ಈ ಕುಟುಂಬಗಳು ರಾಷ್ಟ್ರೀಯ ಹೆದ್ದಾರಿ 66ರ ಶಿವನಗರದಲ್ಲಿ ಕಳೆದ ಸುಮಾರು 20 ವರ್ಷಗಳಿಂದ ವಾಸಿಸುತ್ತಿದ್ದವು. ಈ ಕುಟುಂಬಗಳಲ್ಲಿ ಕೆಲವೇ ಮಂದಿಗಷ್ಟೇ ಹಕ್ಕುಪತ್ರ ಲಭಿಸಿತ್ತು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಭೂಸ್ವಾಧೀನವಾದಾಗ ಈ ಕುಟುಂಬಗಳಿಗೆ ಪರಿಹಾರವೂ ದೊರಕಿತ್ತು. ಆದರೆ ಸೂಕ್ತ ನಿವೇಶನ ಇಲ್ಲದೆ ಭೂಸ್ವಾಧೀನಗೊಂಡ ಜಾಗದಲ್ಲಿಯೇ 14 ಕುಟುಂಬಗಳು ವಾಸಿಸುತಿದ್ದವು. ಸೂಕ್ತ ನಿವೇಶನ ನೀಡುವಂತೆ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಹಲವು ಭಾರೀ ಹೋರಾಟ ನಡೆದಿತ್ತು. ಗ್ರಾಮಸಭೆಗಳಲ್ಲೂ ಪ್ರತಿಧ್ವನಿಸಿತ್ತು. ಬಳಿಕ ಸಂತ್ರಸ್ತ ಕುಟುಂಬಗಳಿಗೆ ಪಂಚಾಯತ್ ಬಳಿ ಇರುವ 48 ಸೆಂಟ್ಸ್ ಸರಕಾರಿ ಜಮೀನಿನಲ್ಲಿ ಪ್ರತೀ ಕುಟುಂಬಕ್ಕೂ 2.12 ಸೆಂಟ್ಸ್ ಜಮೀನು ವಿಂಗಡಿಸಿಕೊಡಲಾಗಿತ್ತು.
Advertisement
ಬಸವ ವಸತಿ ಯೋಜನೆಯಲ್ಲಿ ಮನೆಸರಕಾರದ ಬಸವ ವಸತಿ ಯೋಜನೆಯಡಿ ತಲಾ 250 ಚದರ ಅಡಿಗಳ 14 ಮನೆಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ನವಯುಗ ಕಂಪೆನಿಯ 9 ಲಕ್ಷ ರೂ. ಅನುದಾನ ಬಳಸಿ ಒಟ್ಟು ರೂ. 31 ಲಕ್ಷ ವೆಚ್ಚದಲ್ಲಿ ಈ ಮನೆಗಳಿಗೆ ನಿರ್ಮಾಣವಾಗುತ್ತಿದೆ. ಇದರಲ್ಲಿ 6 ಪರಿಶಿಷ್ಟ ಜಾತಿ, ಒಂದು ಅಲ್ಪಸಂಖ್ಯಾತ ಹಾಗೂ ಇತರ ವರ್ಗದ 7 ಕುಟುಂಬಗಳಿವೆ. ಬಸವ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿಯ 6 ಫಲಾನುಭವಿಗಳಿಗೆ ತಲಾ ರೂ. 1.65 ಲಕ್ಷ ಹಾಗೂ ಇತರರಿಗೆ ತಲಾ ರೂ 1.50 ಲಕ್ಷ ಅನುದಾನ ಬಿಡುಗಡೆಯಾಗಲಿದೆ. ಈಗಾಗಲೇ ಪ್ರಥಮ ಹಂತದ ಮೊತ್ತ ಬಿಡುಗಡೆಯಾಗಿದ್ದು, ಬಾಕಿಯಿರುವ ಮೊತ್ತ ಹಂತ ಹಂತವಾಗಿ ಬಿಡುಗಡೆಯಾಗಲಿದೆ. ವಸತಿ ನಿರ್ಮಾಣ ಕಾಮಗಾರಿಯನ್ನು ಉಡುಪಿ ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಡಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಮನೆಗಳು ಪೂರ್ಣಗೊಳ್ಳಲಿವೆ.
ಹೇಗಿರಲಿದೆ ಮನೆ?
ನಿರ್ಮಾಣ ಹಂತದಲ್ಲಿರು ಈ ಮನೆಗಳಲ್ಲಿ ಅಡುಗೆ ಕೋಣೆ, ಹಾಲ್, ಹಾಗೂ ಬೆಡ್‌ರೂಂ ಒಳಗೊಂಡಿದೆ. ಹಿಂದಿನ ಯೋಜನೆ ಪ್ರಕಾರ ಅಡುಗೆ ಕೋಣೆಗೆ ಹೊಂದಿಕೊಂಡು ಶೌಚಾಲಯವೂ ಸೇರಿತ್ತು. ಅಡುಗೆ ಕೋಣೆಯಲ್ಲಿ ಸ್ಥಳಾವಕಾಶ ಕಡಿಮೆಯಾಗುವ ಕಾರಣದಿಂದ ಮನೆ ಹೊರಭಾಗದಲ್ಲಿ ಪ್ರತ್ಯೇಕವಾಗಿ ಶೌಚಾಲಯವನ್ನು ನಿರ್ಮಾಣ ಮಾಡಲಾಗುತ್ತಿದೆ. ಶೌಚಾಲಯ ನಿರ್ಮಾಣಕ್ಕೆ ಪ್ರತ್ಯೇಕವಾಗಿ ಸರಕಾರದಿಂದ ರೂ. 12 ಸಾವಿರ ಲಭ್ಯವಾಗಲಿದ್ದು, ಇದೂ ಫಲಾನುಭವಿಗಳಿಗೆ ದೊರಕಲಿದೆ.