ಬೀದರ: ಕೋವಿಡ್ ರಣಕೇಕೆಯಿಂದ ತಲ್ಲಣಗೊಂಡಿರುವ ಸೂರ್ಯನಗರಿ ಬೀದರನ ಜನತೆಯನ್ನು ಈಗ ಕೆಂಡದಂಥ ಬಿಸಿಲು ಕಂಗೆಡುವಂತೆ ಮಾಡಿದೆ.
ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ 40 ರಿಂದ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದ್ದು, ಸೋಂಕಿನ ಆತಂಕದ ನಡುವೆ ಜೀವಿಸುತ್ತಿರುವ ಜನರಿಗೆ ಬಿಸಿಲಿನ ಶಾಖ ಶಾಕ್ ನೀಡುತ್ತಿದೆ. ಮುಂಗಾರು ಪೂರ್ವ ಮಳೆ ಕೊರತೆ ಪರಿಣಾಮ ಬೀದರನಲ್ಲಿ ಉಷ್ಣಾಂಶ ಏರುತ್ತಿದ್ದು, ಜನ ಸೆಖೆಗೆ ತತ್ತರಿಸುವಂತಾಗಿದೆ. ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ 55 ದಿನಗಳ ಕಾಲ ಮನೆಯಲ್ಲೇ ಗೃಹ ಬಂಧಿ ಯಾಗಿದ್ದ ಸಾರ್ವಜನಿಕರು ಈಗ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಹೊರಗೆ ಬರುತ್ತಿದ್ದು ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಆದರೆ, ಈಗ ಸೂರ್ಯನ ಪ್ರಖರತೆಯಿಂದಾಗಿ ಬಸವಳಿಯುವಂತೆ ಆಗಿದೆ.
ಬೀದರ ಜಿಲ್ಲೆಯಲ್ಲಿ ಸೋಮವಾರ ಗರಿಷ್ಠ 42 ಮತ್ತು ಕನಿಷ್ಠ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿ ಬಿಸಿ ಗಾಳಿ ಬೀಸುತ್ತಿದೆ. ಜಿಲ್ಲೆಯಲ್ಲಿ ರವಿವಾರ ಗರಿಷ್ಠ 41.4, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ವರದಿಯಾಗಿತ್ತು. ಬೆಳಗ್ಗೆ ಎಂಟು ಗಂಟೆಯಿಂದಲೇ ಬಿಸಿಲಿನ ಜಳ ಅನುಭವಕ್ಕೆ ಬರುತ್ತಿದ್ದು, ಸಂಜೆ ಆರು ಗಂಟೆಯಾದರೂ ಬಿಸಿಯಾದ ವಾತಾವರಣ ಇರುತ್ತದೆ. ಬಿಸಿ ಗಾಳಿ ಬೀಸುವಿಕೆ ಇನ್ನೂ ಮುಂದುವರಿಯುವ ಲಕ್ಷಣಗಳಿವೆ. ಖಡಕ್ ಬಿಸಿಲಿಗೆ ಭೂಮಿ ಕಾದು ಕೆಂಡದಂತಾಗಿದ್ದು, ರೈತರು ಹೊಲಕ್ಕೆ ಹೋಗಲು ಸಹ ಆಗುತ್ತಿಲ್ಲ. ಜಿಲ್ಲೆಗೆ ಮರಳಿರುವ ವಲಸೆ ಕಾರ್ಮಿಕರು ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದು ಬಿಸಿಲಿನಲ್ಲಿ ಕೆಲಸಕ್ಕೂ ಹೋಗಲು ಹಿಂಜರಿಯುವಂತಾಗಿದೆ. ಕುಡಿಯುವ ನೀರಿಗಾಗಿ ಪ್ರಾಣಿಪಕ್ಷಿಗಳು ಪರದಾಡುವಂತಾಗಿದೆ.
ಬಿಸಿಲ ತಾಪದಿಂದ ಬಸವಳಿದು ದಾಹ ತಣಿಸಿಕೊಳ್ಳಲು ಐಸ್‌ಕ್ರೀಂ, ಜ್ಯೂಸ್ ಸೇರಿದಂತೆ ಪಾನೀಯಗಳ ಮೊರೆ ಹೋಗುತ್ತಿದ್ದರು. ಆದರೆ, ಕೋವಿಡ್ ಸೋಂಕಿನ ಭೀತಿಯಿಂದ ಇದರಿಂದಲೂ ಜನ ದೂರ ಉಳಿಯುತ್ತಿದ್ದು, ಎಳನೀರಿಗೆ ಬೇಡಿಕೆ ಹೆಚ್ಚಿದೆ. ಅಷ್ಟೇ ಅಲ್ಲ ಕೆಮ್ಮು, ಶೀತ ಇನ್ನಿತರ ಕಾಯಿಲೆ ಭೀತಿ ಕಾರಣ ಎಸಿ, ಕೂಲರ್ ಬಳಕೆ ಸಹ ಕಡಿಮೆ ಮಾಡುತ್ತಿದ್ದಾರೆ. ಮೇ ತಿಂಗಳ ಅಂತ್ಯದವರೆಗೆ ಬಿಸಿಲಿನ ಪ್ರಖರತೆ ಹೀಗೇ ಮುಂದುವರಿಯುವ ಸಾಧ್ಯತೆಯಿದ್ದು, ಜನ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಕಚೇರಿ ಸಮಯ ಬದಲಿಲ್ಲ : ಬೇಸಿಗೆ ಬಿಸಿಲಿನ ತಾಪ ಹೆಚ್ಚಳ ಹಿನ್ನಲೆಯಲ್ಲಿ ಪ್ರತಿ ವರ್ಷ ಕಲ್ಯಾಣ ಕರ್ನಾಟಕ ಭಾಗದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ ಆಗುತ್ತಿತ್ತು. ಬೆಳಗ್ಗೆಯೇ ಕಚೇರಿಗಳು ಆರಂಭವಾಗುತ್ತಿದ್ದವು. ಆದರೆ, ಈ ಬಾರಿ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಕೊರೊನಾ ಸೋಂಕು ನಿಯಂತ್ರಣ ಕರ್ತವ್ಯದಲ್ಲಿ ತೊಡಗಿದ್ದರಿಂದ ಕಚೇರಿ ಅವಧಿ ಸಹ ಬದಲಿಸಿಲ್ಲ. ಹಾಗಾಗಿ ಬಿಸಿಲಿನ ತಾಪಕ್ಕೆ ಕರ್ತವ್ಯ ನಿರತ ನೌಕರರು ಕಂಗೆಡುವಂತೆ ಮಾಡಿದೆ
-ಶಶಿಕಾಂತ ಬಂಬುಳಗೆ