ಮಣಿಪಾಲ:ಪ್ರಥಮ ಬಾರಿ ನಾನು ವೇಷ ಹಾಕಿದಾಗ ಬಂದ ಮೊತ್ತ ಒಂದು ಲಕ್ಷದ ನಾಲ್ಕು ಸಾವಿರದ ಎಂಟುನೂರು ರೂಪಾಯಿ. ನಮ್ಮ ಮನೆಯಲ್ಲಿ ಹತ್ತು ಸಾವಿರ ರೂಪಾಯಿಗಿಂತ ಹೆಚ್ಚು ಹಣ ನೋಡಿದ್ದೇ ಇಲ್ಲ. ಮೊದಲ ಬಾರಿ ನಮ್ಮ ಮನೆಯಲ್ಲಿ ಅಷ್ಟೊಂದು ದೊಡ್ಡ ಮೊತ್ತದ ದೇಣಿಗೆ ಹಣ ಬಂದಿದ್ದನ್ನು ನೋಡಿ ಅತ್ತು ಬಿಟ್ಟಿದ್ದೆ…ಇದು ಶ್ರೀಕೃಷ್ಣ ಜನ್ಮಾಷ್ಠಮಿಯಂದು ತಮ್ಮ ವಿಭಿನ್ನ ವೇಷದ ಮೂಲಕ ಗುರುತಿಸಿಕೊಂಡ, ಸಮಾಜ ಸೇವಕ ರವಿ ಕಟಪಾಡಿ ಅವರು ಉದಯವಾಣಿ ಡಾಟ್ ಕಾಮ್ ನ ತೆರೆದಿದೆ ಮನೆ ಬಾ ಅತಿಥಿ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಹಂಚಿಕೊಂಡ ಮನದಾಳದ ಮಾತುಗಳು…
ಮೊದಲ ಬಾರಿ ಸಂಗ್ರಹವಾದ ದೇಣಿಗೆ ಹಣ ಮತ್ತು ಆ ದೇಣಿಗೆ ಪಡೆದ ಮಗುವನ್ನು ಇವತ್ತಿಗೂ ಮರೆಯಲು ಸಾಧ್ಯವಿಲ್ಲ. ಜನರು ನನ್ನನ್ನು ಅಷ್ಟು ಎತ್ತರದಲ್ಲಿ ಇರಿಸಿದ್ದಾರೆ. ಆ ಕಾರಣಕ್ಕಾಗಿಯೇ ನನಗೆ ಕೌನ್ ಬನೇಗಾ ಕರೋಪತಿ ಸೀಸನ್ ಶೋನಲ್ಲಿ ಭಾಗವಹಿಸಲು ಸಾಧ್ಯವಾಯಿತು. ನಾನು ಅಮಿತಾಬ್ ಅವರನ್ನು ನೋಡಿ ಅತ್ತುಬಿಟ್ಟಿದ್ದೆ.
ನಾನು ಮಾಡುವ ಸಮಾಜಮುಖಿ ಕೆಲಸಕ್ಕೆ ಜಿಲ್ಲಾಡಳಿತವಾಗಲಿ, ಜನರಾಗಲಿ, ಪೊಲೀಸ್ ಇಲಾಖೆಯಾಗಲಿ ಅಥವಾ ಯಾರೇ ಆಗಲಿ ಇಲ್ಲ ಅಂತ ಹೇಳಿಲ್ಲ. ಎಲ್ಲರೂ ನನಗೆ ಸಹಕಾರ ನೀಡಿದ್ದರಿಂದ ಈ ಕೆಲಸವನ್ನು ಮುಂದುವರಿಸಿಕೊಂಡು ಬರುತ್ತಿದ್ದೇನೆ.
ಈ ಬಾರಿ ರವಿ ವೇಷ ಹಾಕುವೆ:
ಹೌದು ಈ ವರ್ಷದ ಶ್ರೀಕೃಷ್ಣಜನ್ಮಾಷ್ಠಮಿಯಂದು ರವಿ ಕಟಪಾಡಿ ವೇಷ ಧರಿಸಲಿದ್ದಾರೆಯೇ ಎಂಬುದು ಬಹುತೇಕರು ಕೇಳುವ ಪ್ರಶ್ನೆಗೆ ಸ್ವತಃ ರವಿ ಕಟಪಾಡಿ ಉತ್ತರಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ವೇಷ ಧರಿಸಲು ಅನುಮತಿ ಸಿಗುತ್ತದೋ ಇಲ್ಲವೋ ಎಂಬ ಅನುಮಾನದಲ್ಲಿದ್ದೆ. ಯಾಕೆಂದರೆ ಈ ಬಾರಿಯೂ ನಮಗೆ ಧನಸಹಾಯ ಮಾಡುವಂತೆ ಕೋರಿ ಹಲವಾರು ಅರ್ಜಿಗಳು ಬಂದಿದ್ದವು. ಅದಕ್ಕಾಗಿ ನಾನು ಜಿಲ್ಲಾಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ವಿಷಯ ತಿಳಿಸಿದ್ದೆ, ಇದೊಂದು ಸಮಾಜಸೇವೆಯಾದ ಕಾರಣ ಅವರು ಕೋವಿಡ್ ನಿಯಮ ಪಾಲಿಸಿ ವೇಷ ಧರಿಸಲು ಅನುಮತಿ ನೀಡಿದ್ದಾರೆ. ಆದ್ದರಿಂದ ಈ ಬಾರಿ ಕೃಷ್ಣಜನ್ಮಾಷ್ಠಮಿಯಂದು ವಿಭಿನ್ನ ವೇಷ ಧರಿಸಲಿದ್ದೇನೆ. ಜನರು ಕೂಡಾ ನನಗೆ ಎಂದಿನಂತೆ ಸಹಕಾರ ನೀಡಲಿದ್ದಾರೆ ಎಂಬ ಭರವಸೆ ನನ್ನದು ಎಂಬುದು ಕಟಪಾಡಿ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಕೋವಿಡ್ ಪಾಠ ಕಲಿಸಿದೆ:
ದಿನಗೂಲಿ ಕೆಲಸ ಮಾಡುವ ನನಗೆ ಕೋವಿಡ್ ನಿಂದ ತೊಂದರೆಯಾಗಿರುವುದು ಸತ್ಯ. ಆದರೂ ನನಗಿಂತ ಹೆಚ್ಚಾಗಿ ತೊಂದರೆ ಅನುಭವಿಸಿದವರು ಇದ್ದರು. ಆದರೆ ಕೋವಿಡ್ ನಮಗೊಂದು ಪಾಠ ಕಲಿಸಿದೆ. ಯಾವುದೇ ಹಬ್ಬ, ಹರಿದಿನವಾಗಲಿ ಎಲ್ಲರೂ ಮನೆಯಲ್ಲಿ ಇರುತ್ತಾರೆ. ಆದರೆ ಒಟ್ಟಿಗೆ ಕುಳಿತು ಊಟ ಮಾಡಲು ಸಿಗುವುದಿಲ್ಲ. ಅದೇ ಕೋವಿಡ್ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ನಾನು, ಅಣ್ಣ, ಅಮ್ಮ, ಅಪ್ಪ, ತಮ್ಮ,ಅಕ್ಕ, ತಂಗಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದ್ದೇವು.
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇದ್ದೆ, ಆದರೂ ಬೀದಿ ನಾಯಿಗಳಿಗೆ ಅನ್ನ ಹಾಕಲು ಮಾತ್ರ ಹೊರಗೆ ಹೋಗುತ್ತಿದ್ದೆ. ಬಹುತೇಕ ಸಮಯ ಕೆಲಸವೇ ಇಲ್ಲವಾಗಿತ್ತು. ಕೆಲವೊಮ್ಮೆ ಬೆಳಗ್ಗೆ ಬೇಗ ಎದ್ದು ಕೆಲಸಕ್ಕೆ ಹೋಗಿ, ರಾತ್ರಿ ಕತ್ತಲಾದ ಮೇಲೆ ಮನೆಗೆ ಬರುತ್ತಿದ್ದೆ.
ಈವರೆಗೆ ಕಳೆದ ಆರೇಳು ವರ್ಷಗಳಿಂದ ವಿಭಿನ್ನ ವೇಷಗಳ ಮೂಲಕ ನಮಗೆ ಜನರಿಂದಲೇ ಸಂಗ್ರಹವಾದ ಮೊತ್ತ ಒಟ್ಟು 72 ಲಕ್ಷ ರೂಪಾಯಿ. ಅದನ್ನು ನಾವು ಒಳ್ಳೆ ಕೆಲಸಕ್ಕೆ ಉಪಯೋಗಿಸಿದ್ದೇವೆ ಎಂಬ ತೃಪ್ತಿ ಇದೆ. ಜನರಿಗೂ ನಮ್ಮ ಮೇಲೆ ವಿಶ್ವಾಸವಿದೆ.
ಮಲ್ಪೆ ಜನರು ನನ್ನ ಕೈಬಿಡಲಿಲ್ಲ:
ಕೌನ್ ಬನೇಗಾ ಕರೋಡ್ ಪತಿ ಶೋಗೆ ಹೋಗಿ ಬಂದ ಮೇಲೆ ನನಗೆ ಕೆಲಸವೇ ಇಲ್ಲದಂತಾಯ್ತು. ಸೆಂಟರಿಂಗ್ ಕೆಲಸಕ್ಕೆ ಹೋದ ವೇಳೆ ಮಾಲೀಕರು ನೇರ ನನ್ನ ಬಳಿ ಬಂದು, ನಿಮಗೆ ಒಳ್ಳೆ ಹೆಸರಿದೆ, ನಿಮ್ಮಿಂದ ಕೂಲಿ ಕೆಲಸ ಮಾಡಿಸಿಕೊಳ್ಳುವುದು ಸರಿಯಲ್ಲ ಎಂದುಬಿಟ್ಟರು. ಆಗ ನಾನು ಹೇಳಿದೆ..ಸರ್ ಹೆಸರು ತೆಗೆದುಕೊಂಡು ಏನು ಮಾಡೋದು, ದುಡಿಯುವವನಿಗೆ ಯಾವ ಕೆಲಸವಾದರೂ ಮಾಡಬಹುದು ನಿಯತ್ತಾಗಿ ದುಡಿದು ತಿನ್ನಲು ಬಿಟ್ಟರೆ ಸಾಕು ಅಂತ ಹೇಳಿದೆ. ಆದರೂ ಅವರು ನನ್ನ ಮಾತನ್ನು ಕೇಳಲೇ ಇಲ್ಲ. ಅಂದಿನ ನನ್ನ ಸಂಪಾದನೆ ಎರಡು ಬಿಸ್ಕೆಟ್, ಒಂದು ಕಪ್ ಟೀ!
ಇಂತಹ ಸ್ಥಿತಿಯಲ್ಲೂ ಮಲ್ಪೆಯ ಜನರು ನನ್ನ ಕೈಬಿಡಲಿಲ್ಲ. ಮನೆಯಲ್ಲಿ ಎರಡು ಹೊತ್ತು ಊಟ ಮಾಡುತ್ತಿದ್ದೇನೆ ಅಂದರೆ ಅದಕ್ಕೆ ಕಾರಣ ಮಲ್ಪೆ ಜನರು. ನಗರಸಭೆಯವರು ಮಲ್ಪೆಯ ಎಲ್ಲಾ ಅಂಗಡಿಯ ಕಸ ತೆಗೆದುಕೊಂಡು ಹೋಗುತ್ತಾರೆ. ಅದರ ಬಿಲ್ ಕಲೆಕ್ಷನ್ ಮಾಡುತ್ತೀಯಾ ಅಂತ ಒಬ್ಬರು ಕೇಳಿದ್ರು, ಅದಕ್ಕೆ ನಾನು ಹಿಂದೆ, ಮುಂದೆ ನೋಡದೇ ಆಯ್ತು ಸರ್ ಎಂದು ಹೇಳಿದೆ. ನನಗೆ ಬೇಕಿರುವುದು ಕೆಲಸ, ನಾಳೆ ಯಾರಾದರೂ ಬಂದು ಪೈಪ್ ಲೈನ್ ಹೊಂಡ ತೆಗೆಯಬೇಕು ಅಂತ ಹೇಳಿದರೂ ಅದಕ್ಕೂ ನಾನು ತಯಾರಾಗಿದ್ದೇನೆ. ಈಗ ಬಿಲ್ ಕಲೆಕ್ಷನ್ ಕೆಲಸ ಮುಗಿದ ನಂತರ ಸೆಂಟರಿಂಗ್ ಕೆಲಸಕ್ಕೆ ಹೋಗುತ್ತಿದ್ದೇನೆ ಎಂಬುದು ರವಿ ಕಟಪಾಡಿ ಅವರು ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
ಇಷ್ಟೆಲ್ಲಾ ಹೆಸರು, ಸಮಾಜಸೇವೆ ಮಾಡಿದರೂ ನೀವಿನ್ನೂ ಯಾಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ರವಿ ಅವರು, ಈಗ ನಾನು ಪೂರ್ಣ ಪ್ರಮಾಣದಲ್ಲಿ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಅದು ಮಧ್ಯರಾತ್ರಿಯಾದರೂ ಸರಿ ನಾನು ನೆರವಿಗಾಗಿ ಎದ್ದು ಹೋಗುತ್ತೇನೆ. ಒಂದು ವೇಳೆ ನಾನು ಮದುವೆಯಾದರೆ ನನಗೆ ಈ ಬಡಮಕ್ಕಳಿಗೆ ನೆರವು ನೀಡಲು ಸಾಧ್ಯವಾಗುತ್ತೋ ಇಲ್ಲವೋ ಎಂಬ ಭೀತಿ ನನ್ನದು. ಅಷ್ಟೇ ಅಲ್ಲ ಮದುವೆಯಾದ ಮೇಲೆ ಫ್ಯಾಮಿಲಿಯನ್ನು ಬಿಟ್ಟು ಸಮಾಜಸೇವೆಯನ್ನೇ ಮಾಡುತ್ತಿದ್ದರೆ, ಆಗ ನೀವು ಊರಿನವರ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳುತ್ತೀರಿ, ನಮ್ಮ ಬಗ್ಗೆ ಕಾಳಜಿ ಇಲ್ಲ ಎಂಬ ಜಟಾಪಟಿಯೂ ಶುರುವಾಗಬಹುದು. ಹೀಗಾಗಿ ನನ್ನ ಖುಷಿಗಾಗಿ ಮತ್ತೊಬ್ಬರ ಖುಷಿಯನ್ನು ಹಾಳು ಮಾಡಲು ತಯಾರಿಲ್ಲ. ಅದಕ್ಕಾಗಿ ನಾನು ಜೀವಮಾನವಿಡೀ ಸಮಾಜಸೇವೆಯನ್ನೇ ಮಾಡಲು ನಿರ್ಧರಿಸಿದ್ದೇನೆ.