Advertisement

ಹೆಲಿಕಾಪ್ಟರ್ ಪತನ: ಪ್ರತ್ಯಕ್ಷದರ್ಶಿಯ ಮೊಬೈಲ್ ಫೊರೆನ್ಸಿಕ್ ಪರೀಕ್ಷೆಗೆ

07:51 PM Dec 12, 2021 | Team Udayavani |

ಕೊಯಮತ್ತೂರು: ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರ 12 ಮಂದಿ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಸ್ಥಳದಲ್ಲಿ ಪ್ರತ್ಯಕ್ಷದರ್ಶಿಯಾಗಿ ವಿಡಿಯೋ ಚಿತ್ರೀಕರಿಸಿದ್ದ ವ್ಯಕ್ತಿಯ ಮೊಬೈಲ್ ಫೋನ್ ಅನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

Advertisement

ಕೊಯಮತ್ತೂರಿನ ಛಾಯಾಗ್ರಾಹಕ ಜೋಯ್ ಅವರು ಡಿಸೆಂಬರ್ 8 ರಂದು ತಮ್ಮ ಸ್ನೇಹಿತ ನಜರ್ ಮತ್ತು ಅವರ ಕೆಲವು ಕುಟುಂಬ ಸದಸ್ಯರೊಂದಿಗೆ ಗುಡ್ಡಗಾಡು ನೀಲಗಿರಿ ಜಿಲ್ಲೆಯ ಕಟ್ಟೇರಿ ಪ್ರದೇಶಕ್ಕೆ ಫೋಟೋಗಳನ್ನು ಕ್ಲಿಕ್ಕಿಸಲು ಹೋಗಿದ್ದರು.

ಕುತೂಹಲದಿಂದ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಅಪಘಾತಕ್ಕೀಡಾಗುವ ಕೆಲವೇ ಕ್ಷಣಗಳ ಮೊದಲು ಹೆಲಿಕಾಪ್ಟರ್‌ನ ವಿಡಿಯೋವನ್ನು ರೆಕಾರ್ಡ್ ಮಾಡಿದ್ದರು, ಮಂಜಿನ ನಡುವೆ ಹೆಲಿಕಾಪ್ಟರ್ ಕಣ್ಮರೆಯಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಕರಣದ ತನಿಖೆಯ ಭಾಗವಾಗಿ ಜಿಲ್ಲಾ ಪೊಲೀಸರು ಜೋಯ್ ಅವರ ಮೊಬೈಲ್ ಫೋನ್ ಅನ್ನು ಸಂಗ್ರಹಿಸಿ ಕೊಯಮತ್ತೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಛಾಯಾಗ್ರಾಹಕ ಮತ್ತು ಅವರೊಂದಿಗೆ ಇನ್ನೂ ಕೆಲವರು ಕಾಡು ಪ್ರಾಣಿಗಳ ಸಂಚಾರವಿರುವ ನಿಷೇಧಿತ ಪ್ರದೇಶವಾಗಿರುವ ದಟ್ಟ ಅರಣ್ಯ ಪ್ರದೇಶಕ್ಕೆ ಏಕೆ ಹೋಗಿದ್ದರು ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

Advertisement

ಪೊಲೀಸ್ ಇಲಾಖೆಯು ಚೆನ್ನೈನ ಹವಾಮಾನ ಇಲಾಖೆಯಿಂದ ದುರಂತದ ದಿನದಂದು ಪ್ರದೇಶದ ಹವಾಮಾನ ಮತ್ತು ತಾಪಮಾನಕ್ಕೆ ಸಂಬಂಧಿಸಿದ ವಿವರಗಳನ್ನು ಕೇಳಿದೆ. ಅಲ್ಲದೆ, ಅಪಘಾತದ ಬಗ್ಗೆ ಸುಳಿವುಗಳನ್ನು ಸಂಗ್ರಹಿಸಲು ಪೊಲೀಸರು ಸಾಕ್ಷಿಗಳನ್ನು ಪ್ರಶ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಎಂಐ-17ವಿಎಚ್ ಹೆಲಿಕಾಪ್ಟರ್ ಕೂನೂರಿನ ಕಟ್ಟೇರಿ-ನಂಜಪ್ಪನ್‌ಛತ್ರಂ ಪ್ರದೇಶದಲ್ಲಿ ಪತನಗೊಂಡು ಸಿಡಿಎಸ್ ಜನರಲ್ ರಾವತ್, ಅವರ ಪತ್ನಿ ಮತ್ತು ಇತರ 11 ಮಂದಿ ಸಾವನ್ನಪ್ಪಿದ್ದರು.

ಅಪಘಾತದಲ್ಲಿ ಓರ್ವ ಐಎಎಫ್ ಸಿಬ್ಬಂದಿ ಬದುಕುಳಿದಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next