Advertisement

ಅಪರಾಧ ತಡೆಗೆ ಸಹಕರಿಸಿ

12:37 PM Oct 31, 2018 | Team Udayavani |

ಹುಣಸೂರು: ಸಮಸ್ಯೆಗಳನ್ನು ಕುಟುಂಬ ಹಿರಿಯರೊಂದಿಗೆ ಚರ್ಚಿಸಿ ರಾಜೀ-ಸಂಧಾನದ ಹಂತದಲ್ಲೇ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ಹೇಳಿದರು. 

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಅಧ್ಯಯನ ಪ್ರವಾಸದಲ್ಲಿ ತಾಲೂಕಿನ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮಹಿಳೆಯರು ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಮಾಹಿತಿ ನೀಡುವ ಕಾರ್ಯಕ್ರಮದ ವೇಳೆ ಗ್ರಾಮಾಂತರ ಠಾಣೆಗೆ ಭೇಟಿ ನೀಡಿದ್ದ ಮಹಿಳೆಯರನ್ನುದ್ದೇಶಿಸಿ ಅವರು ಮಾತನಾಡಿದರು.

ಮಹಿಳೆಯರ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳಿವೆ. ಆದರೆ ಎಲ್ಲ ಸಮಸ್ಯೆಗೆ ಪೊಲೀಸ್‌ ಠಾಣೆಗಳೆ ಪರಿಹಾರವಲ್ಲ, ಮೊದಲು ಕುಟುಂಬದಲ್ಲಿ, ನಂತರ ಗ್ರಾಮಸ್ಥರಲ್ಲಿ ಚರ್ಚಿಸಿ ಪಂಚಾಯ್ತಿ ಮೂಲಕ  ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಆಗ ನೆಮ್ಮದಿಯ ಜೀವನ ನಡೆಸಲು ಸಾಧ್ಯ.

ಹಳ್ಳಿಗಳಲ್ಲಿ ಇಸ್ಪೀಟ್‌ ದಂಧೆ, ಗಾಂಜಾ ಬೆಳೆ, ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿ ಇದ್ದವರು ಮಾಹಿತಿ ನೀಡಿದಲ್ಲಿ ಅಂತಹವರ ಹೆಸರನ್ನು ಗೌಪ್ಯವಾಗಿಡಲಾಗುವುದು, ಅಪರಾಧ ತಡೆಗಟ್ಟಲು ಸಮಾಜ ನಮ್ಮೊಂದಿಗೆ ಸಹಕರಿಸಿದರೆ ಮಾತ್ರ ಅಪರಾಧಗಳನ್ನು ಮಟ್ಟಹಾಕಿ ಆರೋಗ್ಯಕರ ಸಮಸ್ಯೆ ನಿರ್ಮಿಸಲು ಸಾಧ್ಯ ಎಂದು ಹೇಳಿದರು.

ಸಕಾಲದಲ್ಲಿ ನೆರವು: ಅಪರಾಧ ವಿಭಗದ ಎಸ್‌ಐ ರಾಜಪ್ಪ ಮಾತನಾಡಿ, ಮಹಿಳಾ ದೌರ್ಜನ್ಯ ಹಾಗೂ ದೈನಂದಿನ ಬದುಕಿಗೆ ಬೇಕಾದ ಕಾನೂನು-ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿ, ಹಳ್ಳಿಗಳಲ್ಲಿ ಚಿನ್ನಕ್ಕೆ ಪಾಲೀಶ್‌ ಮಾಡುವ ನೆಪದಲ್ಲಿ ದೋಚುವವರಿದ್ದಾರೆ. ಅಪರಿಚಿತರನ್ನು ಮನೆಯೊಳಗೆ ಸೇರಿಸುವುದು ತಪ್ಪು.

Advertisement

ನಿಮ್ಮ ವ್ಯಾಪ್ತಿಯ ಪೊಲೀಸ್‌ ಠಾಣೆಗಳ ದೂರವಾಣಿ ಸಂಖ್ಯೆ ಹಾಗೂ ಬೀಟ್‌ ಪೊಲೀಸರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಲ್ಲಿ  ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಮಸ್ಯೆಗಳು ಉಂಟಾದಾಗ, ಅಪರಾಧ, ಕಳ್ಳರು, ಮೋಸಗಾರರ ಬಲೆಗೆ ಸಿಕ್ಕಿಕೊಂಡಾಗ ಕೂಡಲೆ ಅಲ್ಲಿಗೆ ಸಂಪರ್ಕಿಸಿ ಸಕಾಲದಲ್ಲಿ ನೆರವು ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು. 

ಬೆಂಕಿ ಅವಘಡ ರಕ್ಷಣೆ: ಅಗ್ನಿಶಾಮಕ ದಳದ ಎಸ್‌.ಕೆ.ಮಹದೇವ್‌ ಮನೆ ಹಾಗೂ ಸುತ್ತಮುತ್ತಲಿನಲ್ಲಿ ಸಣ್ಣಪುಟ್ಟ ಬೆಂಕಿ ಅವಘಡ ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮತ್ತು ಹಳ್ಳಿಗಳಲ್ಲಿ ತಂಬಾಕು ಹದಗೊಳಿಸುವ ವೇಳೆ ಸಂಭವಿಸುವ ಬೆಂಕಿ ದುರಂತದ ಬಗ್ಗೆ ಪ್ರಾತ್ಯಕ್ಷತೆ ಮೂಲಕ ಮಾಹಿತಿ ನೀಡಿದರು. 

ಸಾಲ ಸೌಲಭ್ಯ: ಮಹಿಳಾ ಮತ್ತು ಕಲ್ಯಾಣ ಇಲಾಖೆಯಲ್ಲಿ ಸಿಡಿಪಿಒ ನವೀನ್‌ಕುಮಾರ್‌, ಎಸಿಡಿಪಿಒ ಅಂಗನವಾಡಿ ಮೇಲ್ವಿಚಾರಕಿ ಸುಮಂಗಲಿ ಸುತ್ತಮುತ್ತಲ ಪರಿಸರದಲ್ಲಿ ಮಹಿಳೆಯರಿಗೆ ಆಗುವ ತೊಂದರೆಗಳು, ಉದ್ಯೋಗಿನಿ ಯೋಜನೆಯಡಿ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಗೀತಾ, ಸೇವಾ ಪ್ರತಿನಿಧಿಗಳಾದ ಆಶಾರಾಣಿ, ಕವಿತಾ ಹಾಗೂ ಮಹೇಶ್‌, ತಾಲೂಕಿನ ಕಟ್ಟೆಮಳಲವಾಡಿ, ಗಾವಡಗೆರೆ ಕೊಯಮುತ್ತೂರು ಕಾಲೋನಿ ಹಾಗೂ ಹಿಂಡಗುಡ್ಲು ಗ್ರಾಮದ ಸುಮಾರು 250ಕ್ಕೂ ಹೆಚ್ಚು ಮಹಿಳೆಯರು ನಗರದ ಅಗ್ನಿಶಾಮಕ ದಳ, ಗ್ರಾಮಾಂತರ ಪೊಲೀಸ್‌ ಠಾಣೆ, ಮಹಿಳಾ ಸಾಂತ್ವನ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. 

ಮನೆಗಳ ಬಳಿ ಚಿನ್ನಕ್ಕೆ ಪಾಲಿಶ್‌ ಮಾಡುವವರು, ವಿಳಾಸ ಕೇಳುವವರು ಮತ್ತಿತರೆ ಸುಳ್ಳು ಹೇಳಿಕೊಂಡು ಬರುವ ಅಪರಿಚಿತರನ್ನು ಮನೆಯೊಳಗೆ ಸೇರಿಸಬೇಡಿ. ಸಮೀಪದ ಪೊಲೀಸ್‌ ಠಾಣೆ, ಬೀಟ್‌ ಪೊಲೀಸರ ಮೊಬೈಲ್‌ ಸಂಖ್ಯೆಗಳನ್ನು ಮಹಿಳೆಯರ ಬಳಿ ಇಟ್ಟುಕೊಂಡರೆ, ಸಮಸ್ಯೆಗಳಿಗೆ ಕೂಡಲೇ ಸಂಪರ್ಕಿಸಬಹುದು.
-ಪೂವಯ್ಯ, ವೃತ್ತ ನಿರೀಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next