Advertisement

ಹೆಬ್ಬೆಟ್‌ ರಾಮಕ್ಕಳ ಗೀತ-ಸಂಗೀತ

11:18 AM Feb 16, 2018 | |

“ಈ ಚಿತ್ರಕ್ಕೆ ನಾನು ನಿರ್ಮಾಪಕಿ ಅಲ್ಲ, ಬರೀ ನಟಿ ಅಷ್ಟೇ. ಫೈನಾನ್ಸ್‌ ಸಹ ಮಾಡಿಲ್ಲ …’ ಹಾಗಂತ ಸಮಜಾಯಿಷಿ ಕೊಟ್ಟರು ತಾರಾ. ಹಿರಿಯ ನಿರ್ದೇಶಕ ಎನ್‌.ಆರ್‌. ನಂಜುಂಡೇಗೌಡ ನಿರ್ದೇಶನದ “ಹೆಬ್ಬೆಟ್ಟ್ ರಾಮಕ್ಕ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಅವರು ಸರಸರನೆ ಓಡಾಡುತ್ತಿದ್ದುದನ್ನು ನೋಡಿದವರೊಬ್ಬರು, “ನೀವು ಈ ಸಿನಿಮಾ ನಿರ್ಮಾಪಕಿನಾ?’ ಅಂತ ಪ್ರಶ್ನಿಸಿದರಂತೆ. ತಾರಾ ಅವರೇ ಹೇಳಿಕೊಂಡಂತೆ ಅವರು ಈ ಚಿತ್ರದಲ್ಲಿ ನಟಿ ಅಷ್ಟೇ.

Advertisement

ಆದರೂ ಅವರು ಓಡಾಡಿಕೊಂಡಿದ್ದಕ್ಕೆ ಕಾರಣ, ಅಂದು ಕೇಂದ್ರ ಸಚಿವ ಅನಂತ್‌ ಕುಮಾರ್‌ ಮುಖ್ಯ ಅತಿಥಿಯಾಗಿ ಬಂದಿದ್ದರು. ಪುನೀತ್‌ ರಾಜಕುಮಾರ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು, ಹಿರಿಯ ನಿರ್ದೇಶಕ ಭಗವಾನ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ಧರಾಮಯ್ಯ ಮುಂತಾದವರು ಅಂದು ಮುಖ್ಯ ಅತಿಥಿಯಾಗಿ ಬಂದಿದ್ದರು.

ನಿರ್ಮಾಪಕ ಪುಟ್ಟರಾಜು ಹೊಸಬರಾದ್ದರಿಂದ, ತಾರಾ ಅವರೇ ಮುಂದೆ ನಿಂತಿದ್ದರು. ಅತಿಥಿಗಳನ್ನು ಸ್ವಾಗತಿಸುವದರಿಂದ ಹಿಡಿದು, ಅವರನ್ನು ವೇದಿಕೆ ಮೇಲೆ ಕೂರಿಸಿ, ಅವರಿಗೆ ಗೌರವ ಸಲ್ಲುವವರೆಗೂ ಓಡಾಡಿಕೊಂಡಿದ್ದರು. ಅದೇ ಕಾರಣಕ್ಕೆ ಅವರೇ ಆ ಚಿತ್ರದ ನಿರ್ಮಾಪಕರಿರಬಹುದಾ ಎಂಬ ಪ್ರಶ್ನೆಯೂ ಎದುರಾಯಿತು. ಅದರಿಲಿ, “ಹೆಬ್ಬೆಟ್ಟ್ ರಾಮಕ್ಕ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಬಂದಿದ್ದ ಪುನೀತ್‌ ರಾಜಕುಮಾರ್‌, ಹೆಚ್ಚು ಹೊತ್ತು ಇರಲಿಲ್ಲ.

ತುರ್ತು ಕೆಲಸ ಇರುವುದರಿಂದ, ಹಾಡುಗಳನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿ ಹೋದರು. ಆ ನಂತರ ಮಾತನಾಡಿದ ಅನಂತ್‌ ಕುಮಾರ್‌, ಕನ್ನಡ ಚಿತ್ರರಂಗದ ವತಿಯಿಂದ ದೆಹಲಿಯಲ್ಲಿ ಏನಾದರೂ ಕೆಲಸವಿದ್ದರೆ ಸಂಕೋಚ ಪಡೆದ ತಮ್ಮನ್ನು ಸಂಪರ್ಕಿಸಿ ಎಂದು ಹೇಳಿದರು. “ಕೇಂದ್ರ ಸರ್ಕಾರ ಅಥವಾ ದೆಹಲಿಯಲ್ಲಿ ಚಿತ್ರರಂಗಕ್ಕೆ ಏನಾದರೂ ಕೆಲಸವಿದ್ದರೆ, ದಯವಿಟ್ಟು ಗೋವಿಂದು, ಬಾಬು ಅಥವಾ ತಾರಾ ಅವರ ಮೂಲಕ ಸಂಪರ್ಕಿಸಿ.

ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ, ಏನಾದರೂ ಸಮಸ್ಯೆಗಳಿದ್ದರೆ, ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಪೂರ್ಣ ಪ್ರಯತ್ನಿಸುತ್ತೇನೆ. ಕನ್ನಡ ಚಿತ್ರರಂಗದ ಒಬ್ಬ ಕಾರ್ಯಕರ್ತನಾಗಿ ನಾನು ದೆಹಲಿಯಲ್ಲಿದ್ದೀನಿ ಎಂದು ತಿಳಿದುಕೊಳ್ಳಿ’ ಎಂದು ಕರೆ ನೀಡಿದರು. ಸಾ.ರಾ. ಗೋವಿಂದು ಮಾತನಾಡಿ, “ಒಂದು ಚಿತ್ರ ನಿರ್ಮಿಸುವದಕ್ಕೆ ಈಗ ಎರಡು ಗುಂಡಿಗೆ ಬೇಕು. ಅಷ್ಟೊಂದು ಸಮಸ್ಯೆಗಳನ್ನು ಚಿತ್ರರಂಗ ಎದುರಿಸುತ್ತಿದೆ. ಪೈರಸಿ ವಿರುದ್ಧ ಗೂಂಡಾ ಕಾಯ್ದೆ ಜಾರಿಗೆ ತರುವಲ್ಲಿ ರಾಷ್ಟ್ರಪತಿಗಳ ಅಂಕಿತ ಬೀಳಬೇಕಿದೆ.

Advertisement

ಹಾಗೆಯೇ ಡಬ್ಬಿಂಗ್‌ ವಿಚಾರದಲ್ಲಿ ಸಿಸಿಐನಿಂದ ಮೊಕದ್ದಮೆ ಎದುರಿಸುತ್ತಿದ್ದೇವೆ. ಈ ಎರಡು ವಿಷಯಗಳಲ್ಲಿ ಸಹಾಯ ಮಾಡಿ’ ಎಂದು ಅನಂತ್‌ ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು. ರಾಜೇಂದ್ರ ಸಿಂಗ್‌ ಬಾಬು ಅವರು ಮಾತನಾಡಿ, ಈ ಚಿತ್ರಕ್ಕೆ ತಾರಾ ಅವರಿಗೆ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಸಿಗಲಿ ಎಂದು ಹಾರೈಸಿದರು. ಸಮಾರಂಭದಲ್ಲಿ ನಿರ್ದೇಶಕ ಎನ್‌.ಆರ್‌. ನಂಜುಂಡೇಗೌಡ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಹಲವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next