Advertisement

ಕಿನ್ನಿಕಂಬಳ ಜೋಪಡಿಯಲ್ಲಿ ಅಸಹಾಯಕ ಒಂಟಿ ಜೀವನ

06:00 AM Mar 01, 2018 | |

ಬಜಪೆ: ಬಜಪೆ -ಕೈಕಂಬ ರಾಜ್ಯ ಹೆದ್ದಾರಿಯಲ್ಲಿ ಕಿನ್ನಿಕಂಬಳ ಬಸ್ಸು ನಿಲ್ದಾಣದ ಸಮೀಪ ಕುಡುಬಿ ಸಮಾಜದ ಕುಸುಮಾ ಎಂಬಾಕೆ ಕಳೆದ ಮೂರು ವರ್ಷಗಳಿಂದ ಒಂಟಿಯಾಗಿ ತೆವಳುವ ಸ್ಥಿತಿಯಲ್ಲಿದ್ದು, ಜೋಪಡಿಯಲ್ಲಿ ಅತ್ಯಂತ ದಯನೀಯ ಜೀವನ ಸಾಗಿಸುತ್ತಿದ್ದಾರೆ.

Advertisement

ಕುಸುಮಾ ಅವರಿಗೆ 58 ವರ್ಷ ವಯಸ್ಸು. ಮನೆಗೆಲಸ ವೃತ್ತಿ ಮಾಡಿ ಕೊಂಡಿದ್ದ ಆಕೆ ಜಾರಿಬಿದ್ದು ಸೊಂಟಕ್ಕೆ ಆದ ಗಂಭೀರ ಗಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಅವರ ಸೊಂಟದ ಬಲಹೀನತೆ ಹಾಗೆಯೇ ಉಳಿದಿದೆ. ಇದರಿಂದಾಗಿ ಅವರು ನಡೆಯಲಾಗದೆ ತೆವಳಿಕೊಂಡೇ ದಿನ ನಿತ್ಯದ ಕಾರ್ಯಗಳನ್ನು ಮಾಡಬೇಕಾಗಿದೆ.

ಕಡು ಬಡತನದ ಜೀವನ, ಅನಾರೋಗ್ಯ
ಕುಸುಮಾ ಅವರ ಮೂಲ ಊರು ಮೂಡುಪೆರಾರದ ಶಾಸ್ತಾವು ಮುರ. ತಂದೆ ರಾಮ ಗೌಡ ಮತ್ತು ತಾಯಿ ಸೀತಾಬಾೖ. ಇವರಿಗೆ ಸಹೋದರ, ಸಹೋದರಿ ಇದ್ದಾರೆ. ಕಿನ್ನಿಕಂಬಳ ಸರ ಕಾರಿ ಶಾಲೆಯಲ್ಲಿ 2ನೇ ತರಗತಿ ತನಕ ಓದಿದ್ದಾರೆ. ಸಿದ್ಧಕಟ್ಟೆಯ ನಾರಾಯಣ ಎಂಬವರನ್ನು 25 ವರ್ಷಗಳ ಹಿಂದೆ ಮದುವೆಯಾಗಿದ್ದರು. ನಾರಾಯಣ ಅವರು ಇದೇ ಪರಿಸರದಲ್ಲಿ ಕೂಲಿ ವೃತ್ತಿ ಮಾಡಿಕೊಂಡಿದ್ದರು. ಮದುವೆಯಾದ ಬಳಿಕ ಗುರುಕಂಬಳದಲ್ಲಿ ಮನೆಗೆಲಸ ಮಾಡುತ್ತಿದ್ದ ಕುಸುಮಾ, ಅಲ್ಲಿಯೇ ಪತಿ ನಾರಾಯಣ ಅವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ದಂಪತಿಗೆ ಮಕ್ಕಳಿಲ್ಲ.

ಮನೆಗೆಲಸ ಮಾಡುವಲ್ಲಿ ಜಾರಿಬಿದ್ದು ಸೊಂಟಕ್ಕೆ ಬಲವಾದ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಸೊಂಟ ಬಲಹೀನತೆಯಿಂದ ನಡೆಯಲು ಅಸಾಧ್ಯವಾದ ಕುಸುಮಾ ಅವರನ್ನು ಮ® ೆಗೆಲಸ ಮಾಡುತ್ತಿದ್ದ ಮನೆಯವರು ಬಾಡಿಗೆ ಮನೆ ಬಿಡಿಸಿದರು. ಕಡು ಬಡತನದಿಂದಾಗಿ ಕುಸುಮಾ ಮತ್ತು ನಾರಾಯಣ ದಂಪತಿ ಕಿನ್ನಿಕಂಬಳ ಬಸ್ಸು ನಿಲ್ದಾಣದಲ್ಲಿಯೇ ಒಂದು ವರ್ಷ ಜೀವನ ನಡೆಸಬೇಕಾಯಿತು.

ಬ್ರಾಮರಿ ಯುವಕ ಸಂಘದಿಂದ ಜೋಪಡಿ
ಪತಿಯೊಂದಿಗೆ ಬಸ್ಸು ನಿಲ್ದಾಣದಲ್ಲಿ ಬದುಕು ಸಾಗಿಸುವ ಕುಸುಮಾ ಅವರ ದಯನೀಯ ಸ್ಥಿತಿಯನ್ನು ಕಂಡ ಕಿನ್ನಿಕಂಬಳ ಬ್ರಾಮರಿ ಯುವಕ ಸಂಘದವರು ಬಸ್ಸು ನಿಲ್ದಾಣ ಸಮೀಪ ರಾಜ್ಯ ಹೆದ್ದಾರಿ ಬದಿಯಲ್ಲಿ ಜೋಪಡಿ ನಿರ್ಮಿಸಿಕೊಟ್ಟರು. ಬಳಿಕ ಕೂಲಿ ಮಾಡಿಕೊಂಡಿದ್ದ ಪತಿ ನಾರಾಯಣರ ಜತೆಗೆ ಕುಸುಮಾ ಜೋಪಡಿಯಲ್ಲಿ ಜೀವನ ಸಾಗಿಸುತ್ತಿದ್ದರು. 

Advertisement

ಪತಿ ವಿಧಿವಶ
ನಾರಾಯಣ ಅವರು 3 ವರ್ಷಗಳ ಹಿಂದೆ ನಿಧನ ಹೊಂದಿದರು. ಆ ಸಂದರ್ಭದಲ್ಲಿ ಅವರ ಸಂಬಂಧಿಕರಿಗೆ ಹೇಳಿ ಕಳುಹಿಸಿದರಾದರೂ ಯಾರೂ ಬಾರದ ಕಾರಣ ಬ್ರಾಮರಿ ಯುವಕ ಸಂಘದವರೇ ಅಂತ್ಯಕ್ರಿಯೆ ಮಾಡ ಬೇಕಾಗಿ ಬಂತು. ಆ ಬಳಿಕ ಕುಸುಮಾ ಅವರಿಗೆ ಯಾರೂ ದಿಕ್ಕಿಲ್ಲದಂತಾಗಿದೆ. ಮನೆ ಯಿಂದ ಹೊರಗೆ ಬರುವ ಸ್ಥಿತಿಯಲ್ಲೂ ಅವರಿಲ್ಲ. ನಡೆದಾಡಲು ವಾಕಿಂಗ್‌ ಸ್ಟಿಕ್‌ ಕೊಟ್ಟರೂ ಕುಸುಮಾ ಅವರಿಗೆ ಏಳುವುದಕ್ಕೂ ಸಾಧ್ಯವಿಲ್ಲದ ಕಾರಣ ಅದು ಪ್ರಯೋಜನಕ್ಕೆ ಬಂದಿಲ್ಲ. ಈ ಬಾರಿ ಗುರುಕಂಬಳದ ಯುವ ಕರು ಜತೆ ಸೇರಿ ಅವರ ಜೋಪಡಿಗೆ ಟರ್ಪಾಲ್‌ ಹೊದೆಸಿ, ಒಳಗೆ ನೆಲಕ್ಕೆ ಸಿಮೆಂಟು ಹಾಕಿ ಸಹಕರಿಸಿದ್ದಾರೆ. ದಾನಿಗಳ ಸಹಾಯದಿಂದ ಈಗ ಕುಸುಮಾ ಅವರಿಗೆ ದಿನದಲ್ಲಿ ಒಂದು ಊಟವನ್ನು ನೀಡಲಾಗುತ್ತಿದೆ. ತೆವಳಿ ಕೊಂಡು ಹೊರಬಂದು ಕುಳಿತರೆ ಕೆಲವು ದಾನಿಗಳು ಸಹಾಯ ಮಾಡುತ್ತಾರೆ ಎಂದು ಕುಸುಮಾ ಹೇಳಿದ್ದಾರೆ.

ರೇಶನ್‌, ಆಧಾರ್‌, ಮತದಾರ ಚೀಟಿ ಇಲ್ಲ
ಕುಸುಮಾ ಅವರ ಜೋಪಡಿ ಪಡುಪೆರಾರ ಪಂಚಾಯತ್‌ ಮತ್ತು ಮೂಡುಪೆರಾರ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆಯ ಬದಿಯಲ್ಲಿಯೇ ಇದೆ. ಹೀಗಿದ್ದರೂ ಇದು ತನಕ ಯಾರೂ ಜನಗಣತಿಯಲ್ಲಿ ಅವರನ್ನು ಒಳ ಗೊಳಿಸಿಲ್ಲ. ಇದರಿಂದ ಇವರಿಗೆ ರೇಶನ್‌, ಆಧಾರ್‌, ಮತದಾರ ಚೀಟಿ ಸಿಕ್ಕಿಲ್ಲ. ಅವರ ಹೆಸರಿನಲ್ಲಿ ಯಾವುದೇ ದಾಖಲೆ ಇಲ್ಲವಾದ ಕಾರಣ ಸರಕಾರದ ಯಾವುದೇ ಸವಲತ್ತಿನಿಂದ ವಂಚಿತರಾಗಿದ್ದಾರೆ. ಅಂಗವಿಕಲ ವೇತನ, ವಿಧವಾ ವೇತನ, ನಿರ್ಗತಿಕ ವೇತನಗಳನ್ನು ಇವರಿಗೆ ನೀಡಬಹುದಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಪ್ರಯತ್ನಿ ಸಿಲ್ಲ. ಈ ಕಾಲಘಟ್ಟದಲ್ಲಿ ಅಲೆ ಮಾರಿಗಳನ್ನೂ ಜನಗಣತಿಯಲ್ಲಿ ಸೇರ್ಪಡೆಗೊಳಿಸಿ ವಿವಿಧ ಸವಲತು ಗಳನ್ನು ಒದಗಿಸಲಾಗುತ್ತಿದೆ. ಆದರೆ ಈ ಒಂಟಿ ಮಹಿಳೆ ಜೋಪಡಿಯಲ್ಲಿ ಅಸಹಾಯಕವಾಗಿ ಜೀವನ ನಡೆಸುತ್ತಿದ್ದಾರೆ. 

ಬಸ್ಸು ನಿಲ್ದಾಣದಲ್ಲಿ ಕಾಲ ಕಳೆಯುತ್ತಿದ್ದ ಇವರನ್ನು ನೋಡಿ ನಾವು ಬ್ರಾಮರಿ ಯುವಕ ಸಂಘದ ವತಿಯಿಂದ ಜೋಪಡಿ ಹಾಕಿ ಕೊಟ್ಟಿದ್ದೇವೆ. ಕುಸುಮಾ ಅವರಿಗೆ ಈಗ ದಿನಕ್ಕೆ ಒಂದು ಊಟವನ್ನು ದಾನಿಗಳ ಸಹಕಾರದೊಂದಿಗೆ ನೀಡುತ್ತಿದ್ದೇವೆ. ಇವರು ಕುಡುಬಿ ಜನಾಂಗದ ಮಹಿಳೆ. ಕುಡುಬಿ ಸಮುದಾಯದವರು, ದಾನಿಗಳು, ಜನಪ್ರತಿನಿಧಿಗಳು ಇವರಿಗೆ ಸಹಾಯ ಮಾಡಬೇಕು. ಸರಕಾರದಿಂದ ನ್ಯಾಯವಾಗಿ ಒದಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕು. 
  – ರಾಜೇಂದ್ರ ಕಿನ್ನಿಕಂಬಳ , ಬ್ರಾಮರಿ ಯುವಕ ಸಂಘದ ಅಧ್ಯಕ್ಷ

ಕಿನ್ನಿಕಂಬಳದ ಬಸ್ಸು ನಿಲ್ದಾಣದ ಬಳಿ ಜೋಪಡಿಯಲ್ಲಿರುವ ಕುಸುಮಾ ಅವರ ಬಗ್ಗೆ ಮಾಹಿತಿ ಪಡೆಯಲು ಗ್ರಾಮ ಸೇವಕರನ್ನು ಕಳುಹಿಸಿ, ಅವರಿಗೆ ಸರಕಾರದಿಂದ ಲಭಿಸಿವ ಯಾವುದೇ ಸವಲತ್ತು ಸಿಗುವಂತೆ ಪ್ರಯತ್ನ ಮಾಡಲಾಗುವುದು.
– ಶಿವಪ್ರಸಾದ್‌, ಉಪತಹಶೀಲ್ದಾರ್‌, ಗುರುಪುರ ನಾಡ ಕಚೇರಿ

ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next