ಪ್ರತಿಯೊಬ್ಬರು ಅವರವರ ಮನೆಯಲ್ಲಿ, ಅವರವರ ಕೆಲಸದಲ್ಲಿ ಅವರೇ ರಾಜರು. ಹಾಗಿದ್ದಾಗ ಮಾತ್ರ ಹೆಸರು, ಹಣ, ಅಧಿಕಾರ ಯಾವುದೂ ಇಲ್ಲದಿದ್ದರೂ, ರಾಜನಂತೆ ಬದುಕಬಹುದು. ಇದೇ ಪರಿಕಲ್ಪನೆಯನ್ನು ಇಟ್ಟುಕೊಂಡು ಈ ವಾರ “ನಾನೇ ರಾಜ’ ಚಿತ್ರ ತೆರೆಗೆ ಬರುತ್ತಿದೆ. ನವ ಪ್ರತಿಭೆ ಸೂರಜ್ ಕೃಷ್ಣ ಈ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. “ವರಪ್ರದ ಪೊ›ಡಕ್ಷನ್ ಬ್ಯಾನರ್’ನಲ್ಲಿ ನಿರ್ಮಾಣವಾಗಿರುವ ಎಲ…. ಆನಂದ್ ಬಂಡವಾಳ ಹೂಡಿ ನಿರ್ಮಿಸಿರುವ ಈ ಚಿತ್ರಕ್ಕೆ ಶ್ರೀನಿವಾಸ ಶಿವಾರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ “ನಾನೇ ರಾಜ’ ಚಿತ್ರತಂಡ, ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು.
ಮೊದಲಿಗೆ ಚಿತ್ರದ ಬಗ್ಗೆ ಮಾತಿಗಿಳಿದ ನಿರ್ದೇಶಕ ಶ್ರೀನಿವಾಸ ಶಿವಾರ, “ಚಿತ್ರದ ಹೆಸರೇ ಹೇಳುವಂತೆ ಇದು “ನಾನೇ ರಾಜ’ ಅಂಥ ಬದುಕುವ ಪ್ರತಿಯೊಬ್ಬ ಹುಡುಗನ ಕಥೆ. ತಾನು ಮಾಡುತ್ತಿರುವ ಕೆಲಸವನ್ನು ನಂಬಿ ಬದುಕುವವರೆಲ್ಲರೂ, ನನಗೆ “ನಾನೇ ರಾಜ’ ಅಂತಲೇ ಇರುತ್ತಾರೆ. ಹಳ್ಳಿಯಲ್ಲಿ ಯಾರಿಗೆ ಏನೇ ಕಷ್ಟ ಬಂದರೂ, ಅವರ ಸಹಾಯಕ್ಕೆ ನಿಲ್ಲುವ ಹುಡುಗನೊಬ್ಬ ಹೇಗೆ ಅದೆಲ್ಲವನ್ನು ನಿಭಾಯಿಸುತ್ತಾನೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ. ಇದೊಂದು ಪಕ್ಕಾ ಹಳ್ಳಿ ಸೊಗಡಿನ ಚಿತ್ರ. ಜೊತೆಗೆ ಒಂದಷ್ಟು ಮಾಸ್ ಕಮರ್ಶಿಯಲ್ ಎಲಿಮೆಂಟ್ಸ್ ಕೂಡ ಚಿತ್ರದಲ್ಲಿದೆ’ ಎಂದು ಮಾಹಿತಿ ನೀಡಿದರು.
ನವ ನಾಯಕ ಸೂರಜ್ ಕೃಷ್ಣ ಚಿತ್ರದಲ್ಲಿ ಹಳ್ಳಿ ಹುಡುಗನಾಗಿ ಕಾಣಿಸಿಕೊಂಡಿದ್ದಾರಂತೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ಸೂರಜ್ ಕೃಷ್ಣ, “ಹಳ್ಳಿಯಲ್ಲಿ ಯಾರಿಗೆ ಏನೇ ಕಷ್ಟ ಬಂದರೂ, ಅವರ ಸಹಾಯಕ್ಕೆ ನಿಲ್ಲುವಂಥ ಪಾತ್ರ ನನ್ನದು. ಸ್ನೇಹ, ಪ್ರೀತಿ, ಫ್ಯಾಮಿಲಿ ಸೆಂಟಿಮೆಂಟ್ ಎಲ್ಲವೂ ನನ್ನ ಪಾತ್ರದಲ್ಲಿದೆ. ಒಂದು ಕಮರ್ಶಿಯಲ್ ಚಿತ್ರದಲ್ಲಿ ಏನೇನು ಇರಬೇಕೋ, ಅದೆಲ್ಲವೂ ಈ ಚಿತ್ರದಲ್ಲಿದೆ. ಒಳ್ಳೆಯ ಸಾಂಗ್ಸ್, ಡ್ಯಾನ್ಸ್, ಆ್ಯಕ್ಷನ್ ಮಾಸ್ ಆಡಿಯನ್ಸ್‌ಗೆ ಇಷ್ಟವಾಗುತ್ತದೆ’ ಎಂಬ ಭರವಸೆ ವ್ಯಕ್ತಪಡಿಸಿದರು.
“ಇಂದಿನ ಪ್ರೇಕ್ಷಕರು ಬಯಸುವಂಥ ಪಕ್ಕಾ ಮಾಸ್ ಎಂಟರ್‌ಟೈನ್ಮೆಂಟ್ ಚಿತ್ರ ಇದಾಗಿದ್ದು, “ನಾನೇ ರಾಜ’ ಎರಡು ಗಂಟೆ ಪ್ರೇಕ್ಷಕರನ್ನು ಮನರಂಜಿಸೋದು ಗ್ಯಾರೆಂಟಿ’ ಎನ್ನುವ ವಿಶ್ವಾಸದ ಮಾತುಗಳನ್ನಾಡುತ್ತಾರೆ ನಿರ್ಮಾಪಕ ಎಲ್. ಆನಂದ್.
ಇನ್ನು “ನಾನೇ ರಾಜ’ ಚಿತ್ರದಲ್ಲಿ ನಾಯಕಿ ಸೋನಿಕಾ ಗೌಡ, ಊರ ಹಬ್ಬಕ್ಕೆ ಸಿಟಿಯಿಂದ ಹಳ್ಳಿಗೆ ಬರುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಡ್ಯಾನಿ ಕುಟ್ಟಪ್ಪ ಮತ್ತು ದತ್ತು ಖಳನಾಯಕರಾಗಿ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಉಳಿದಂತೆ ಕುರಿ ಪ್ರತಾಪ್, ಚಂದ್ರಪ್ರಭ, ಲಕ್ಷ್ಮೀ, ಹಿರಿಯ ನಟ ಉಮೇಶ್, ಟೆನ್ನಿಸ್ ಕೃಷ್ಣ ಮೊದಲಾದವರು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ನಾನೇ ರಾಜ’ ಚಿತ್ರಕ್ಕೆ ವಿನೋದ್ ಭಾರತಿ ಛಾಯಾಗ್ರಹಣ, ಆರ್.ಡಿ ರವಿ ಸಂಕಲನವಿದೆ. ಸಿ.ಎಂ ಮಹೇಂದ್ರ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ಕಳೆದ ಕೆಲ ದಿನಗಳಿಂದ ಭರ್ಜರಿಯಾಗಿ ತನ್ನ ಪ್ರಮೋಶನ್ ಕೆಲಸಗಳಲ್ಲಿ ನಿರತವಾಗಿರುವ “ನಾನೇ ರಾಜ’ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗುತ್ತಾನೆ ಅನ್ನೋದು, ಇದೇ ವಾರಾಂತ್ಯದಲ್ಲಿ ಗೊತ್ತಾಗಲಿದೆ.