ಕಾಲೇಜು ಸೇರಿ ಒಂದು ವರ್ಷ ಕಳೆದಿತ್ತು. ಪರೀಕ್ಷೆಗಳು ಸಮೀಪಿಸಿದ್ದರಿಂದ ಎಲ್ಲ ವಿದ್ಯಾರ್ಥಿಗಳೂ ಪೂರ್ವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರು. ಕಾಲೇಜಿಗೆ ರಜೆ ಇದ್ದ ಕಾರಣ ನಾನು ಊರಿಗೆ ಹೋಗಿದ್ದೆ. ಪರೀಕ್ಷೆಯ ಫೀ ಕಟ್ಟುವ ಕೊನೆಯ ದಿನವೆಂದು ಗೊತ್ತಾಗಿ ತಕ್ಷಣವೇ ಊರಿನಿಂದ ಕಾಲೇಜು ಬಸ್ ಹತ್ತಿದೆ. ಕಾಲೇಜು ಸಮೀಪಿಸುತ್ತಿದ್ದಂತೆಯೇ ಪರ್ಸ್‌ನ ಕಡೆ ಗಮನ ಹೋಯಿತು. ಹಿಂದಿನ ಜೇಬಿನಲ್ಲಿಟ್ಟಿದ್ದ ಪರ್ಸ್ ಇರಲೇ ಇಲ್ಲ. ಎಲ್ಲಿ ಹುಡುಕಾಡಿದರೂ ಸಿಗಲಿಲ್ಲ. ಫೀ ಕಟ್ಟಲು ತಂದಿದ್ದ ದುಡ್ಡು, ಬಸ್ ಪಾಸ್, ಎಟಿಎಂ ಕಾರ್ಡ್‌ಗಳೆಲ್ಲವೂ ಅದರಲ್ಲೇ ಇದ್ದವು.
ಜೇಬಲ್ಲಿ ಒಂದು ರೂಪಾಯಿಯೂ ಇದ್ದಿರಲಿಲ್ಲ. ಏನು ಮಾಡಬೇಕೆಂದು ದಿಕ್ಕೇ ತೋಚಲಿಲ್ಲ. ಅಂದು ಫೀ ಕಟ್ಟದಿದ್ದರೆ ಒಂದು ವರ್ಷದ ಓದೆಲ್ಲಾ ವ್ಯರ್ಥವಾಗುತ್ತದೆ ಎಂಬ ಆತಂಕ, ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡಿತು. ಸಹಾಯಕ್ಕಾಗಿ ಯಾಚಿಸೋಣವೆಂದರೆ, ಸ್ನೇಹಿತರ್ಯಾರೂ ಇರಲಿಲ್ಲ. ಎಲ್ಲರೂ ಊರಿಗೆ ಹೋಗಿದ್ದರು.
ಬೇರೆ ದಾರಿಯೇ ತೋಚದೆ ಕಾಲೇಜಿನ ಬಸ್ ನಿಲ್ದಾಣದಲ್ಲಿ ಅಸಹಾಯಕನಾಗಿ ನಿಂತಾಗ, “ಹಲೋ ಸರ್’ ಎಂದು ಯಾರೋ ಒಬ್ಬರು ಕೂಗಿದರು. ಏನು? ಎನ್ನುವಂತೆ ತಿರುಗಿ ನೋಡಿದಾಗ, ಅವರು ಕೈ ಮೇಲೆ ಮಾಡಿ “ಈ ಪರ್ಸ್ ನಿಮ್ದಾ?’ ಎಂದು ಕೇಳಿದರು. ತಕ್ಷಣ ಓಡಿಹೋಗಿ ನೋಡಿದಾಗ ಅದು ನನ್ನದೇ ಆಗಿತ್ತು. ಹೋದ ಜೀವ ಬಂದಂತಾಯ್ತು. ಆ ಕ್ಷಣದಲ್ಲಿ ನನಗಾದ ಖುಷಿಗೆ ಅವರನ್ನೊಮ್ಮೆ ಜೋರಾಗಿ ತಬ್ಬಿಕೊಂಡೆ. ಅವರು, ಬಸ್‌ಪಾಸ್‌ನಲ್ಲಿದ್ದ ನನ್ನ ಫೋಟೋ ನೋಡಿ ಗುರುತಿಸಿ ಪರ್ಸ್ ಅನ್ನು ನನಗೆ ಮರಳಿಸಿದ್ದರು. ನಿಮಗೆ ಎಲ್ಲಿ ಸಿಕ್ಕಿತೆಂದು ಕೇಳಿದಾಗ, “ಬಸ್‌ನಲ್ಲಿ ಸೀಟಿನ ಹಿಂಬದಿಯಲ್ಲಿ ಬಿದ್ದಿತ್ತು’ ಎಂದು ಹೇಳಿ ಹೊರಟೇ ಹೋದರು. ಅವರ ಹೆಸರನ್ನು ಕೂಡಾ ನಾನು ಕೇಳಲಿಲ್ಲ.
ಮಹಾಂತೇಶ ದೊಡವಾಡ