ಬೆಂಗಳೂರು: ನೆರೆಹಾವಳಿಯಿಂದ ಮನೆ, ಆಸ್ತಿಪಾಸ್ತಿ ಕಳೆದುಕೊಂಡ ಸಂತ್ರಸ್ತರ ನೆರವಿಗೆ ಧಾವಿಸಿರುವ ಸರಕಾರ, ಸಂಪೂರ್ಣ ಹಾನಿಗೀಡಾದ ಮನೆಗಳನ್ನು ನಿರ್ಮಿಸಿ ಕೊಡುವುದರ ಜತೆಗೆ ಪರಿಹಾರವನ್ನೂ ಒದಗಿಸಲು ನಿರ್ಧರಿಸಿದೆ. ಒಂದೇ ವಾರದಲ್ಲಿ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಸಂತ್ರಸ್ತರಿಗೆ ಪರಿಹಾರ ತಲುಪಲಿದೆ.
ಈ ಸಂಬಂಧ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಮತ್ತು ಸೇವೆಗಳ ವಿಭಾಗ ಆದೇಶ ಹೊರಡಿಸಿದ್ದು ಅದರಂತೆ ಸಂಪೂರ್ಣ ಹಾನಿಗೀಡಾದ ಮನೆಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ/ ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿ ಅನ್ವಯ ಸಾಮಾನ್ಯ ವರ್ಗಗಳಿಗೆ ತಲಾ 1.20 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ/ಪಂಗಡದವರಿಗೆ ತಲಾ 1.50 ಲಕ್ಷ ರೂ. ಪರಿಹಾರದ ಜತೆಗೆ ಹೆಚ್ಚುವರಿಯಾಗಿ ದೇವರಾಜ ಅರಸು ವಸತಿ ಯೋಜನೆ ಅಡಿ ಮನೆ ಒದಗಿಸಲಾಗುತ್ತದೆ.
ಈ ಮನೆಗಳನ್ನು ಆಯಾ ಜಿಲ್ಲಾಧಿಕಾರಿಗಳು ಅನುಮೋದನೆ ಮಾಡಿ ವಿವರಗಳೊಂದಿಗೆ ಫಲಾನುಭವಿಗಳ ಪಟ್ಟಿಯನ್ನು ಆರ್‌ಜಿಆರ್‌ಎಚ್‌ಸಿಎಲ್ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ. ಭಾಗಶಃ ಹಾನಿಯಾದ ಮನೆಗೊಳಗಾದ ಮನೆಗಳ ದುರಸ್ತಿಗೂ ತಲಾ 50 ಸಾವಿರ ರೂ. ನೀಡಲಾಗುತ್ತದೆ.
ಇದರಲ್ಲಿ ವಿಪತ್ತು ಪರಿಹಾರ ನಿಧಿಯ ಪರಿಷ್ಕೃತ ಮಾರ್ಗಸೂಚಿ ಅನ್ವಯ 6,500 ರೂ. ಜತೆಗೆ ರಾಜ್ಯ ಸರಕಾರದಿಂದ 43,500 ರೂ. ಸೇರಿ ಒಟ್ಟಾರೆ 50 ಸಾವಿರ ರೂ. ನೀಡಲು ನಿರ್ಧರಿಸಲಾಗಿದೆ. ಬಟ್ಟೆ ಕಳೆದುಕೊಂಡವರಿಗೆ ಮತ್ತು ಗೃಹೋಪಯೋಗಿ ವಸ್ತುಗಳು ಹಾನಿಯಾಗಿದ್ದರೆ ಕ್ರಮವಾಗಿ ತಲಾ 2,500 ರೂ. ಸೇರಿ 5 ಸಾವಿರ ರೂ. ನೀಡಲಾಗುವುದು. ಮುಂಗಾರು ಹಂಗಾಮು ಅಂದರೆ ಜೂನ್ 1ರಿಂದ ಸೆಪ್ಟಂಬರ್ ಅಂತ್ಯದವರೆಗೆ ಉಂಟಾದ ನೆರೆಹಾವಳಿಯ ಸಂತ್ರಸ್ತರಿಗೆ ಇದು ಅನ್ವಯ ಆಗಲಿದೆ.
ಅತಿವೃಷ್ಟಿಯಿಂದ ಮನೆ ಹಾನಿಯಾದ ಬಗ್ಗೆ 2 ದಿನಗಳಲ್ಲಿ ವರದಿಯಾಗಬೇಕು. ಕೂಡಲೇ ಪರಿಶೀಲಿಸಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಬೇಕು. ಅದನ್ನು ಪರಿಶೀಲಿಸಿ 7 ದಿನಗಳಲ್ಲಿ ಪರಿಹಾರ ಒದಗಿಸತಕ್ಕದ್ದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಮನೆ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಹತೆ ಮತ್ತು ಮಾಹಿತಿ ನಮೂದಿಸುವಲ್ಲಿ ಹಾಗೂ ಹಣ ಬಳಕೆಯಲ್ಲಿ ಲೋಪವಾದರೆ ಸಂಬಂಧಪಟ್ಟ ಅಧಿಕಾರಿ/ ನೌಕರರನ್ನೇ ನೇರ ಹೊಣೆ ಮಾಡಲಾಗುವುದು ಎಂದೂ ಎಚ್ಚರಿಸಲಾಗಿದೆ.
ಅನಧಿಕೃತ ಮನೆಗಳಿಗೂ 1 ಲಕ್ಷ ರೂ. ಪರಿಹಾರ
ಸರಕಾರದ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳೂ ನೆರೆಯಲ್ಲಿ ಹಾನಿಗೀಡಾದರೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಸಂಪೂರ್ಣ ಹಾನಿಗೊಳಗಾಗಿದ್ದರೆ ಒಂದು ಬಾರಿ 1 ಲಕ್ಷ ರೂ. ಪಾವತಿಸಲಾಗುವುದು. ಆದರೆ ಯಾವುದೇ ಮನೆ ಮಂಜೂರು ಮಾಡುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.