Advertisement

ಬಾಲಾದೇವಿ, ಬೆಂಬೆಮ್ ದೇವಿ: ಭಾರತೀಯ ಮಹಿಳಾ ಫುಟ್ಬಾಲ್ ಗೆ ಬಲ ತುಂಬಿದ ನಾರಿಯರು

05:14 PM Apr 07, 2020 | keerthan |

ಭಾರತದ ಮಹಿಳಾ ಫ‌ುಟ್‌ ಬಾಲ್‌ ಗೆ ಸಂಬಂಧಿಸಿ ಇತ್ತೀಚೆಗಷ್ಟೆ ಒಂದು ಮಹತ್ವದ ತಿರುವೊಂದು ಸಿಕ್ಕಿದೆ. ಅದು ಯಾವ ರೀತಿಯೆಂದರೆ ಭಾರತ ತಂಡದ ಫಾರ್ವರ್ಡ್‌ ಆಟಗಾರ್ತಿ, ಮಣಿಪುರದ ಬಾಲಾದೇವಿ ಸ್ಕಾಟ್ಲೆಂಡ್‌ ಪ್ರತಿಷ್ಠಿತ ರೇಂಜರ್ಸ್‌ ಫ‌ುಟ್ಬಾಲ್‌ ಕ್ಲಬ್‌ ನೊಂದಿಗೆ ಸಹಿ ಮಾಡುವುದರ ಮೂಲಕ ವಿದೇಶಿ ಕ್ಲಬ್‌ ಒಂದರ ಜತೆ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು.

Advertisement

ಈ ಮಹತ್ವದ ಬೆಳವಣಿಗೆಯನ್ನು ರೇಂಜರ್ಸ್‌ ಮತ್ತು ಬೆಂಗಳೂರು ಫ‌ುಟ್ಬಾಲ್‌ ಕ್ಲಬ್‌ (ಬಿಎಫ್ಸಿ) ಘೋಷಿಸಿದ್ದು ಬೆಂಗಳೂರಿನಲ್ಲಿ. ಕಾರ್ಯಕ್ರಮದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಬಾಲಾದೇವಿ ಸತತವಾಗಿ ಹೇಳಿದ್ದು ಒಂದೇ ಮಾತು- ಇದು ಭಾರತದ ಮಹಿಳಾ ಫ‌ುಟ್‌ಬಾಲ್‌ಗೆ ಸಂದ ಗೌರವ, ಇದರಿಂದ ಇಲ್ಲಿ ಮಹಿಳೆಯರ ಫ‌ುಟ್ಬಾಲ್‌ ಇನ್ನಷ್ಟು ಬೆಳೆಯುವ ಸಾಧ್ಯತೆ ಇದೆ’ ಎಂದು ತುಂಬಾ ಖುಷಿಯಿಂದ ಹೇಳಿದರು.

ಬಾಲಾದೇವಿ ಸ್ಕಾಟ್ಲೆಂಡ್‌ ಕ್ಲಬ್‌ ಸೇರುವುದರ ಹಿಂದಿನ ವಾರ ಬೆಂಬೆಮ್‌ ದೇವಿಯೂ ಸುದ್ದಿಯಾದರು. ಅವರು ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಮೊತ್ತ ಮೊದಲ ಫ‌ುಟ್ಬಾಲ್‌ ಆಟಗಾರ್ತಿ ಎಂದೆಣಿಸಿಕೊಂಡು ಗಮನ ಸೆಳೆದಿದ್ದರು. ಈ ಎರಡೂ ಬೆಳವಣಿಗೆಗಳು ಭಾರತದಲ್ಲಿ ಮಹಿಳಾ ಫ‌ುಟ್‌ ಬಾಲ್‌ ಪ್ರಗತಿಯನ್ನು ಸಾರಿ ಹೇಳಿದವು. ಸದ್ದಿಲ್ಲದೆ ನಡೆಯುತ್ತಿದ್ದ ಮಹಿಳೆಯರ ಕಾಲ್ಚಳಕದ ಆಟಕ್ಕೆ ಹೊಸ ಆಯಾಮ ಕೊಟ್ಟಿದ್ದವು.

ಭಾರತದಲ್ಲಿ ಮಹಿಳೆಯರ ಫ‌ುಟ್‌ಬಾಲ್‌ ಹೆಜ್ಜೆ ಗುರುತುಗಳು ಬೀಳತೊಡಗಿದ್ದು 1975ರಲ್ಲಿ, ಅಖಿಲ ಭಾರತ ಮಹಿಳಾ ಫ‌ುಟ್‌ ಬಾಲ್‌ ಫೆಡರೇಷನ್‌ ಆರಂಭಗೊಂಡಾಗ. ಆದರೆ 1990ರಲ್ಲಿ ಅಖಿಲ ಭಾರತ ಫ‌ುಟ್‌ ಬಾಲ್‌ ಫೆಡರೇಷನ್‌ ಮಾನ್ಯತೆ ನೀಡುವವರೆಗೆ ಮಹಿಳಾ ಫ‌ುಟ್‌ ಬಾಲ್‌ ಬೆಳಕಿಗೆ ಬರಲಿಲ್ಲ.

Advertisement

ಕೆಲವು ರಾಜ್ಯಗಳು ಲೀಗ್‌ ಪಂದ್ಯಗಳನ್ನು ಮಾತ್ರ ನಡೆಸುತ್ತಿದ್ದುದು ಬಿಟ್ಟರೆ, ಆರಂಭದಲ್ಲಿ ಮಹಿಳೆಯರ ಕಾಳ್ಚಳಕಕ್ಕೆ ವೇದಿಕೆಗಳೂ ಕಡಿಮೆ ಇದ್ದವು. ಆದರೆ ಬೆಳೆಯುತ್ತ ಬೆಳೆಯುತ್ತ ದಕ್ಷಿಣ ಏಷ್ಯಾ, ಏಷ್ಯಾ ಚಾಂಪಿಯನ್‌ಶಿಪ್‌, ಫಿಫಾ ಮಹಿಳೆಯರ ವಿಶ್ವಕಪ್‌, ಒಲಿಂಪಿಕ್ಸ್‌ ಅರ್ಹತಾ ಟೂರ್ನಿ ಮುಂತಾದವುಗಳಲ್ಲಿ ಪಾಲ್ಗೊಳ್ಳಲು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಂತೆ ಸ್ತ್ರೀ ಶಕ್ತಿ ಪ್ರಕಾಶಿಸಿತು.

ಬಲ ತುಂಬಿದ ಲೀಗ್‌
ದೇಶದಲ್ಲಿ ಫ‌ುಟ್‌ಬಾಲ್‌ ಅಂಗಣಕ್ಕೆ ಮಹಿಳೆಯರನ್ನು ಕರೆತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಲೀಗ್‌ಗಳು. ಮಹಿಳೆಯರಿಗಾಗಿ ದೇಶಿ ಟೂರ್ನಿ ಮೊದಲು ಆರಂಭಗೊಂಡದ್ದು 1991ರಲ್ಲಿ. ಮಹಿಳೆಯರ ಫ‌ುಟ್ಬಾಲ್‌ ಚಾಂಪಿಯನ್‌ಶಿಪ್‌ ಹೆಸರಿನಲ್ಲಿ ನಡೆಯುತ್ತಿದ್ದ ಟೂರ್ನಿ ಪುರುಷರ ಸಂತೋಷ್‌ ಟ್ರೋಫಿಗೆ ಸಮಾನವಾಗಿತ್ತು.

ಇದಕ್ಕೂ ಮೊದಲು 1976ರಲ್ಲಿ ಮಣಿಪುರದಲ್ಲಿ ಮಹಿಳೆಯರ ರಾಜ್ಯ ಮಟ್ಟದ ಲೀಗ್‌ ಆರಂಭಗೊಂಡಿತ್ತು. ನೆನಪಿರಲಿ, ಭಾರತ ಮಹಿಳಾ ಫ‌ುಟ್ಬಾಲ್ನಲ್ಲಿ ಹೆಚ್ಚು ಹೆಸರು ಮಾಡಿರುವುದು ಮಣಿಪುರದ ಆಟಗಾರ್ತಿಯರು. 1993ರಲ್ಲಿ ಕೋಲ್ಕತ್ತದಲ್ಲೂ 1998ರಲ್ಲಿ ಮುಂಬೈಯಲ್ಲೂ 1999ರಲ್ಲಿ ಗೋವಾದಲ್ಲೂ ಲೀಗ್‌ ಆರಂಭಗೊಂಡಿತು.

ಡಬ್ಲ್ಯು ಎಫ್ ಪ್ರಭಾವ
2017ರಲ್ಲಿ ಮಹಿಳೆಯರ ಅಖಿಲ ಭಾರತ ಫ‌ುಟ್ಬಾಲ್‌ ಲೀಗ್‌ ಆರಂಭಗೊಂಡದ್ದು ಹೊಸ ಶಕೆಗೆ ನಾಂದಿಯಾಯಿತು. ಮೊದಲ ಆವೃತ್ತಿಯಲ್ಲಿ ಹರಿಯಾಣದ ಅಲಕಾಪುರ, ಪುದುಚೇರಿಯ ಜೆಐಟಿ, ಮಿಜೋರಾಂನ ಐಜ್ವಾಲ್, ಮಹಾರಾಷ್ಟ್ರದ ಎಫ್ ಸಿ ಪುಣೆ ಸಿಟಿ, ಒಡಿಶಾದ ರೈಸಿಂಗ್‌ ಸ್ಟೂಡೆಂಟ್ಸ್‌ ಕ್ಲಬ್, ಮಣಿಪುರದ ಈಸ್ಟರ್ನ್ ನ್ಪೋರ್ಟಿಂಗ್‌ ಯೂನಿಯನ್‌ ಕ್ಲಬ್‌ ಗಳು ಪಾಲ್ಗೊಂಡಿದ್ದವು. ದೆಹಲಿಯಲ್ಲಿ ಟೂರ್ನಿ ನಡೆದಿತ್ತು. ಮುಂದಿನ ಎರಡು ಆವೃತ್ತಿಗಳು ಕ್ರಮವಾಗಿ ಶಿಲ್ಲಾಂಗ್‌ ಮತ್ತು ಲುಧಿಯಾನದಲ್ಲಿ ನಡೆದಿದ್ದವು. ಕಳೆದ ಬಾರಿ 12 ತಂಡಗಳು ಪಾಲ್ಗೊಂಡಿದ್ದರೆ ಈ ಬಾರಿ 13 ತಂಡಗಳಿವೆ.

17 ವರ್ಷದ ಒಳಗಿನ ಮಹಿಳೆಯರ ವಿಶ್ವಕಪ್‌ ಟೂರ್ನಿ ಈ ಬಾರಿ ಭಾರತದಲ್ಲಿ ನಡೆಯಲಿದೆ. ಇದರಿಂದ ದೇಶದ ಮಹಿಳಾ ಫ‌ುಟ್ಬಾಲ್‌ ಕ್ಷೇತ್ರ ಇನ್ನಷ್ಟು ಬಲ ಪಡೆದುಕೊಳ್ಳಲಿದೆ ಎಂಬ ವಿಶ್ವಾಸ ಕ್ರೀಡಾಪ್ರೀಯರಲ್ಲಿ ಮೂಡಿದೆ.

– ಅಭಿ

Advertisement

Udayavani is now on Telegram. Click here to join our channel and stay updated with the latest news.

Next