ವಿಜಯಪುರ: ಪರಿಸರಕ್ಕೆ ಹಾನಿಕಾರಕ ರಾಸಾಯನಿಕಯುಕ್ತ ಪ್ಲಾಸ್ಟಿಕ್ ಸೇರ್ಪಡೆ ಪರಿಣಾಮ ಗೋದಾವರಿ ಉಸಿರುಗಟ್ಟಿಕೊಂಡಿದ್ದಾಳೆ. ಕೂಡಲೇ ಆಕೆಯನ್ನು ಬದುಕಿಸಿಕೊಳ್ಳದಿದ್ದರೆ ಮಧ್ಯ ಭಾರತಕ್ಕೆ ಸುಧಾರಿಸಲಾಗದ ಜಲಕ್ಷಾಮ ಆವರಿಸಲಿದೆ ಎಂದು ಗೋದಾವರಿಯ ಸಮಿತಿ ಕಾರ್ಯದರ್ಶಿ ರಮಾಕಾಂತ ಕುಲಕರ್ಣಿ ಎಚ್ಚರಿಸಿದರು. ನಗರದ ಬಿಎಲ್‌ಡಿಇ ಸಂಸ್ಥೆ ಆವರಣದಲ್ಲಿ ನಡೆದ ಬರಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶದ ಎರಡನೇ ದಿನ ಗುರುವಾರ “ಗೋದಾವರಿ ನದಿ ಪುನರುಜ್ಜೀವನ ಯಾತ್ರಾ ಸಂವಾದ ಗೋಷ್ಠಿ’ಯಲ್ಲಿ ಅವರು ಮಾತನಾಡಿದರು. ನದಿ ತೀರದ ನಗರ-ಹಳ್ಳಿಗಳ ಜನರು ಇಡೀ ವೈಯಕ್ತಿಕ ಬದುಕೇ ದಾವರಿಯಲ್ಲೇ ನಡೆಯುತ್ತಿದೆ. ನಗರೀಕರಣದ ಅವೈಜ್ಞಾನಿಕ-ಕೊಳಚೆ, ಬಯಲು ಶೌಚಾಲಯಗಳಂಥ ಕಾರಣಕ್ಕೆ ಪವಿತ್ರ ಗೋದಾವರಿ ಲೀನವಾಗಿದ್ದಾಳೆ. ಈ ಜೀವನದಿ ಜೀವ ಕಳೆದುಕೊಂಡರೆ ಜೀವ ಸಂಕುಲವೇ ಸರ್ವನಾಶವಾಗಲಿದೆ. ಕೂಡಲೇ ಈ ದುರವಸ್ಥೆಗೆ ಕಡಿವಾಣ ಹಾಕಿ ಗೋದಾವರಿಯನ್ನು ರಕ್ಷಿಸಲು ಸ್ಥಳೀಯ ಆಡಳಿತ ವ್ಯವಸ್ಥೆ ಎಚ್ಚರಿಸಲು ಜನಾಗ್ರಹಕ್ಕಾಗಿ ಭಾರತೀಯರೆಲ್ಲರೂ ಸಹಾಯ ಹಸ್ತ ಚಾಚಿ ಎಂದರು. ಕಲುಷಿತ ನೀರಿನಿಂದ ಮಾರಕ ರೋಗಗಳು ಆವರಿಸುತ್ತಿವೆ. ಈ ನದಿ ತೀರದಲ್ಲಿ ಮಣ್ಣು ಫಲವತ್ತತೆ ಕಳೆದುಕೊಂಡು ಬಂಜರಾಗುತ್ತಿದೆ. ಹೀಗಾಗಿ ಕೂಡಲೇ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವುದು ಅಗತ್ಯ. ಇದಕ್ಕಾಗಿ ಭಾರತೀಯ ಪ್ರತಿ ಒಕ್ಕೊರಲ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು. ಅನಿಕೇತ ಲೋಹಿಯಾ ಮಾತುನಾಡಿ, ಗೋದಾವರಿ ನದಿ ನೀರಿನ ಸ್ವತ್ಛತೆ ಕುರಿತು ಹಲವಾರು ಯೋಜನೆಗಳನ್ನು ಹಾಕಿಕೊಂಡು ಪೂರ್ವ ತಯಾರಿ ಮಾಡಿಕೊಳ್ಳಬೇಕು. ನೀರಿನ ಮಿತಬಳಕೆ ಕುರಿತು ಜನರಲ್ಲಿ ಸ್ಪಷ್ಟ ಮನವರಿಕೆ ಮಾಡಿಕೊಡಬೇಕು. ಮನುಷ್ಯ ಮಾತ್ರವಲ್ಲ, ಪಶು-ಪಕ್ಷಿ ಸೇರಿದಂತೆ ಪ್ರಕೃತಿಯ ಜೀವ ಸಂಕುಲಕ್ಕೇ ಅಪಾಯ ಎದುರಾಗಿದೆ. ಗೋದಾವರಿ ಸಂರಕ್ಷಣೆಗಾಗಿ ಸಂಘಟಿತ ಹೋರಾಟದ ಅಗತ್ಯವಿದೆ ಎಂದರು. ಸಂವಾದದಲ್ಲಿ ಪಾಲ್ಗೊಂಡಿದ್ದ ಅಂಬೇಜೋಗುರನ ಸುಭಾಶ ಶಿರಸಾಟ್, ಬುಂದೇಲಖಂಡದ ಸಂಜೀವ ಮಾತನಾಡಿ, ಸಂಪ್ರದಾಯದ ಹೆಸರಿನಲ್ಲಿ ನದಿ ತೀರದಲ್ಲಿ ಶವ ಸಂಸ್ಕಾರ ಮಾಡುವ, ಶವ ಸುಟ್ಟ ತ್ಯಾಜ್ಯವನ್ನೆಲ್ಲ ನದಿಗೆ ಎಸೆಯುವ ವ್ಯವಸ್ಥೆಗೆ ಕಡಿವಾಣ ಹಾಕಬೇಕಿದೆ. ಮೂಢನಂಬಿಕೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.