂಥಾಲಯ ಕೋಣೆಯ ಹಂಚಿನ ಮಾಡು, ಗೋಡೆ ಬಿರುಕು ಬಿಟ್ಟು, ಶಿಥಿಲಾವಸ್ಥೆಯಲ್ಲಿದೆ. ಇಲ್ಲಿ ತರಗತಿ ನಡೆಸುವುದು ಅಪಾಯಕಾರಿ ಎಂದರಿತ ಶಿಕ್ಷಕರು ಮುಂಜಾಗ್ರತೆಯಿಂದಾಗಿ ಈ ಎರಡು ಕೊಠಡಿಗಳಿಗೆ ಬೀಗ ಹಾಕಿದ್ದಾರೆ. ಕಂಪ್ಯೂಟರ್ ತರಗತಿ ಹಾಗೂ ಸಭಾಭವನದಲ್ಲೂ ನಿತ್ಯದ ತರಗತಿ ನಡೆಸುವಂತಾಗಿದೆ. ಅದಕ್ಕಾಗಿ ಶಿಥಿಲಾವಸ್ಥೆಯಲ್ಲಿರುವ ಎರಡು ಕೊಠಡಿಗಳನ್ನು ಕೂಡಲೇ ದುರಸ್ತಿಪಡಿಸಬೇಕು ಹಾಗೂ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆಯನ್ನು ಇಲಾಖೆಯ ಮುಂದಿರಿಸಲಾಗಿದೆ. ಇನ್ನುಳಿದಂತೆ ಮುಖ್ಯ ಶಿಕ್ಷಕರು ಸೇರಿದಂತೆ 6 ಮಂದಿ ಶಿಕ್ಷಕರಿದ್ದಾರೆ. ಆದರೆ ಆಂಗ್ಲ ಭಾಷಾ ಶಿಕ್ಷಕರ ಅಗತ್ಯವಿದೆ. ಆವರಣ ಗೋಡೆ ಈಗಾಗಲೇ ಹೆಮ್ಮಾಡಿ ಪಂಚಾಯತ್ನಿಂದ ನಿರ್ಮಾಣವಾಗುತ್ತಿದೆ. ಹೆಚ್ಚುವರಿ ಶೌಚಾಲಯದ ಅಗತ್ಯವಿದ್ದು, ಜಿ.ಪಂ. ಅನುದಾನ ಮಂಜೂರಾಗಿದೆ.
Advertisement
ದುರಸ್ತಿಗೆ ಪ್ರಯತ್ನಶಾಲೆಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರಿಂದ ಕೊಠಡಿ ಸಮಸ್ಯೆಯಾಗುತ್ತಿದೆ. ಸದ್ಯಕ್ಕೆ ಮಕ್ಕಳಿಗೆ ತೊಂದರೆಯಾಗದಂತೆ ತರಗತಿಗಳನ್ನು ನಡೆಸಲಾಗುತ್ತಿದೆ. ಕೊಠಡಿ ದುರಸ್ತಿ ಸಂಬಂಧ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದು, ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಲಾಗುವುದು.
– ಜಿ.ಎಂ. ಮುಂದಿನಮನಿ, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೂಡಲೇ ಗಮನಹರಿಸಲಿ
ಈ ಶಾಲೆಯಲ್ಲಿ ಈ ಬಾರಿ ಉತ್ತಮ ದಾಖಲಾತಿಯಾಗಿದ್ದು, ಈಗಾಗಲೇ ಪಂಚಾಯತ್ನಿಂದ ಆವರಣ ಗೋಡೆ, ಜಿ.ಪಂ. ಅನುದಾನದಿಂದ ಶೌಚಾಲಯ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಆದರೆ ಒಂದೆರಡು ಕೊಠಡಿ ದುರಸ್ತಿಯಾಗದಿರುವುದರಿಂದ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಇದರ ದುರಸ್ತಿಗೆ ಕೂಡಲೇ ಇಲಾಖೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಶಾಸಕರು ಗಮನಹರಿಸಬೇಕು.
– ಸತ್ಯನಾರಾಯಣ ರಾವ್, ಅಧ್ಯಕ್ಷರು, ಹೆಮ್ಮಾಡಿ ಗ್ರಾ.ಪಂ.