Advertisement

ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಹೊಸ ದರ ಇಂದಿನಿಂದಲೇ ಜಾರಿ ಸಾಧ್ಯತೆ

12:22 AM Dec 04, 2022 | Team Udayavani |

ಉಡುಪಿ: ಜನರ ತೀವ್ರ ವಿರೋಧದ ನಡುವೆಯೂ ಸದ್ದಿಲ್ಲದೇ ಹೆಜಮಾಡಿ ಟೋಲ್‌ನಲ್ಲಿ ವಾಹನಗಳಿಂದ ಹೆಚ್ಚುವರಿ ಶುಲ್ಕ ವಸೂಲಿಗೆ ಮುಂದಾಗಿರುವುದು ಜನಾಕ್ರೋಶಕ್ಕೆ ಕಾರಣ ವಾಗಿದೆ. ಸಾರ್ವಜನಿಕರು ಮತ್ತೆ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

Advertisement

ಜಿಲ್ಲೆಯ ಶಾಸಕರು, ಸಚಿವರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳೂ ಸುರತ್ಕಲ್‌ ಟೋಲ್‌ನ ದರವನ್ನು ಹೆಜಮಾಡಿಯಲ್ಲಿ ಸಂಗ್ರಹಿಸಲು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಇದಾವುದಕ್ಕೂ ಟೋಲ್‌ ಗುತ್ತಿಗೆಯ ಕಂಪೆನಿಯಾಗಲೀ ಅಥವಾ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾಗಲೀ ಬೆಲೆಯೇ ಕೊಡದಿರುವುದೂ ಜನಾಕ್ರೋಶವನ್ನು ಹೆಚ್ಚಿಸಿದೆ.

ಹೆಜಮಾಡಿ ಟೋಲ್‌ ದರ ಪರಿಷ್ಕರಣೆ ವಿಷಯವಾಗಿ ಡಿ. 5ರಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ಸಚಿವ ನಿತಿನ್‌ ಗಡ್ಕರಿಯವರು ವಿಶೇಷ ಸಭೆ ನಡೆಸುವುದಾಗಿ ಶಾಸಕ ಕೆ. ರಘುಪತಿ ಭಟ್‌ ಅವರಿಗೆ ಭರವಸೆ ನೀಡಿದ್ದರು. ಹಾಗೆಯೇ ಡಿ. 3ರಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ, ಇಂಧನ ಸಚಿವ ಸುನಿಲ್‌ ಕುಮಾರ್‌ ಸಹಿತ ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳ ಸಭೆ ನಡೆದಿತ್ತು. ಈ ಸಭೆಯಲ್ಲಿ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭಾಗವಹಿಸಿದ್ದರು.

ಮುಖ್ಯಮಂತ್ರಿಯವರ ಜತೆ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸುವವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರು. ಆದರೂ ಈಗ ಅಧಿಕಾರಿಗಳು ಡಿ. 4ರಿಂದಲೇ ಟೋಲ್‌ ದರವನ್ನು ಹೆಚ್ಚಿಸಲು ಮುಂದಾಗಿರುವುದು ವಿರೋಧಕ್ಕೆ ಕಾರಣವಾಗಿದೆ.

ನಿಯಮದ ಪ್ರಕಾರವೇ ಸೂಕ್ತವಲ್ಲ
60 ಕಿ.ಮೀ. ನಡುವೆ ಮತ್ತೂಂದು ಟೋಲ್‌ ಇರದು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿಯವರೇ ಸಂಸತ್ತಿನಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಜನರ ತೀವ್ರ ಹೋರಾಟದ ಹಿನ್ನೆಲೆಯಲ್ಲಿ ಹೆಜಮಾಡಿ ಹಾಗೂ ಸುರತ್ಕಲ್‌(10 ಕಿ.ಮೀ. ದೂರ)ನಲ್ಲಿದ್ದ ಟೋಲ್‌ ಪೈಕಿ ಸುರತ್ಕಲ್‌ ಟೋಲ್‌ ರದ್ದುಪಡಿಸಲಾಯಿತು. ಆ ಟೋಲನ್ನು ಹೆಚ್ಚುವರಿಯಾಗಿ ಹೆಜಮಾಡಿಯಲ್ಲಿ ವಸೂಲು ಮಾಡಲು ಯೋಚಿಸಲಾಗಿದೆ.

Advertisement

ವಿಚಿತ್ರವೆಂದರೆ ಸಾಸ್ತಾನ ಹಾಗೂ ಹೆಜಮಾಡಿಯ ಮಧ್ಯೆ ಸುಮಾರು 46 ಕಿ.ಮೀ. ಅಂತರವಿದ್ದರೆ, ಹೆಜಮಾಡಿ ಹಾಗೂ ಬ್ರಹ್ಮರ ಕೂಟ್ಲು ಮಧ್ಯೆ ಸುಮಾರು 50 ಕಿ.ಮೀ. ಇದೆ. ಹಾಗೆಯೇ  ಹೆಜಮಾಡಿ ಹಾಗೂ ತಲಪಾಡಿ ಮಧ್ಯೆ ಸುಮಾರು 45 ಕಿ.ಮೀ. ದೂರವಿದೆ. ಈ ದೃಷ್ಟಿಕೋನದಲ್ಲಿ ಎಲ್ಲವೂ 60 ಕಿ.ಮೀ. ವ್ಯಾಪ್ತಿಯಲ್ಲೇ ಇದೆ. ಇವುಗಳೇ ಈಗ ಸರಿಯಾದ ನಿಯಮ ಪಾಲನೆ ಮಾಡದಿರುವಾಗ ಈಗ ಹೆಜಮಾಡಿಯಲ್ಲಿ ಸುರತ್ಕಲ್‌ ಟೋಲ್‌ ಅನ್ನು ವಸೂಲು ಮಾಡಲು ಮುಂದಾಗಿರುವುದು ಸರಿಯಲ್ಲ ಎಂಬುದು ಜನರ ವಾದ.

ಮತ್ತೆ ಬೃಹತ್‌ ಹೋರಾಟಕ್ಕೆ ಸಜ್ಜು
ಸುರತ್ಕಲ್‌ ಟೋಲ್‌ ರದ್ದಾಗಿರುವ ಹಿನ್ನೆಲೆಯಲ್ಲಿ, ಅವೈಜ್ಞಾನಿಕವಾಗಿ ಸುರತ್ಕಲ್‌ ಟೋಲ್‌ ದರವನ್ನು ಹೆಜಮಾಡಿಯಲ್ಲಿ ಸಂಗ್ರಹಿಸಲು ಮುಂದಾಗಿರುವುದನ್ನು ಖಂಡಿಸಿ ಟೋಲ್‌ ವಿರೋಧಿ ಹೋರಾಟ ಸಮಿತಿ ಮತ್ತೆ ಬೃಹತ್‌ ಹೋರಾಟಕ್ಕೆ ಸಜ್ಜಾಗುತ್ತಿದೆ. ಈ ಸಂಬಂಧ ಜಿಲ್ಲಾಢಳಿತಕ್ಕೆ ಸಮಿತಿಯಿಂದ ಮನವಿಯನ್ನೂ ಸಲ್ಲಿಸಲಾಗಿದೆ. ಪರಿಷ್ಕೃತ ಟೋಲ್‌ ದರವನ್ನು ಒಂದೇ ಟೋಲ್‌ನಲ್ಲಿ ಸಂಗ್ರಹಿಸದೇ ಬೇರೆ ಟೋಲ್‌ಗ‌ಳಿಗೂ ವಿಂಗಡಿಸುವಂತೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದರು. ಆದರೆ ಇದಾವುದನ್ನೂ ಲೆಕ್ಕಿಸದೇ ಪ್ರಾಧಿಕಾರದ ಅಧಿಕಾರಿಗಳು ಪರಿಷ್ಕೃತ ದರವನ್ನು ಹೆಜಮಾಡಿಯಿಂದಲೇ ವಸೂಲು ಮಾಡಲು ಮುಂದಾಗಿರುವುದು ಇಡೀ ಜಿಲ್ಲೆಯ ಜನರು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತವನ್ನೂ ಅವಗಣಿಸಿದಂತಾಗಿದೆ. ಅಲ್ಲದೆ ಜಿಲ್ಲಾಡಳಿತ, ಸ್ಥಳೀಯ ಸರಕಾರಗಳ ಆದೇಶಕ್ಕೆ ಬೆಲೆ ಕೊಡಬೇಕೆಂದೇನೂ ಇಲ್ಲ ಎಂಬ ಅಭಿಪ್ರಾಯ ಅಧಿಕಾರಿಗಳದ್ದೇ ಎಂಬುದು ಜನರ ಪ್ರಶ್ನೆ.

ಸುರತ್ಕಲ್‌ನಲ್ಲಿ ಟೋಲ್‌ ಸಂಗ್ರಹವೇ ಆಕ್ರಮವಾಗಿತ್ತು. ಅದನ್ನು ಹೆಜಮಾಡಿಗೆ ವಿಲೀನ ಮಾಡಿರುವುದು ಇನ್ನೊಂದು ಅಕ್ರಮ. ಈ ರೀತಿಯಲ್ಲಿ ಅಕ್ರಮವಾಗಿ ಟೋಲ್‌ ಸಂಗ್ರಹಿಸುವುದಕ್ಕೆ ಇಡೀ ಕರಾವಳಿಯಲ್ಲೇ ವಿರೋಧವಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ಜನರ ಪರವಾದ ತೀರ್ಮಾನ ಕೈಗೊಳ್ಳಬೇಕೆಂಬುದು ಜನರ ಆಗ್ರಹ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next