Advertisement
ತುಂಬಾ ದಿನದ ನಂತರ ಶಾಲೆಗೆ ಬಂದ ಖುಷಿಯನ್ನು ಅವಳ ಮುಖದಲ್ಲಿ ಗಮನಿಸಿದೆ. “ಏನವ್ವ, ಚೆನ್ನಾಗಿದ್ದೀರಾ? ಏನ್ ಅಪರೂಪಕ್ಕೆ ಶಾಲೆಗೆ ಬಂದಿರಲ್ಲಾ?’ ಅಂದಿದ್ದಕ್ಕೆ “ಸಂದಾಗಿವ್ನಿ ಸರಾ, ಕೂಲಿ ನಾಲಿ ಮಾಡ್ತ, ಊರೂರಂತ ತಿರಗ್ತಾ. ಇಬ್ರು ಮಕ್ಳ ಹೊಟ್ಟಿ ತುಂಬ್ಸಬೇಕಲವಾ!?’ ಅಂದು ಮೌನಿಯಾದಳು. ನನಗೆ ಮಾತು ಬರಲಿಲ್ಲ. ಅವಳೇ ಮುಂದುವರೆದು ಮಾತಿಗೆ ಶುರುವಿಟ್ಟುಕೊಂಡಳು. “ಸರಾ, ನಾ ಅವಾಗ ಅಡುಗಿ ಕೆಲ್ಸ ಮಾಡ್ವಾಗ 650 ರುಪಾಯಿ ರೊಕ್ಕ ಬಳಸಿಕೊಂಡಿದ್ದೆ ಮಗಿಗೆ ಹುಷಾರಿಲ್ಲಾಂತ, ಕೆಲ್ಸ ಬಿಟ್ ಹೊಗ್ವಾಗ ನನ್ನತ್ರ ರೊಕ್ಕ ಇರಲಿಲಿ. ಊರೂರಿಗೆ ಅಂತ ಕೂಲಿಗೆ ಹೋಗ್ತಿದ್ನಲ್ಲ, ನಂಗ ಮರೆ¤ ಹೋಗಿತ್ತು. ಮೊನ್ನೆ ಇದ್ದಕ್ಕಿದ್ದ ಹಾಗೆ ನೆಂಪಾಯ್ತು, ಹಾವಿನ ಮೇಲೆ ಕಾಲಿಟ್ಟ ಹಾಗಾಯ್ತು ನೋಡ್ರಿ. ಸಾಲಿ ಮಕ್ಳ ದುಡ್ಡು ತಿಂದು, ತೀರಸೆª ಸುಮ್ನೆ ಇದೀನಲ್ಲ? ನಂದೆಂಥ ಬಾಳು! ಮೊದು ಹೋಗಿ ಒಪ್ಸಬೇಕು ಅಂತ ಬಂದಿವ್ನಿ’ ಅಂದರು.
Related Articles
Advertisement
ನಾನು ಎಷ್ಟು ಹೇಳಿದರೂ ಆ ತಾಯಿ ಹಣ ಹಿಂದಕ್ಕೆ ಪಡೆಯಲು ಒಪ್ಪಲಿಲ್ಲ. ಕಡೆಗೆ “ನಿಮ್ಮ ಮನಸ್ಸಿಗೆ ಸಮಾಧಾನವಾಗಬೇಕು ಅಂತಾಂದ್ರೆ ಶಾಲೆಗೆ ಏನಾದ್ರೂ ಒಂದು ವಸ್ತು ತಂದು ಕೊಡಿ, ನಿಮ್ಮ ಹೆಸರಲ್ಲಿ’ ಅಂತ ಅಂದೆ. “ಏನ್ ಬೇಕ್ರಿ ಸರಾ?’ ಅಂತ ಆಕೆ ಕೇಳಿದಾಗ ನನಗೆ ಏನು ಹೇಳಬೇಕೋ ಗೊತ್ತಾಗ್ಲಿಲ್ಲ. ಅವರೇ ಏನೋ ನಿರ್ಧಾರಕ್ಕೆ ಬಂದವರಂತೆ “ಸರಾ, ಪ್ರತಿ ತಿಂಗ್ಳು ನಾ ದುಡಿದ ದುಡ್‌ನಾಗ 100 ರುಪಾಯಿ ಸಾಲಿಗೆ ಕೊಡ್ತೀನಿ. ಮಕ್ಕಳಿಗೆ ತಂದು ಹಾಕ್ರಿ ಸರಾ, ಅಷ್ಟು ಸಾಕು! ನಾ ಬದುಕಿರುವವರೆಗೂ ಪ್ರತಿ ತಿಂಗಳು ನಿಮಗೆ ತಿಂಗಳು ತಿಂಗಳು ನೂರು ರೂಪಾಯಿ ತಪ್ಸಾಕಿಲಿ. ಬ್ಯಾಡ ಅನ್‌ಬ್ಯಾಡ್ರಿ ದೇವ್ರ, ಒಪ್ಪಿಕೊಳಿ. ಮಕ್ಳು ಖುಷಿಯಿಂದ ಊಟ ಮಾಡಿದ್ರೆ ಏನೋ ಮನಸ್ನಾಗ ಸಮಾಧಾನ ಆದೀತು ಅಂದ್ರು’
ನನ್ನ ಮನಸ್ಸು ಆದ್ರìಗೊಂಡಿತು. ಈ ಹಳ್ಳಿಯ ಮಣ್ಣಲ್ಲಿ, ಈ ಮಣ್ಣಿನ ಹೆಣ್ಣಲ್ಲಿ ಅದೆಂತಹ ಶಕ್ತಿಯನ್ನು ಅಡಗಿಸಿದ್ದೀಯೋ ದೇವರೆ! ಒಂದಕ್ಷರವೂ ಬಾರದ, ಶಾಲೆಯ ಮೆಟ್ಟಿಲನ್ನೇ ಹತ್ತದ ಆಕೆ ಬೇರೆಯವರ ಬಳಿ ಕೂಲಿ ಮಾಡುತ್ತಾ ಜೀವನ ಮಾಡುವ, ಕಡುಬಡವಳಾಗಿರುವ ಆಕೆಯಲ್ಲಿಯೂ ಅದೆಂತಹ ದೇವರ ಗುಣ. ಐವತ್ತು ರುಪಾಯಿ ದಾನ ಮಾಡಿದರೆ ನೂರು ರುಪಾಯಿಯಷ್ಟು ಪ್ರಚಾರ ಗಿಟ್ಟಿಸಿಕೊಳ್ಳುವವರೆಷ್ಟು ಮಂದಿಯಿದ್ದಾರೆ ನಮ್ಮ ಮುಂದೆ. ನಮ್ಮೆಲ್ಲಾ ಆಧುನಿಕ ಡಿಗ್ರಿಗಳು, ಶಿಕ್ಷಣ ಸೌಧಗಳು, ಶೋಷಣೆಯನ್ನೇ ಜೀವಾಳ ಮಾಡಿಕೊಂಡ ಡೋಂಗಿ ಅಭಿವೃದ್ದಿಗಳು ಇಂಥವರ ಮುಂದೆ ಮಂಡಿಯೂರಬೇಕು. ಇಂಥವರ ನಡುವೆ ಆ ತಾಯಿ ಜೀವ ತಣ್ಣಗಿರಲಿ ಎಂದು ಮನಸಲ್ಲಿ ಅಂದುಕೊಂಡು ಕಣ್ಣಂಚಿನಲಿ ಜಿನುಗಿದ ಒಂದು ಹನಿ ಕಣ್ಣೀರನ್ನು ಕಾಣದಂತೆ ಒರಸಿಕೊಂಡೆ. ಇಂಥ ನೂರಾರು ಯಶೋದೆಯರು ನಮ್ಮೊಂದಿಗೆ ಇದ್ದಾರೆ. ಅವರು ಇರುವವರೆಗೆ ಆ ಮಳೆ ಬೆಳೆಗಳು ಅವರಿಗಾಗಿಯಾದರೂ ಬೆಳೆಯುತ್ತವೆ.
ಸದಾಶಿವ್ ಸೊರಟೂರು, ಚಿಂತಾಮಣಿ