Advertisement

ತ್ಯಾಜ್ಯಮಯವಾಗಿರುವ ಹೆಜಮಾಡಿ ಬಂದರು ಪ್ರದೇಶ

09:16 PM Sep 28, 2020 | mahesh |

ಪಡುಬಿದ್ರಿ: ಹೆಜಮಾಡಿ ಬಂದರು ಪ್ರದೇಶ ವ್ಯಾಪ್ತಿಯ ಕಡಲ ತಡಿ ಸಂಪೂರ್ಣ ತ್ಯಾಜ್ಯಮಯವಾಗಿದೆ. ಪ್ಲಾಸ್ಟಿಕ್‌, ಬಾಟಲಿ, ರಬ್ಬರ್‌, ಕಸ ಕಡ್ಡಿಗಳು ಈ ಭಾಗದ ಕಡಲ ತೀರವನ್ನು ಸೇರಿವೆ. ಸರ್ಫಿಂಗ್‌ ತಾಣವೂ ಇಲ್ಲೇ ಸಮೀಪದ ದ. ಕ. ಜಿಲ್ಲೆಯ ಸಸಿಹಿತ್ಲವಿನಲ್ಲಿದ್ದು ಇಲ್ಲಿಗೆ ಬರುತ್ತಿರುವ ಪ್ರವಾಸಿಗರಿಗೆ, ದೇಶ-ವಿದೇಶಗಳಿಂದ ಇಲ್ಲಿಗೆ ಬರುವ ಸರ್ಫಿಂಗ್‌ಪಟುಗಳಿಗೆ ಅಸಹ್ಯವುಂಟು ಮಾಡುತ್ತಿವೆ.

Advertisement

ಉಭಯ ಜಿಲ್ಲೆಗಳ ಗಡಿ ಭಾಗವಾಗಿರುವ ಇಲ್ಲಿಗೆ ಪ್ರತಿ ವರ್ಷ ಮಳೆಗಾಲ ಮುಗಿಯುತ್ತಿದ್ದಂತೆ ಶಾಂಭವಿ ಮತ್ತು ನಂದಿನಿ ಹೊಳೆಗಳ ತ್ಯಾಜ್ಯಗಳು ಭೌಗೋಳಿಕವಾಗಿ ಅಳಿವೆಯ ಮೂಲಕ ಸಮುದ್ರವನ್ನು ಸೇರಿಬಿಡುತ್ತದೆ. ಇದೇ ಮರಳಿ ಹೆಜಮಾಡಿಯ ಭಾಗದಲ್ಲಿ ಶೇಖರಣೆಯಾಗುತ್ತಿದ್ದು, ವಿಲೇವಾರಿಗೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಈ ಬಾರಿ ಮಳೆಗಾಲ ಅತೀ ದೀರ್ಘ‌ವಾಗಿದ್ದು, ಎರಡೆರಡು ಬಾರಿ ಇಲ್ಲಿ ತ್ಯಾಜ್ಯ ಸಂಗ್ರಹಗೊಂಡು ಮರಳಿನಡಿ ಹೂತು ಹೋಗಿದೆ. ಕಳೆದ ವಾರದವರೆಗಿನ ತ್ಯಾಜ್ಯಗಳು ನೆರೆಯ ಸಂದರ್ಭ ಕಡಲತಡಿಯ ಮರಳಿನಡಿ ಹೂತುಹೋಗಿದ್ದು, ಇನ್ನೊಂದು ಮಳೆಗಾಲದಲ್ಲಷ್ಟೇ ಹೊರಸೂಸಬೇಕಿದೆ. ಬಂದರು ಪ್ರದೇಶ ವ್ಯಾಪ್ತಿಯ ಸುಮಾರು 3ಕಿ.ಮೀ.ನಷ್ಟು ಕಡಲತಡಿಯಲ್ಲಿ ಲೋಡುಗಟ್ಟಲೆಯಾಗಿ ಈ ತ್ಯಾಜ್ಯಗಳು ಹರಡಿಕೊಂಡಿವೆ.

ಸ್ವಚ್ಛ ಭಾರತ್‌ ಪರಿಕಲ್ಪನೆಯ ವಿಕಲ್ಪ
ಸ್ವತ್ಛಭಾರತ್‌ ಯೋಜನೆಯನ್ನು ಜನತೆ ಬೆಂಬಲಿಸಿದೆ. ಆದರೂ ಇದರ ವಿಕಲ್ಪವೆನ್ನುವಂತೆ ನಮ್ಮಲ್ಲಿಯೇ ಸಮುದ್ರ ಮತ್ತು ನದಿಗಳಿಗೆ ತ್ಯಾಜ್ಯ ಎಸೆಯುವವರ ಸಂಖ್ಯೆ ಅ ಧಿಕವಾಗಿದ್ದು ವರ್ಷದಿಂದ ವರ್ಷಕ್ಕೆ ತ್ಯಾಜ್ಯ ರಾಶಿ ಹೆಚ್ಚಾಗುತ್ತಲೇ ಇದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮವನ್ನೂ ಕೈಗೊಳ್ಳಬೇಕಿದೆ.

ಮಂತ್ರ ಸರ್ಫ್‌ ಕ್ಲಬ್‌ ನಿರಂತರ ಸ್ವಚ್ಛತಾ ಅಭಿಯಾನ
ಈ ತ್ಯಾಜ್ಯಮಯ ಪ್ರದೇಶವು ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದ್ದರೂ ಇಲ್ಲಿ ನಿರಂತರ ಸರ್ಫಿಂಗ್‌ ನಡೆಸುವ ಮೂಲ್ಕಿಯ ಮಂತ್ರ ಸರ್ಫ್‌ ಕ್ಲಬ್‌ ಈ ಭಾಗದಲ್ಲಿ ವರ್ಷವಿಡೀ ನಿರಂತರ ಸ್ವಚ್ಛತಾ ಅಭಿಯಾನ ನಡೆಸುತ್ತಾ ಬಂದಿದೆ. ಆದರೆ ವರ್ಷ ಪೂರ್ತಿ ತ್ಯಾಜ್ಯ ತೆಗೆದರೂ ಮತ್ತಷ್ಟು ತ್ಯಾಜ್ಯಗಳು ಅಲ್ಲೇ ಉಳಿಯುವಂತಾಗಿದೆ. ಮುಂದಿನ 6 ತಿಂಗಳ ಕಾಲ ಇಲ್ಲಿ ವಿವಿಧ ಸಂಘ ಸಂಸ್ಥೆಗಳ ಜತೆಗೂಡಿ ಸ್ವತ್ಛತಾ ಅಭಿಯಾನ ನಡೆಸಲು ಅವರು ನಿರ್ಧರಿಸಿದ್ದಾರೆ. ಇಲ್ಲಿ ಹೊರ ರಾಜ್ಯ ಮತ್ತು ಜಿಲ್ಲೆಗಳ ಮಂದಿಯೂ ಆಗಾಗ್ಗೆ ಬಂದು ಗುಜುರಿ ಎತ್ತಿ ಮಾರುತ್ತಿದ್ದು ಈ ಎರಡು ತಿಂಗಳಲ್ಲಿ ಹೊನ್ನಾವರದ ರಮೇಶ್‌ ಸುಮಾರು 15,000ರೂ. ಸಂಪಾದಿಸಿದ್ದಾರೆ.

Advertisement

ಅಭಿಯಾನಕ್ಕೆ ಕೈಜೋಡಿಸಿ
ಮುಂದಿನ 6 ತಿಂಗಳಲ್ಲಿ ವಾರಕ್ಕೊಂದು ಬಾರಿ ಆಸಕ್ತ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ತ್ಯಾಜ್ಯ ವಿಲೇವಾರಿಗೆ ಪ್ರಯತ್ನಿಸಲಾಗುವುದು. ಇಲ್ಲಿ ವಿದೇಶೀಯರು ಅ ಧಿಕವಾಗಿ ಆಗಮಿಸುತ್ತಾರೆ. ಹಾಗಾಗಿ ಸ್ವಚ್ಛತಾ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕಿದೆ.
-ಗೌರವ್‌ ಹೆಗ್ಡೆ, ನಿರ್ದೇಶಕರು, ಸರ್ಫಿಂಗ್‌ ಸ್ವಾಮಿ ಫೌಂಡೇಶನ್‌, ಮೂಲ್ಕಿ.

 

Advertisement

Udayavani is now on Telegram. Click here to join our channel and stay updated with the latest news.

Next