Advertisement

ರಾಜ್ಯದಲ್ಲಿ ಹೆಲಿಟೂರಿಸಂ ಆರಂಭಿಸಲು ಶೀಘ್ರದಲ್ಲಿ ಮಹೂರ್ತ ನಿಗದಿ: ಸಿ.ಪಿ.ಯೋಗೇಶ್ವರ್

03:11 PM Apr 09, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಅತೀ ಶೀಘ್ರದಲ್ಲಿ ಹೆಲಿಟೂರಿಸಂ ಆರಂಭಿಸುವ ಸಂಬಂಧ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ‍್ವರ್ ಹೆಲಿಟೂರಿಸಂ ಕಂಪನಿಗಳಿಗೆ ಸೂಚಿಸಿದ್ದಾರೆ.

Advertisement

ಬೆಂಗಳೂರಿನ ಕುಮಾರ ಕೃಪ ಅತಿಥಿ ಗೃಹದಲ್ಲಿ ಪ್ರವಾಸೋದ್ಯಮ ಸಚಿವರ ನೇತೃತ್ವದಲ್ಲಿ ಹೆಲಿಟೂರಿಸಂ ಆರಂಭಿಸುವ ಸಂಬಂಧ ನಡೆದ ಸಭೆಯಲ್ಲಿ ಫ್ಲೈಬ್ಲೇಡ್‍, ಚಿಪ್ಸನ್‍ ಮತ್ತು ಥಂಬಿ ಕಂಪನಿಗಳು ಪ್ರವಾಸಿಗರಿಗೆ ಹೆಲಿಟೂರಿಸಂ ಕಲ್ಪಿಸುವ ಸಂಬಂಧ ಪ್ರಾತ್ಯಕ್ಷಿಕೆಯನ್ನು ತೋರಿಸಿದರು.

ಮೊದಲಿಗೆ ರಾಜ್ಯದಲ್ಲಿ ಬಳಕೆಯಲ್ಲಿರುವ ಹೆಲಿಪ್ಯಾಡ್‍ ಹಾಗೂ ವಿಮಾನ ನಿಲ್ದಾಣಗಳನ್ನು ಬಳಸಿಕೊಂಡು ಹೆಲಿಟೂರಿಸಂ ಆರಂಭಿಸುವಂತೆ ಹಾಗೂ ಹೆಲಿಪ್ಯಾಡ್‍ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಲಾಂಜ್‍ಗಳನ್ನು ಸರ್ಕಾರವೇ ನಿರ್ಮಿಸಿಕೊಡಲಿದೆ ಎಂದು ಸಚಿವರು ತಿಳಿಸಿದರು. ಅಷ್ಟೇ ಅಲ್ಲದೇ ಬೇಡಿಕೆಯಿರುವ ಸ್ಥಳಗಳಲ್ಲಿ ತ್ವರಿತವಾಗಿ ಹೆಲಿಪ್ಯಾಡ್‍ಗಳನ್ನು ನಿರ್ಮಿಸಿ ಅಗತ್ಯ ಅನುಮತಿಗಳನ್ನು ದೊರಕಿಸಿಕೊಡುವುದಾಗಿ ಸಹ ಇದೇ ವೇಳೆ ಸಚಿವ ಯೋಗೇಶ‍್ವರ ಹೇಳಿದರು.

ಇದನ್ನೂ ಓದಿ:ಮಸ್ಕಿಯಲ್ಲಿ ಗಂಭೀರ ಸ್ವರೂಪ ಪಡೆದ ಹಣ ಹಂಚಿಕೆ ಪ್ರಕರಣ: ಕಾಂಗ್ರೆಸ್ ಪ್ರತಿಭಟನೆ

ಪ್ರಥಮ ಹಂತದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಬಳ್ಳಾರಿ, ಹುಬ್ಬಳ್ಳಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಹೆಲಿಟೂರಿಸಂ ಆರಂಭಿಸುವಂತೆ ಸಚಿವರು ನಿರ್ದೇಶಿಸಿದರು. ಇದಕ್ಕೆ ಸ್ಪಂದಿಸಿದ ಹೆಲಿಟೂರಿಸಂ ಕಂಪನಿಗಳು ರಾಜ್ಯ ಸರ್ಕಾರವು ಪ್ರವಾಸಿ ಮಾರ್ಗಗಳನ್ನು ನಿಗದಿಪಡಿಸಿದ ತಕ್ಷಣ ಪ್ರವಾಸಿಗರಿಗೆ ಸೇವೆ ಒದಗಿಸಲು ಸಿದ್ಧವಿರುವುದಾಗಿ ತಿಳಿಸಿದರು.

Advertisement

ಹೆಲಿಟೂರಿಸಂ ಆರಂಭಿಸಲು ಪ್ರಾರಂಭದಲ್ಲಿ ಆಗಲಿರುವ ನಷ್ಟವನ್ನು ಭರಿಸುವಂತೆ ಹಾಗೂ ಇಂಧನ ಹಾಗೂ ಜಿ.ಎಸ್‍.ಟಿ.ಯಲ್ಲಿ ರಿಯಾಯಿತಿ ನೀಡುವಂತೆ ಹೆಲಿಟೂರಿಸಂ ಸೇವೆ ಒದಗಿಸುವ ಕಂಪನಿಗಳ ಪ್ರತಿನಿಧಿಗಳು ಮನವಿ ಮಾಡಿದರು. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ರಾಜ್ಯದ ಎಲ್ಲಾ ಸಚಿವರುಗಳು ಬೇರೆ-ಬೇರೆ ರಾಜ್ಯ ಹಾಗೂ ಕೇಂದ್ರದಿಂದ ರಾಜ್ಯಕ್ಕೆ ಆಗಮಿಸಲಿರುವ ಸಚಿವರುಗಳು ಹೆಲಿಕಾಪ್ಟರ್‍ ಸೇವೆಯನ್ನು ಬಳಸಿಕೊಂಡರೆ ಸಮಯವು ಉಳಿಯಲಿದ್ದು, ತಮಗೂ ಲಾಭವಾಗಲಿದೆ ಎಂದು ಹೆಲಿಟೂರಿಸಂ ಕಂಪನಿಗಳ ಪ್ರತಿನಿಧಿಗಳು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವ ಯೋಗೇಶ್ವರ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಪ್ರವಾಸಿಗರಿಗೆ ಕಾರವಾನ್‍ ಸೌಲಭ್ಯ: ರಾಜ್ಯದಲ್ಲಿರುವ ಎಲ್ಲಾ ವಿಮಾನ ನಿಲ್ದಾಣಗಳು ಹಾಗೂ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರಿಗೆ ಕಾರವಾನ್‍ ಸೌಲಭ್ಯವನ್ನು ಒದಗಿಸಲು ಸಹ ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next