ನವದೆಹಲಿ: ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಆರೋಗ್ಯ ಸ್ಥಿರವಾಗಿದೆ ಎಂಬ ವೈದ್ಯರ ವರದಿಯ ಹಿನ್ನೆಲೆಯಲ್ಲಿ ಪೊಲೀಸರು ಗುರುವಾರ ಬೆಳಗ್ಗೆ ತಿಹಾರ್ ಜೈಲಿಗೆ ಕರೆದೊಯ್ದಿರುವುದಾಗಿ ವರದಿ ತಿಳಿಸಿದೆ.
ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಿಶೇಷ ಕೋರ್ಟ್ ಡಿಕೆ ಶಿವಕುಮಾರ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಏತನ್ಮಧ್ಯೆ ಡಿಕೆಶಿ ರಕ್ತದೊತ್ತಡ ಹೆಚ್ಚಾಗಿದ್ದರಿಂದ ದೆಹಲಿಯ ಆರ್ ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಡಿಕೆಶಿ ಆರೋಗ್ಯ ಯಥಾಸ್ಥಿತಿಗೆ ಬಂದಿರುವುದಾಗಿ ವೈದ್ಯರು ವರದಿ ನೀಡಿದ್ದರಿಂದ ಪೊಲೀಸರು ತಿಹಾರ್ ಜೈಲಿಗೆ ಕರೆದೊಯ್ದಿದ್ದಾರೆ. ತಿಹಾರ್ ಜೈಲಿನ ಸೆಲ್ ನಂ.7ರಲ್ಲಿ ಡಿಕೆಶಿಯನ್ನು ಇಡಲಾಗಿದೆ ಎಂದು ವರದಿ ವಿವರಿಸಿದೆ.
ಇಂದು ಮಧ್ಯಾಹ್ನ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ನಿನ್ನೆ ಡಿಕೆಶಿ ಪರ ವಕೀಲರಾದ ಅಭಿಷೇಕ್ ಮನುಸಿಂಘ್ವಿ ಜಾಮೀನು ನೀಡಬೇಕೆಂದು ವಾದ ಮಂಡಿಸಿದ್ದರು. ಆದರೆ ಇ.ಡಿ ಪರ ವಕೀಲರಾದ ಕೆಎಂ ನಟರಾಜ್ ಅವರು ಗೈರು ಹಾಜರಾಗಿದ್ದರಿಂದ ವಿಚಾರಣೆಯನ್ನು ಕೋರ್ಟ್ ಗುರುವಾರಕ್ಕೆ ಮುಂದೂಡಿತ್ತು. ಇಂದು ಡಿಕೆಶಿಗೆ ಜಾಮೀನು ಸಿಗುತ್ತೋ ಅಥವಾ ಜೈಲುವಾಸ ಮುಂದುವರಿಯಲಿದೆಯೋ ಎಂಬುದನ್ನು ಕಾದು ನೋಡಬೇಕು.
ಇ.ಡಿ ಮುಂದೆ ಹಾಜರಾದ ಲಕ್ಷ್ಮೀ ಹೆಬ್ಬಾಳ್ಕರ್:
ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗುರುವಾರ ಬೆಳಗ್ಗೆ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಸೆಪ್ಟೆಂಬರ್ 19ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸಮನ್ಸ್ ಜಾರಿ ಮಾಡಿತ್ತು.