ಬೆಂಗಳೂರು: ಪ್ರಖ್ಯಾತ ವೈದ್ಯರನ್ನು ಬೆದರಿಸಿ ಹಣಕ್ಕಾಗಿ ಬೇಡಿಕೆಯಿಟ್ಟ ಆರೋಪ ಪ್ರಕರಣದ ಆರೋಪಿ ಸುದ್ದಿವಾಹಿನಿಯೊಂದರ ವರದಿಗಾರ ಹೇಮಂತ್ ಕಶ್ಯಪ್‌ನನ್ನು ಗುರುವಾರ ವಿಚಾರಣೆ ನಡೆಸಿರುವ ಪೊಲೀಸರು, ಆರೋಪಿ ಎಸಗಿದ ಕೃತ್ಯದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಮತ್ತೂಂದೆಡೆ ಬಂಧಿಸಲು ತೆರಳಿದಾಗ, “ನನಗೆ ಪ್ರಭಾವಿಗಳು ಗೊತ್ತು, ಸುಮ್ಮನೆ ಬಿಟ್ಟುಬಿಡಿ’ ಎಂದು ಹೇಮಂತ್ ಹೇಳಿದ್ದ ಎನ್ನಲಾಗಿದ್ದು, ಆತನ ಜತೆ ಯಾರೆಲ್ಲಾ ಸಂಪರ್ಕ ಹೊಂದಿದ್ದಾರೆ? ಜತೆಗೆ, ಈ ಬ್ಲಾಕ್ ಮೇಲ್ ಪ್ರಕರಣದಲ್ಲಿ ಅವರ ಪಾತ್ರವೇನಾದರೂ ಇದೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆರೋಪಿ ಹೇಮಂತ್ ಮೊಬೈಲ್ ಜಪ್ತಿಪಡಿಸಿಕೊಂಡಿದ್ದು ಆತನ ದೂರವಾಣಿ ಕರೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಯಾರ ಜತೆ ಮಾತನಾಡಿದ್ದಾನೆ.ಬೇರೆ ಯಾರಾದರೂ ಇದಕ್ಕೆ ಸಹಕಾರ ನೀಡಿದ್ದರೇ. ಪ್ರಭಾವಿಗಳು ಎನ್ನಲಾದ ಆತನ ನೆಟ್‌ವರ್ಕ್ ಹೇಗಿದೆ. ವೈದ್ಯರಿಗೆ ಬೆದರಿಸುವ ಒಳ ಸಂಚು ಯಾರೊಂದಿಗೆ ರೂಪಿಸಿದ್ದ ಎಂಬುದರ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದರು.
ವಿಚಾರಣೆ ವೇಳೆ ಆರೋಪಿ ಹೇಮಂತ್,ವೈದ್ಯರಿಗೆ ಬೆದರಿಸಿರುವುದು ನಿಜ ಆದರೆ ಹಣ ಪಡೆದುಕೊಂಡಿಲ್ಲ ಎಂದು ಹೇಳುತ್ತಾನೆ. ವಿಡಿಯೋ ಕುರಿತು ನಿಖರ ಮಾಹಿತಿ ನೀಡುತ್ತಿಲ್ಲ. ವಿಡಿಯೋ ಬಗ್ಗೆ ಗೊತ್ತಿಲ್ಲ, ಗೊತ್ತಿಲ್ಲದೆ ತಪ್ಪಾಗಿದೆ ಎಂದು ಅವಲತ್ತುಕೊಳ್ಳುತ್ತಾನೆ ಎನ್ನಲಾಗಿದೆ.
ಆರೋಪಿ ವೈದ್ಯ ರಮಣ್‌ರಾವ್ ಅವರಿಗೆ ಹಲವು ಬಾರಿ ವ್ಯಾಟ್ಸಾಪ್ ಹಾಗೂ ಸಾಮಾನ್ಯ ಕರೆಗಳನ್ನು ಮಾಡಿದ್ದಾನೆ. ಅವರ ಕ್ಲಿನಿಕ್‌ಗೂ ತೆರಳಿರುವುದಕ್ಕೆ ಸಿಸಿಟಿವಿ ಫೂಟೇಜ್ ಸಿಕ್ಕಿದೆ. ತಲೆಮರೆಸಿಕೊಂಡಿರುವ ಆರೋಪಿಗಳಾದ ಮಂಜುನಾಥ್ ಹಾಗೂ ಮುರುಳಿ ಸಿಕ್ಕರೆ ವಿಡಿಯೋ ಸತ್ಯಾಸತ್ಯತೆ ಬಗ್ಗೆ ಮಾಹಿತಿ ದೊರೆಯುವ ಸಾಧ್ಯತೆಯಿದೆ ಎಂದು ಅಧಿಕಾರಿ ಹೇಳಿದರು.
ಮಾರ್ಫಿಂಗ್ ವಿಡಿಯೋ ಎಂದು ಭಯಗೊಂಡಿದ್ದೆ!: ಪ್ರಕರಣದ ದೂರುದಾರರಾದ ಡಾ.ರಮಣ್‌ರಾವ್ ಅವರ ಬಳಿ ಹೇಳಿಕೆ ದಾಖಲಿಸಿಕೊಂಡಿದ್ದೇವೆ. “ಆರೋಪಿ ಹೇಮಂತ್ ಕಶ್ಯಪ್ ಇನ್ನಿತರರು ಅಶ್ಲೀಲ ವಿಡಿಯೋಗೆ ಮಾರ್ಫಿಂಗ್ ಮಾಡಿ ತನ್ನ ಮುಖವನ್ನು ಬಿಂಬಿಸಬಹುದು. ಇದರಿಂದ ನನ್ನ ಗೌರವಕ್ಕೆ ಧಕ್ಕೆ ಬರಬಹುದು. ಇಷ್ಟು ವರ್ಷ ಸಮಾಜದಲ್ಲಿ ಗೌರವಯುತ ಜೀವನ ನಡೆಸಿರುವ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಬರಬಹುದು ಎಂದು ಭಾವಿಸಿ ಆರೋಪಿಗೆ ಹಣ ನೀಡಿದ್ದೆ’ ಎಂದು ವೈದ್ಯರು ತಿಳಿಸಿರುವುದಾಗಿ ಅಧಿಕಾರಿ ಹೇಳಿದರು.