Advertisement
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ದಟ್ಟಣೆ, ಕಾರ್ಖಾನೆಗಳು ಉಗುಳುವ ಹೊಗೆ, ಕಾಂಕ್ರೀಟ್ ಕಾಡು ಮತ್ತಿತರ ಕಾರಣಗಳು ಹಾಗೂ ಮಳೆ ಬಿದ್ದ ಅವಧಿಯಲ್ಲಿ ಸಾಕಷ್ಟು ಅಂತರ ಇವೆಲ್ಲದರಿಂದ ವರ್ಷದಿಂದ ವರ್ಷಕ್ಕೆ ದಾಖಲೆ ಪ್ರಮಾಣದ ಉಷ್ಣಾಂಶ ಕಂಡುಬರುತ್ತಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಮುದ್ರದ ಕಡೆಯಿಂದ ಗಾಳಿ ಬೀಸಬೇಕಿತ್ತು. ಆದರೆ, ಗಾಳಿ ಬರುತ್ತಿಲ್ಲ. ಬಂದರೂ ನಗರದ ಒಳಗೆ ಬರಲು ಕಟ್ಟಡಗಳು, ಹೊಗೆ ತಡೆಯೊಡ್ಡುತ್ತಿವೆ. ಈ ಮಧ್ಯೆ ಬೇಸಗೆ ಕಾಲವಾಗಿದ್ದರಿಂದ ಬಿಸಿಲಿನ ಧಗೆ ಹೆಚ್ಚುತ್ತಿದೆ. ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಹೆಚ್ಚು – ಕಡಿಮೆ ಇದ್ದರೆ ಅಷ್ಟೇನೂ ಸಮಸ್ಯಾತ್ಮಕವಲ್ಲ. ಆದರೆ, ಬೆಂಗಳೂರು ಸಹಿತ ರಾಜ್ಯದಲ್ಲಿ ಉಷ್ಣಾಂಶ ವಿಪರೀತಕ್ಕೆ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಎಸ್.ಎಂ. ಮೆಟ್ರಿ ಹೇಳುತ್ತಾರೆ. ಉಷ್ಣಾಂಶ ಹೆಚ್ಚು ದಾಖಲಾಗುವುದಕ್ಕೆ ಬರೀ ಬಿಸಿಲು ಮಾತ್ರ ಪರಿಗಣನೆಗೆ ಬರುವುದಿಲ್ಲ. ಯಾವ ಭಾಗದಲ್ಲಿ ಮೋಡಗಳಿವೆ? ಗಾಳಿ ಯಾವ ದಿಕ್ಕಿನಿಂದ ಬೀಸುತ್ತಿದೆ? ವಾತಾವರಣದಲ್ಲಿ ತೇವಾಂಶ ಇಲ್ಲದಿರುವುದೂ ಮುಖ್ಯವಾಗುತ್ತದೆ. ಸಮುದ್ರದ ಕಡೆಯಿಂದ ಗಾಳಿ ಬೀಸಿದರೆ, ವಾತಾವರಣದಲ್ಲಿ ತೇವಾಂಶ ಇರುತ್ತದೆ. ಆದರೆ, ಆ ಸೂಚನೆಗಳು ಕಾಣಿಸುತ್ತಿಲ್ಲ ಎಂದು ಹವಾಮಾನ ಇಲಾಖೆಯ ನಿವೃತ್ತ ನಿರ್ದೇಶಕ ಪುಟ್ಟಣ್ಣ ಅಭಿಪ್ರಾಯಪಡುತ್ತಾರೆ.
ರಾಜ್ಯದ ಇತರೆಡೆಯಂತೆ ಕರಾವಳಿಯಲ್ಲಿಯೂ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಗಾಳಿ ಕಡಿಮೆ ಇರುವುದರಿಂದ ವಿಪರೀತ ಸೆಕೆ ಇದೆ. ರಾತ್ರಿ ವೇಳೆ ಮೋಡ ಕಾಣಿಸಿಕೊಂಡರೂ ಉಷ್ಣತೆಯಲ್ಲಿ ಹೆಚ್ಚು ಇಳಿಕೆಯಾಗುತ್ತಿಲ್ಲ. ರವಿವಾರ ಮಂಗಳೂರಿನಲ್ಲಿ 35.9 ಡಿ.ಸೆ. ತಾಪಮಾನ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 3 ಡಿ.ಸೆ. ಹೆಚ್ಚಾಗಿದೆ. ಕನಿಷ್ಠ ತಾಪಮಾನ 25.2 ಡಿ.ಸೆ. ದಾಖಲಾಗಿದ್ದು, ಇದೂ ಸಾಮಾನ್ಯಕ್ಕಿಂತ 2 ಡಿ.ಸೆ. ಹೆಚ್ಚಾಗಿದೆ.