Advertisement

ಕ್ರಿಸ್ಮಸ್‌ ರಜೆ, ವಾರಾಂತ್ಯ, ಹೊಸ ವರ್ಷಕ್ಕೆ ಸ್ವಾಗತ:  ಪ್ರವಾಸಿ ತಾಣಗಳಲ್ಲಿ ಜನಸಾಗರ

10:20 PM Dec 31, 2022 | Team Udayavani |

ಬೆಂಗಳೂರು: ಹೊಸ ವರ್ಷದ ಸಂಭ್ರಮ, ಕ್ರಿಸ್ಮಸ್‌ ರಜೆಯ ಲಾಭ, ವಾರಾಂತ್ಯದ ಅನುಕೂಲ… ಈ ಮೂರು ಒಟ್ಟಿಗೆ ಸಿಕ್ಕ ಕಾರಣ ರಾಜ್ಯದ ಬಹುತೇಕ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿವೆ.

Advertisement

ರಾಜ್ಯದ ಕರಾವಳಿ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಮಲೆನಾಡು ಜಿಲ್ಲೆಗಳ ಪ್ರವಾಸಿ ತಾಣಗಳಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಆದರೆ ಬೆಂಗಳೂರು ಸನಿಹದ ನಂದಿ ಗಿರಿಧಾಮಕ್ಕೆ ಪ್ರವಾಸಿಗರನ್ನು ನಿಷೇಧಿಸಿದ ಪರಿಣಾಮ ಬಣಗುಡುತ್ತಿತ್ತು.

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರಾ, ಕೆಮ್ಮಣ್ಣುಗುಂಡಿ, ಕುದುರೆಮುಖ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಲಗ್ಗೆ ಇಟ್ಟಿದ್ದರು. ಶನಿವಾರ ಮಧ್ಯಾಹ್ನದೊಳಗೆ ಬರೋಬ್ಬರಿ ಒಂದು ಸಾವಿರ ವಾಹನಗಳು ಗಿರಿ ಪ್ರದೇಶಕ್ಕೆ ತೆರಳಿದ್ದು, ಜನ ಜಾತ್ರೆ ನೆರೆದಿತ್ತು. ವಿವಿಧೆಡೆಗಳಿಂದ ಆಗಮಿಸಿದ ಪ್ರವಾಸಿಗರು ಇಲ್ಲಿನ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಂಡು ಖುಷಿಪಟ್ಟರು.

ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಶ್ರೀರಂಭಾಪುರಿ ಪೀಠ, ಕಳಸೇಶ್ವರ ದೇವಸ್ಥಾನ ಮತ್ತಿತರ ಧಾರ್ಮಿಕ ಕ್ಷೇತ್ರಗಳಿಗೂ ಭಕ್ತರ ದಂಡು ಲಗ್ಗೆ ಇರಿಸಿದ್ದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಅತ್ತ ಹಂಪಿಯಲ್ಲೂ ಪ್ರವಾಸಿಗರ ದಂಡು ಹೆಚ್ಚಾಗಿತ್ತು. ಎರಡು ಮೂರು ದಿನಗಳಿಂದ ರಾಜ್ಯ, ಹೊರ ರಾಜ್ಯಗಳ ಮತ್ತು ವಿದೇಶಿ ಜನರು ಹಂಪಿಗೆ ಆಗಮಿಸಿದ್ದಾರೆ. ಹಂಪಿ ಮತಂಗ ಪರ್ವತ, ಸಾಸಿವೆಕಾಳು ಗಣಪತಿ ದೇವಾಲಯ ಹಾಗೂ ಹೇಮಕೂಟದ ಆವರಣದಲ್ಲಿ ಸೇರಿದ್ದ ಸಹಸ್ರಾರು ದೇಶ-ವಿದೇಶಿ ಪ್ರವಾಸಿಗರು, ವರ್ಷದ ಕೊನೆಯ ಸೂರ್ಯಾಸ್ತ ವೀಕ್ಷಣೆ ಮಾಡಿ ಹಳೇ ವರ್ಷಕ್ಕೆ ವಿದಾಯ ಹೇಳಿದರು.

Advertisement

ಮೈಸೂರು ಸುತ್ತಮುತ್ತಲಿನ ಪ್ರದೇಶಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದರು. ಅರಮನೆ ಆವರಣದಲ್ಲಿ ಪ್ರವಾಸಿಗರು ಶನಿವಾರ ಕಿಕ್ಕಿರಿದು ನೆರೆದಿದ್ದರು. ಅರಮನೆಯ ಸುತ್ತಮುತ್ತ ಹೆಚ್ಚಿನ ವಾಹನಗಳ ದಟ್ಟಣೆ ಕಂಡು ಬಂದಿತು. ಮೃಗಾಲಯದ ವೀಕ್ಷಣೆಗೂ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಶನಿವಾರ ಆಗಮಿಸಿದ್ದರು.

ಕೊಲ್ಲೂರಿನಲ್ಲಿ ದಾಖಲೆ ಸಂಖ್ಯೆಯ ಭಕ್ತರು

ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಶನಿವಾರ ಸಹಸ್ರಾರು ಭಕ್ತರು ಶ್ರೀ ದೇವಿಯ ದರ್ಶನಕ್ಕೆ ಆಗಮಿಸಿದ್ದರು. ಶಾಲಾ ಶೈಕ್ಷಣಿಕ ಪ್ರವಾಸದ ಮಕ್ಕಳು ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ ಸುಮಾರು 15,000 ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ನೂಕುನುಗ್ಗಲು ಆಗದಂತೆ ವಿಶೇಷ ಕ್ರಮ ಕೈಗೊಳ್ಳಲಾಗಿತ್ತು.

ಕರಾವಳಿಯಲ್ಲೂ ಜನ

ಕರಾವಳಿ ಭಾಗದ ಮಂಗಳೂರು, ಉಡುಪಿ, ಕಾರವಾರ, ಮಲ್ಪೆ ಸೇರಿದಂತೆ ಸಮುದ್ರ ತೀರ ಭಾಗಗಳಲ್ಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ವರ್ಷದ ಕಡೆಯ ಸೂರ್ಯಾಸ್ತ ವೀಕ್ಷಿಸಿ ಸಂಭ್ರಮಿಸಿದರು. ಪ್ರಸಕ್ತ ಕಳೆದ ಎರಡು ಮೂರು ವರ್ಷ ಕೊರೊನಾ ಬಾಧಿಸಿದ್ದರಿಂದ ಶಾಲಾ ಮಕ್ಕಳ ಪ್ರವಾಸಕ್ಕೆ ಅಡ್ಡಿಯಾಗಿತ್ತು. ಪ್ರಸಕ್ತ ವರ್ಷ ರಾಜ್ಯದ ನಾನಾ ಕಡೆಗಳಿಂದ ಶಾಲಾ ಮಕ್ಕಳು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ದರ್ಶನ ಪಡೆಯುತ್ತಿರುವುದರಿಂದ ಪ್ರತಿನಿತ್ಯ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹೊಸ ವರ್ಷಾಚರಣೆ ಸಮಯದಲ್ಲಿ ಭಕ್ತರು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲು ಆಗಮಿಸುತ್ತಿದ್ದು, ನಾಡಿನ ಜನತೆಗೆ ಪೂಜ್ಯರು ಶುಭಕೋರಿದ್ದಾರೆ.

ಇನ್ನುಳಿದಂತೆ ಉಡುಪಿ ಶ್ರೀಕೃಷ್ಣ ಮಠ, ಕಟೀಲು ದೇಗುಲ, ಸುಬ್ರಹ್ಮಣ್ಯ ಮತ್ತಿತರ ಧಾರ್ಮಿಕ ಸ್ಥಳಗಳು, ಪ್ರವಾಸಿ ತಾಣಗಳಲ್ಲಿ ಕೂಡ ಭಾರೀ ಜನಸಂದಣಿ ಕಂಡುಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next