ಪಡುಬಿದ್ರಿ: ಸಮಾಜದ ಕಡು ಬಡವರ ಸಂಕಷ್ಟಗಳಿಗೆ ಯುವ ಜನರು ಸ್ಪಂದಿಸಬೇಕು. ಹಾಗಾದಾಗ ಉತ್ತಮ ಸಮಾಜದ ನಿರ್ಮಾಣವಾಗುವುದಾಗಿ ಮಂಗಳೂರು ಮಹಾನಗರ ಪಾಲಿಕೆಯ ಹಣಕಾಸು ಮತ್ತು ತೆರಿಗೆ ಸಮಿತಿಯ ಅಧ್ಯಕ್ಷೆ ಪ್ರತಿಭಾ ಕುಳಾಯಿ ಅಭಿಪ್ರಾಯಿಸಿದ್ದಾರೆ.
ಅವರು ಹೆಜಮಾಡಿ ಬಿಲ್ಲವರ ಸಂಘದಲ್ಲಿ ಯುವವಾಹಿನಿ ಘಟಕದ 2017 – 18ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜು. 16ರಂದು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ ಮಾತನಾಡಿದರು. ನೂತನ ಅಧ್ಯಕ್ಷ ಮಹೇಂದ್ರ ಸಾಲ್ಯಾನ್ ಮುಂದಿನ ಕಾರ್ಯ ಯೋಜನೆಗಳ ಕುರಿತು ಮಾತನಾಡಿ ಸರ್ವರ ಸಹಕಾರವನ್ನು ಯಾಚಿಸಿದರು. ಅತಿಥಿಗಳಾಗಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ವಿಜಯಕುಮಾರ್ ಕುಬೆವೂರು, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಜಿನ್‌ರಾಜ್ ಬಂಗೇರ, ಯುವವಾಹಿನಿ ಹೆಜಮಾಡಿ ಘಟಕದ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಅಮೀನ್, ಕಾರ್ಯದರ್ಶಿ ಸುನೀತಾ ಎನ್. ಕರ್ಕೇರ ಉಪಸ್ಥಿತರಿದ್ದರು.
ಪದ್ಮನಾಭ ಮರೋಳಿ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಪರಿಸರದ 100ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ 90ಶೇಕಡಾಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಯುವವಾಹಿನಿ ಹೆಜಮಾಡಿ ಘಟಕದ 2016 – 17ನೇ ಸಾಲಿನ ಕಾರ್ಯಕ್ರಮಗಳ ಸವಿನೆನೆಪಿಗಾಗಿ ಶ್ರೀ ನಾರಾಯಣ ಗುರುಗಳಿಗೆ ಸಮರ್ಪಿಸಲಾಗುವ ರಜತ ಪ್ರಭಾವಳಿಗಾಗಿ 1.5ಲಕ್ಷ ರೂ. ಗಳ ಚೆಕ್ಕನ್ನು ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಅಮೀನ್ ಬಿಲ್ಲವರ ಸಂಘದ ಅಧ್ಯಕ್ಷ ಜಿನ್‌ರಾಜ್ ಬಂಗೇರರಿಗೆ ಹಸ್ತಾಂತರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭೋದ್‌ಚಂದ್ರ ಹೆಜ್ಮಾಡಿ ಪ್ರಸ್ತಾವಿಸಿದರು. ಲೋಕೇಶ್ ಅಮೀನ್ ಸ್ವಾಗತಿಸಿದರು. ಮನೋಹರ್ ಹೆಜ್ಮಾಡಿ ಹಾಗೂ ಧೀರಜ್ ಕೋಡಿ ಕಾರ್ಯಕ್ರಮ ನಿರ್ವಹಿಸಿದರು. ಸುನೀತಾ ಎನ್. ಕರ್ಕೇರಾ ವಂದಿಸಿದರು.